×
Ad

ಕಲಬುರಗಿ | ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ : ಜ್ಯೋತಿ ಉಪಳಾಂಕರ

Update: 2025-03-10 15:50 IST

ಕಲಬುರಗಿ : ಪ್ರತಿಯೊಬ್ಬ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಖ್ಯಾತ ಉದ್ಯಮಿ ಜ್ಯೋತಿ ಉಪಳಾಂಕರ ಹೇಳಿದ್ಧಾರೆ.

ನಗರ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ ಮತ್ತು ಗೋದುತಾಯಿ ಬಿ.ಎಡ್ ಮಹಿಳಾ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ʼಅಂತರರಾಷ್ಟ್ರೀಯ ಮಹಿಳಾ ದಿನಾಚರಣೆʼ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಪ್ರತಿ ಮಹಿಳೆಯು ಸಹ ಸ್ವ ಉದ್ಯಮವನ್ನು ಪ್ರಾರಂಭಿಸಬೇಕು. ಇವತ್ತಿಗೆ ಎಷ್ಟೋ ಕೃಷಿ ಮಹಿಳಾ ಸಾಧಕರು ನಮ್ಮ ಮುಂದೆ ಇದ್ದಾರೆ. ಸಾಧನೆಗೆ ಶಿಕ್ಷಣದ ಜೊತೆಗೆ ಆತ್ಮಸ್ಥೈರ್ಯವೂ ಕೂಡ ತುಂಬಾ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಸಿಎ ಫೌಂಡೇಶನ್‌ ನಿರ್ದೇಶಕರಾದ ಡಾ.ಇಂದಿರಾ ಶೇಟಕಾರ ಮಾತನಾಡಿ, ಇಂದು ಮಹಿಳೆಯರು ಸಬಲೀಕರಣಗೊಳ್ಳುತ್ತಿದ್ದಾರೆ. ಅವರಿಗೆ ಸಮಾನ ಗೌರವವನ್ನು ನೀಡಲಾಗುತ್ತಿದೆ. ಹಿಂದೆ, ಮಹಿಳೆಯರನ್ನು ಮನೆಗಳಲ್ಲಿ ನಿರ್ಬಂಧಿಸಲಾಗಿತ್ತು ಮತ್ತು ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಲು ಅನುಮತಿ ಇರಲಿಲ್ಲ. ಈಗ ಮಹಿಳೆಯರಿಗೆ ಕೆಲಸದಲ್ಲಿ ಸಮಾನ ಅವಕಾಶ ನೀಡಲಾಗುತ್ತಿದೆ ಮತ್ತು ಅನೇಕ ಕ್ಷೇತ್ರಗಳಲ್ಲಿ ಪುರುಷರ ನಡುವೆ ಮತ್ತು ಕೆಲವೊಮ್ಮೆ ಪುರುಷರಿಗಿಂತ ಮುಂದೆ ನಿಲ್ಲಲು ಅವಕಾಶ ನೀಡಲಾಗಿದೆ. ಇಂದು ಮಹಿಳೆಯರು ತಮ್ಮ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ, ಇದು ಅವರ ಮನೆ ಮತ್ತು ಇಡೀ ಸಮಾಜದ ಯಶಸ್ಸಿಗೆ ಕೊಡುಗೆ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ್ ಮಾತನಾಡಿ, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಸಾಧನೆ ಮಾಡುತ್ತಿದ್ದಾಳೆ. ಅದಕ್ಕೆ ಕಾರಣ ನಮ್ಮ ಸಂವಿಧಾನ. ನಮ್ಮ ದೇಶಕ್ಕೆ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಬೇಕು. ದೇಶದ ಎಲ್ಲಾ ಮಹಿಳೆಯರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯವನ್ನು ನೀಡಿದೆ, ಶೈಕ್ಷಣಿಕ ಮತ್ತು ಆಸ್ತಿ ಹಕ್ಕು ನೀಡಿದೆ. ಪ್ರತಿ ಹೆಣ್ಣು ಮಗಳು ತನಗೆ ನಡೆದ ಅನ್ಯಾಯದ ವಿರುದ್ಧ ಪ್ರಶ್ನಿಸುವ ಹಕ್ಕನ್ನು ನೀಡಿದೆ ಎಂದರು.

ಈ ಕಾರ್ಯಕ್ರಮವನ್ನು ಜನಪದ ಕಲಾವಿದೆ ಮತ್ತು ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೋರಮ್ಮ ಕೆ.ಹೂಗಾರ್ ರವರು ಉದ್ಘಾಟಿಸಿದರು. ಗೋದುತಾಯಿ ಬಿ.ಎಡ್ ಕಾಲೇಜಿನ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಕಾರ್ಯಕ್ರಮ ಸಂಯೋಜಕರಾದ ಡಾ.ಸೀಮಾ ಪಾಟೀಲ ಇದ್ದರು. ಸುಪ್ರೀಯಾ ನಾಗಶೆಟ್ಟಿ ನಿರೂಪಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News