ಆಗ್ರಾ | ‘ಪತ್ನಿಯ ಹಿಂಸೆಯನ್ನು ಸಹಿಸಲಾಗಲಿಲ್ಲ’ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಪತಿ
ಲಾಕ್ ಮಾಡಿದ್ದ ಫೋನ್ ನಲ್ಲಿದ್ದ ವಿಡಿಯೋ ಕ್ಲಿಪ್ ಪತ್ತೆ: ಎರಡು ತಿಂಗಳ ನಂತರ ಮೃತದೇಹ ಹೊರತೆಗೆದು ತನಿಖೆ
ಆಗ್ರಾ: ಮುಜಫರ್‌ನಗರದ 32 ವರ್ಷದ ವಾಸಿಂ ಶೇಖ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಎರಡು ತಿಂಗಳ ಬಳಿಕ ಹೊಸ ತಿರುವು ದೊರೆತಿದೆ. ಫಾರ್ಮ್ಯಾಟ್ ಮಾಡಿದ ಅವರ ಮೊಬೈಲ್ ಫೋನ್‌ನಿಂದ ಆಕಸ್ಮಿಕವಾಗಿ ಪತ್ತೆಯಾದ ವೀಡಿಯೊದಲ್ಲಿ, “ಪತ್ನಿ ಮತ್ತು ಆಕೆಯ ಕುಟುಂಬದ ನಿರಂತರ ಹಿಂಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ವಾಸಿಂ ಹೇಳಿಕೊಂಡಿರುವುದು ಕುಟುಂಬವನ್ನು ಬೆಚ್ಚಿಬೀಳಿಸಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಖತೌಲಿಯ ನಯಿ ಅಬಾದಿ ಕಾಲೋನಿಯ ನಿವಾಸಿ ವಾಸಿಂ, ಐದು ವರ್ಷಗಳ ಹಿಂದೆ ಗಾಜಿಯಾಬಾದ್‌ನ ಲೋನಿಯ ಸೋನಿಯಾ ಅವರನ್ನು ವಿವಾಹವಾಗಿದ್ದರು. ಅತ್ತೆ-ಮಾವ ಅವರ ಮನೆ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅವರು, ವಿವಾಹ ನಂತರ ನಿರಂತರ ಕಲಹ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರು ಎಂದು ಸಹೋದರ ಶಾರುಖ್ ಅಹ್ಮದ್ ತಿಳಿಸಿದ್ದಾರೆ.
ಅಕ್ಟೋಬರ್ 20ರಂದು ವಾಸಿಂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಕ್ಕೆ ಮಾಹಿತಿ ಬಂದಿತ್ತು. ಆದರೆ ಮರುದಿನ ಮೊಬೈಲ್ ಫೋನ್ ರಿಕವರಿ ವೇಳೆ ಸಿಕ್ಕ ವೀಡಿಯೊ ಎಲ್ಲವನ್ನೂ ತಿರುವು ಮಾಡಿತು.
“ನಾನು ಇಂದು ಈ ಲೋಕ ತೊರೆಯುತ್ತಿದ್ದೇನೆ. ನನಗಾಗಿ ದುಃಖಿಸಬೇಡಿ. ನನಗೆ ಆಗಿರುವ ಹಿಂಸೆಯನ್ನು ಇನ್ನು ಸಹಿಸಲಾಗುವುದಿಲ್ಲ. ನನ್ನ ಘನತೆ ಗೌರವ ಕಳೆದುಕೊಂಡಿದ್ದೇನೆ. ನನ್ನ ಮಕ್ಕಳಿಂದ ದೂರವಿಟ್ಟಿದ್ದಾರೆ. ಇವರನ್ನು ಬಿಡಬೇಡಿ", ಎಂದು ವಾಸಿಂ ನಡುಗುವ ಧ್ವನಿಯಲ್ಲಿ ಹೇಳಿರುವುದು ವಿಡಿಯೋದಲ್ಲಿದೆ.
ವೀಡಿಯೊ ಕಂಡ ತಾಯಿ ತಕ್ಷಣ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಗಾಜಿಯಾಬಾದ್‌ನ ಅಂಕುರ್ ವಿಹಾರ್ ಠಾಣೆ ಇನ್‌ಚಾರ್ಜ್ ನೀರಜ್ ಅತ್ರಿ, “ಅಕ್ಟೋಬರ್ 30ರಂದು ಪತ್ನಿ ಹಾಗೂ ಅವರ ಕುಟುಂಬದವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 108 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಖತೌಲಿ ಎಸ್‌ಡಿಎಂ ನಿಕಿತಾ ಶರ್ಮಾ, “ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದರು.
“ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬಿಸುತ್ತಿರುವಂತೆ ಕಂಡಿತ್ತು. ಆದ್ದರಿಂದ ನಾವು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾಯಿತು. ವಾಸಿಂಗೆ ನ್ಯಾಯ ದೊರಕಬೇಕೆಂಬುದು,” ಎಂದು ಶಾರುಖ್ ಹೇಳಿದ್ದಾರೆ.