ಕಲಬುರಗಿ | ಸಮಾಜದ ನಿಜವಾದ ನಿರ್ಮಾತೃ ಶಿಕ್ಷಕ : ಪ್ರೊ.ಗೂರು ಶ್ರೀರಾಮುಲು
ಕಲಬುರಗಿ: 30 ವರ್ಷದ ಶಿಕ್ಷಕ ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿದ ತೃಪ್ತಿ ನನಗಿದೆ ಎಂದು ಗುಲ್ಬಾರ್ಗ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ.ಗೂರು ಶ್ರೀರಾಮುಲು ಹೇಳಿದ್ದಾರೆ.
ಗುಲ್ಬಾರ್ಗ ವಿಶ್ವವಿದ್ಯಾಲಯ ಜ್ಞಾನ ಗಂಗಾ ಆವರಣ ಸಮಾಜ ವಿಜ್ಞಾನಗಳ ಕಟ್ಟಡ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಸೇವಾ ನಿವೃತ್ತಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ಶಿಕ್ಷಕರ ವೃತ್ತಿ ಪವಿತ್ರವಾಗಿದ್ದು ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಗುಲ್ಬಾರ್ಗ ವಿಶ್ವವಿದ್ಯಾಲಯ ಪ್ರಭಾರ ಕುಲಪತಿಯಾಗಿದ್ದು ಜೀವನದ ಅದ್ಬುತ ಗಳಿಕೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ಶಿಷ್ಯನ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಅವರ ಗುರುಗಳು ಭಾಗವಹಿಸುತ್ತಿರುವುದು ಸಂತೋಷದ ಕ್ಷಣ ಎಂದರು.
ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಆರ್.ಎಲ್.ಎಂ.ಪಾಟೀಲ್, ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಚಂದ್ರಕಾಂತ ಯಾತನೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗುಲ್ಬಾರ್ಗ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಎಂ.ಜಿ.ಕಣ್ಣೂರು, ಸಂಗೀತಾ ಗೂರು ಶ್ರೀರಾಮುಲು, ವಿಭಾಗದ ನಿವೃತ್ತಿ ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಶಾಂತಪ್ಪ ಸ್ವಾಗತಿಸಿದರು.ಸಂಶೋಧನಾ ವಿದ್ಯಾರ್ಥಿ ಮಹೇಶ್ವರಿ ನಿರೂಪಿಸಿದರು.
ಭಾರತದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಶಿಕ್ಷಣವೇ ಗೊತ್ತಿಲ್ಲದ ವ್ಯಕ್ತಿಗಳು ಉನ್ನತ ಶಿಕ್ಷಣ ಸಚಿವರಾಗುತ್ತಿದ್ದಾರೆ. ಸರ್ಕಾರಗಳು ಗುವಿವಿ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು.
-ಪ್ರೊ ಆರ್.ಎಲ್.ಎಂ ಪಾಟೀಲ್, ರಾಜ್ಯಶಾಸ್ತ್ರ ನಿವೃತ್ತಿ ಪ್ರಾಧ್ಯಾಪಕ ಬೆಂಗಳೂರು ವಿವಿ
ಕುಲಪತಿಯಾಗಿ ಕಾನೂನಿನ ಪ್ರಕಾರ ಕೆಲಸ ಮಾಡಿದ್ದೆನೆ. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ವೃತ್ತಿ ಜೀವನದಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಆಭಾರಿಯಾಗಿದ್ದೇನೆ.
-ಪ್ರೊ.ಗೂರು ಶ್ರೀರಾಮುಲು, ಪ್ರಭಾರ ಕುಲಪತಿ ಗುವಿವಿ.