×
Ad

ಕಲಬುರಗಿ | ಒಳ ಮೀಸಲಾತಿಗಾಗಿ ಸಚಿವ ಸಂಪುಟದ ಉಪ ಸಮಿತಿ ರಚಿಸುವಂತೆ ಆಗ್ರಹಿಸಿ ಪ್ರತಿಭಟನೆ

ನ್ಯಾ.ನಾಗಮೋಹನದಾಸ್ ವರದಿ ದಹಿಸಿ ಬಲಗೈ ಸಮುದಾಯದ ಮುಖಂಡರಿಂದ ಆಕ್ರೋಶ

Update: 2025-08-14 19:50 IST

ಕಲಬುರಗಿ: ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ಶೇ.1 ರಷ್ಟು ಮೀಸಲಾತಿ ನಿಗದಿಪಡಿಸಿರುವುದನ್ನು ರದ್ದುಪಡಿಸಿ, ಒಳ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳ ಮೀಸಲಾತಿ ರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಗುರುವಾರ ನಗರದ ಜಗತ್ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ನ್ಯಾ.ನಾಗಮೋಹನದಾಸ್ ಅಧ್ಯಕ್ಷತೆಯ ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುವುದಲ್ಲದೇ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಬಲಗೈ ಸಮುದಾಯದ ಜನ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದಲ್ಲದೇ, ಶೇ.1 ರಷ್ಟು ಮೀಸಲಾತಿ ನಿಗದಿಪಡಿಸಿರುವುದನ್ನು ಖಂಡಿಸಿದರು. ಇದೇ ವೇಳೆಯಲ್ಲೇ ನ್ಯಾ.ನಾಗಮೋಹನದಾಸ್ ವರದಿ ದಹಿಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸದರಿ ವರದಿಯು ಅವೈಜ್ಞಾನಿಕವಾಗಿ ಕೂಡಿದ್ದಲ್ಲದೆ ಪಕ್ಷಪಾತದಿಂದ ಒಳಗೊಂಡಿದೆ. ಪ್ರತಿ ಗಣತಿದಾರರಿಗೆ ಟ್ಯಾಬ್ ಗಳ ನೀಡದಿರುವುದು, ಸಮೀಕ್ಷೆ ಪ್ರಾರಂಭದ ವೇಳೆಯಲ್ಲಿ ಪಡಿತರ ಚೀಟಿ ಲಿಂಕ್ ಪಡೆದಿದ್ದು, ಪಡಿತರ ಚೀಟಿಯಲ್ಲಿ ಹೆಸರಿಲ್ಲದವರನ್ನು ಸಮೀಕ್ಷೆಯಲ್ಲಿ ದಾಖಲಿಸಿರುವುದಿಲ್ಲ. ರಾಜ್ಯದ ಯಾವುದೇ ನಗರ, ಸ್ಥಳೀಯ ಸಂಸ್ಥೆಗಳಲ್ಲಿ, ಗ್ರಾಮ ಪಂಚಾಯತ್ ಗಳಲ್ಲಿ ಒಂದೇ ಒಂದು ಬೂತ್ ಕೂಡ ಸ್ಥಾಪಿಸಿಲ್ಲ. ಹೀಗೆ ಜನಸoಖ್ಯಾ ಬೆಳವಣಿಗೆ ದರವನ್ನು ಕಡಿಮೆ ನಮೂದಿಸಿಕೊಂಡು ಬಲಗೈ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ಅಲ್ಲದೆ, ಬಲಗೈ ಸಮುದಾಯದ ವತಿಯಿಂದ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಸಮಿತಿ ಹೆಚ್ಚಿನ ಗಮನ ನೀಡದೆ ನಿರ್ಲಕ್ಷ್ಯ ವಹಿಸಿದೆ. ಹಾಗಾಗಿ ಸರಕಾರ ಸಂಪುಟದ ಉಪ ಸಮಿತಿಯನ್ನು ರಚಿಸಿ ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡರಾದ ಪ್ರಕಾಶ ಮೂಲಭಾರತಿ, ಮರಿಯಪ್ಪ ಹಳ್ಳಿ, ಬಸಣ್ಣ ಸಿಂಗೆ, ಗುಂಡಪ್ಪ ಲಂಡನಕರ, ಅರ್ಜುನ ಭದ್ರೆ, ಹಣಮಂತ ಬೋಧನಕರ, ದಿನೇಶ ದೊಡ್ಡಮನಿ, ಮಲ್ಲಪ್ಪ ಹೊಸಮನಿ,ದೇವೆಂದ್ರ ಸಿನ್ನೂರ, ಎ.ಬಿ.ಹೊಸಮನಿ, ವಿಶಾಲದರ್ಗಿ, ಗಣೇಶ ವಳಕೇರಿ, ಭೀಮರಾವ ಟಿ.ಟಿ., ಮಹಾಂತಪ್ಪ ಸಂಗಾವಿ, ಅರ್ಜುನ ಗೊಬ್ಬರ, ರಮೇಶ ಪಟ್ಟೇದಾರ, ಅಂಬಾರಾಯ ಅಷ್ಟಗಿ, ಬಾಬು ಒಂಟಿ, ರಾಜು ಜಾನೆ, ಚಂದ್ರಶೇಖರಹರನಾಳ,ಮಹಾಂತೇಶ ಬಡದಾಳ, ಶ್ರೀನಿವಾಸ ಖೇಳಗಿ, ಧರ್ಮಣ್ಣಾ ಇಟಗಾ, ವಿಠೋಬಾ ಎಂ.ಕೆ., ಮರೆಪ್ಪ ಮೇತ್ರೆ, ಅಶ್ವಿನ ಸಂಕಾ, ಸಂತೋಷ ಹಾದಿಮನಿ, ಅರುಣ ಭರಣಿ, ಮೈಲಾರಿ ದೊಡ್ಡಮನಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News