ಕಲಬುರಗಿ | ಕಸದಲ್ಲಿ ನಾಡಪಿಸ್ತೂಲ್, 3 ಗುಂಡು ಪತ್ತೆ : ಪ್ರಕರಣ ದಾಖಲು
Update: 2025-10-15 23:43 IST
ಕಲಬುರಗಿ : ಟೈಲರ್ ಅಂಗಡಿಯೊಂದರ ಬಟ್ಟೆಯ ಚಿಂದಿಯಲ್ಲಿ ನಾಡಪಿಸ್ತೂಲ್, ಒಂದು ಜೀವಂತ, ಎರಡು ನಿಷ್ಕ್ರಿಯ ಗುಂಡುಗಳು ಪತ್ತೆಯಾಗಿರುವ ಘಟನೆ ಕಾಳಗಿ ತಾಲ್ಲೂಕಿನ ಚಿಂಚೋಳಿ (ಎಚ್) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಟೈಲರ್ ವೊಬ್ಬರು ತನ್ನ ಶಾಪ್ ಅನ್ನು ಸ್ವಚ್ಛಗೊಳಿಸಿ, ಕಸಕ್ಕೆ ಬೆಂಕಿ ಹಚ್ಚಿದ್ದರು. ಈ ವೇಳೆ ಬೆಂಕಿಯಲ್ಲಿ ಗುಂಡೊಂದು ಸಿಡಿದಿದ್ದು, ಬಳಿಕ ಬೆಂಕಿಯನ್ನು ಆರಿಸಿ ಕಸವನ್ನು ಪರೀಕ್ಷಿಸಿದಾಗ ನಾಡಪಿಸ್ತೂಲ್, 3 ಗುಂಡು ಪತ್ತೆಯಾಗಿವೆ. ಈ ಕುರಿತು ಟೇಲರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬೆರಳಚ್ಚು ಘಟಕದ ತಜ್ಞರು, ಶ್ವಾನದಳದ ಸಿಬ್ಬಂದಿ ಬಂದು ತಪಾಸಣೆ ನಡೆಸಿದ್ದಾರೆ. ಈ ಕುರಿತು ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.