×
Ad

ಕಲಬುರಗಿ | ಐಐಟಿಗಳಲ್ಲಿ ಐದು ವಾರಗಳ ತರಬೇತಿಗೆ ಶರಣಬಸವ ವಿವಿಯ ಏಳು ಅಧ್ಯಾಪಕರು ಆಯ್ಕೆ

Update: 2025-06-25 21:28 IST

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ (ಸಹ-ಶಿಕ್ಷಣ) (ಅಪ್ಪಾ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ) ನಿಕಾಯದ ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಗಳ ಏಳು ಅಧ್ಯಾಪಕರು ಬಾಂಬೆ ಮತ್ತು ಕಾನ್ಪುರದಲ್ಲಿರುವ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಗಳಲ್ಲಿ ಸೆಂಟರ್ ಫಾರ್ ಇಂಜಿನಿಯರಿಂಗ್ ಎಜುಕೇಶನ್ ಎಕ್ಸಲೆನ್ಸ್ (ಸಿಇಇಇ) ಅಡಿಯಲ್ಲಿ ಐದು ವಾರಗಳ ಮುಂದುವರಿದ ಶಿಕ್ಷಣ ಮತ್ತು ನವೀನ ಬೋಧನಾ ಕಲಿಕೆಗೆ ಆಯ್ಕೆಯಾಗಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಇಂಜಿನಿಯರಿಂಗ್ (ಸಹ-ಶಿಕ್ಷಣ) ನಿಕಾಯದ ಡೀನ್ ಪ್ರೊ.ಶಿವಕುಮಾರ ಜವಳಿಗಿ ಅವರು, ಸಿಇಇಇಯಿಂದ ಬಂದ ಪತ್ರಿಕಾ ಪ್ರಕಟಣೆಯಲ್ಲಿ, ಎಐಸಿಟಿಇ ಬೆಂಬಲಿತ ಈ ಉನ್ನತ ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಏಳು ಅಧ್ಯಾಪಕರಲ್ಲಿ ಮೆಕ್ಯಾನಿಕಲ್ ವಿಭಾಗದ ಐದು ಅಧ್ಯಾಪಕರಾದ, ವಿಭಾಗದ ಮುಖ್ಯಸ್ಥ ಡಾ.ಶರಣ್ ಶೇಗೇದಾರ, ಡಾ.ಶಿವಕುಮಾರ ರಾಚೋಟಿ, ಡಾ.ಸಂತೋಷ್ ಬಳಗಾರ, ಪ್ರೊ.ಪ್ರಶಾಂತ್ ಮೂಲಗೆ ಮತ್ತು ಪ್ರೊ.ಶರಣಕುಮಾರ ಬಿ. ಐಐಟಿ ಕಾನ್ಪುರದಲ್ಲಿ ತರಬೇತಿ ಪಡೆಯಲಿದ್ದು, ಅದೇ ಪ್ರಕಾರ ಸಿವಿಲ್ ವಿಭಾಗದ ಇಬ್ಬರು ಅಧ್ಯಾಪಕರಾದ ಡಾ.ಗಜೇಂದ್ರ ಎಚ್. ಮತ್ತು ಪ್ರೊ.ಚಂದ್ರಕಾಂತ ಐಐಟಿ ಬಾಂಬೆಯಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಆಯ್ಕೆಯಾದ ಪ್ರತಿಯೊಬ್ಬ ಅಧ್ಯಾಪಕರಿಗೆ ಪ್ರಯಾಣ, ವಾಸ್ತವ್ಯ ಮತ್ತು ದೈನಂದಿನ ಭತ್ಯೆಯನ್ನು ಭರಿಸಲು 50,000 ರೂ. ಮೊತ್ತವನ್ನು ಸ್ಟೈಫಂಡ್ ರೂಪದಲ್ಲಿ ಮಂಜೂರು ಮಾಡಲಾಗಿದೆ. ಮೆಕ್ಯಾನಿಕಲ್ ವಿಭಾಗದ ಐದು ಅಧ್ಯಾಪಕರು ಮೆಕ್ಯಾನಿಕಲ್, ಏರೋಸ್ಪೇಸ್ ಮತ್ತು ಇಂಧನ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತರಬೇತಿ ಮತ್ತು ಕೌಶಲ್ಯವರ್ಧನೆಯ ಕಲಿಕೆಯನ್ನು ಪಡೆಯಲಿದ್ದಾರೆ. ಸಿವಿಲ್ ವಿಭಾಗದ ಇಬ್ಬರು ಅಧ್ಯಾಪಕರು ಐಐಟಿಗಳ ಪ್ರಸಿದ್ಧ ಮತ್ತು ಅನುಭವಿ ಅಧ್ಯಾಪಕ ಸದಸ್ಯರು ಮತ್ತು ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ ಕಾನ್ಪುರ ಮತ್ತು ಐಐಟಿ ಬಾಂಬೆಯ ತಜ್ಞರು ಸಿವಿಲ್ ಮತ್ತು ಪರಿಸರ ಇಂಜಿನಿಯರಿಂಗ್‍ನಲ್ಲಿ ತರಬೇತಿ ಪಡೆಯಲಿದ್ದಾರೆಂದು ತಿಳಿಸಿದ್ದಾರೆ.

ಈ ತರಬೇತಿಯು ಎರಡು ವಾರಗಳ ಆನ್-ಸೈಟ್ ತರಬೇತಿ ಮತ್ತು ತಜ್ಞರಿಂದ ಎರಡರಿಂದ ಮೂರು ವಾರಗಳ ವರ್ಚುವಲ್ ಮೋಡ್ ತರಬೇತಿಯ ಹೈಬ್ರಿಡ್ ಸ್ವರೂಪದಲ್ಲಿರುತ್ತದೆ. ಆಯ್ಕೆಯಾದ ಅಧ್ಯಾಪಕರಿಗೆಲ್ಲರಿಗೂ ತರಬೇತಿಯ ಕೊನೆಯಲ್ಲಿ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡರ್, ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ ಸೇರಿದಂತೆ ಇತರರು ಐಐಟಿ ಕಾನ್ಪುರ ಮತ್ತು ಬಾಂಬೆಯಲ್ಲಿ ಉನ್ನತ ಮಟ್ಟದ ತರಬೇತಿಗಾಗಿ ಆಯ್ಕೆಯಾದ ಅಧ್ಯಾಪಕರನ್ನು ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News