ನಕಲಿ ಮತದಾನ ತಡೆಯಲು ಆಧಾರ್ ಕಾರ್ಡ್‌ಗೆ ಚಿಪ್ ಅಳವಡಿಸಬೇಕು : ಅಖಿಲೇಶ್ ಯಾದವ್
Photo | PTI
ಹೊಸದಿಲ್ಲಿ : ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ನಕಲಿ ಮತ ಚಲಾಯಿಸುವುದನ್ನು ತಡೆಯಲು ಆಧಾರ್ ಕಾರ್ಡ್‌ಗಳಲ್ಲಿ ಚಿಪ್‌ಗಳನ್ನು ಅಳವಡಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಔರೈಯಾ ಜಿಲ್ಲೆಯಲ್ಲಿ ಪಕ್ಷದ ನಾಯಕರೊಂದಿಗೆ ಚುನಾವಣಾ ಸಿದ್ಧತೆಗಳ ಕುರಿತು ಚರ್ಚೆ ವೇಳೆ ಮಾತನಾಡಿದ ಅಖಿಲೇಶ್ ಯಾದವ್, ಮೀಸಲಾತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಷ್ಟ್ರವ್ಯಾಪಿ ಜಾತಿಗಣತಿ ಅತ್ಯಗತ್ಯ ಎಂದು ಹೇಳಿದರು. ಜಾತಿ ಜನಗಣತಿಯಿಂದ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಕುರಿತ ಬೇಡಿಕೆಯನ್ನು ಪುನರುಚ್ಚರಿಸಿದ ಅಖಿಲೇಶ್ ಯಾದವ್, ನ್ಯಾಯಯುತ ಚುನಾವಣೆಗಳನ್ನು ನಡೆಸಲು ಮತ್ತು ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುವ ಮೂಲಕ ನಕಲಿ ಮತಗಳನ್ನು ಚಲಾಯಿಸುವುದನ್ನು ತಡೆಯಲು ಆಧಾರ್ ಕಾರ್ಡ್‌ಗೆ ಚಿಪ್‌ಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಬಿಜೆಪಿ ಸರಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ಆಡಳಿತ ಪಕ್ಷವು ಸಮಾಜದಲ್ಲಿ ವಿಭಜನೆ ಮತ್ತು ದ್ವೇಷವನ್ನು ಉತ್ತೇಜಿಸುವ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.