×
Ad

ಕಲಬುರಗಿ | ಸ್ಲಂ ಘೋಷಣೆ ವಿಳಂಬ ಖಂಡಿಸಿ ನಿವಾಸಿಗಳಿಂದ ಧರಣಿ

Update: 2025-09-10 20:49 IST

ಕಲಬುರಗಿ: ಕಲಬುರಗಿ ಮತ್ತು ಯಾದಗಿರಿ ನಗರದಲ್ಲಿರುವ ಸ್ಲಂ ಘೋಷಣೆಗಳಿಗೆ ಅರ್ಜಿ ಸಲ್ಲಿಸಿ ಮೂರು ವರ್ಷಗಳು ಕಳೆದರೂ ಘೋಷಣೆ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಸ್ಲಂ ಘೋಷಣೆ ಮಾಡಿ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕದ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ನಿರಂತರ ಧರಣಿ ನಡೆಸಿದರು.

ಮಂಗಳವಾರ ನಗರದ ಸ್ಲಂ ಬೋರ್ಡ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಕಲಬುರಗಿಯಲ್ಲಿ ಅಘೋಷಿತ ಸ್ಲಂಗಳಾದ ರಾಮ ನಗರ ಭಾಗ-2, ಸಂಜು ನಗರ ಭಾಗ-2 ಮತ್ತು ಯಾದಗಿರಿ ಅಘೋಷಿತ ಸ್ಲಂಗಳಾದ ಮೌನೇಶ್ವರ ನಗರ, ಮದನಪೂರ ಭಾಗ-2, ತಪ್ಪಡಗೇರಾ, ಗಂಗಾನಗರ ಸ್ಲಂಗಳನ್ನು ಸ್ಲಂ ಎಂದು ಘೋಷಣೆ ಮಾಡದೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತಕ ಶ್ರೀಧರ ಸಾರವಾಡ ಮತ್ತು ದೇವಿಂದ್ರ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ರಾಜಕೀಯ ಪ್ರಭಾವದಿಂದ ಸ್ಲಂ ಜನರ ಮೇಲೆ ದರ್ಪ ತೋರುತ್ತಿದ್ದಾರೆ. ಬೋರ್ಡಿಗೆ ಬಂದ ಮೇಲೆ ಒಂದೇ ಒಂದು ಸ್ಲಂ ಘೋಷಣೆ ಆಗಿರುವುದಿಲ್ಲ. ಒಂದು ಸ್ಲಂಗೂ ಭೇಟಿ ನೀಡಿ, ಅಲ್ಲಿನ ಮೂಲಭೂತ, ಸಮಸ್ಯೆಗಳನ್ನು ಪರಿಶೀಲಿಸಿಲ್ಲ. ಕಲಬುರಗಿ ಸ್ಲಂಗಳಿಗೆ ಸಂಬಂಧಪಟ್ಟಂತೆ ಘೋಷಣೆ ಬಗ್ಗೆ ವಿಚಾರಿಸಿದರೆ, ಆ ಸ್ಲಂಗಳ ಭೂಮಿ ತಕರಾರು ಇದೆ ಎಂದು ಸುಳ್ಳು ಸೃಷ್ಟಿ ಮಾಡಿ ಸ್ಲಂ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿ ರೇಣುಕಾ ಸರಡಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣ ಇಂತಹ ಧೋರಣೆ ಹೊಂದಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಶೀಘ್ರದಲ್ಲೇ ಅಘೋಷಿತ ಸ್ಲಂಗಳನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಗೌರಮ್ಮ ಮಾಕಾ, ಹಣಮಂತ ಶಹಾಪುರಕರ್, ಶರಣು ಕಣ್ಣಿ ಸೇರಿದಂತೆ ಹಲವು ನಿವಾಸಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News