×
Ad

ನನ್ನ ಮಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ, ದಯವಿಟ್ಟು ಕರುಣೆ ತೋರಿಸಿ: ವಿಮಾನ ದುರಂತದ ಬಳಿಕ ವಸತಿ ಗೃಹ ತೆರವು ಕಾರ್ಯಾಚರಣೆಯ ವಿರುದ್ಧ ಕಣ್ಣೀರಿಟ್ಟ ವೈದ್ಯ

Update: 2025-06-14 19:45 IST
PC ; youtube.com/@Khabargaon OR informed.in \ instagram.com

ಅಹ್ಮದಾಬಾದ್: “ನನ್ನ ಮಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ, ದಯವಿಟ್ಟು ಕರುಣೆ ತೋರಿಸಿ. ಮನೆ ತೆರವು ಮಾಡಲು ಎರಡು ಮೂರು ದಿನಗಳ ಸಮಯ ನೀಡಿ”, ಎಂದು ವೈದ್ಯರೊಬ್ಬರು ಕಣ್ಣೀರಿಡುತ್ತಿರುವ ವೀಡಿಯೊ ವೈರಲ್ ಆಗಿದೆ.

Full View

ಅಹಮದಾಬಾದ್‌ನಲ್ಲಿ ವಿಮಾನ ದುರಂತದ ಬಳಿಕ ಅಲ್ಲಿನ ಯು.ಎನ್. ಮೆಹ್ತಾ ಆಸ್ಪತ್ರೆಯ ರೆಸಿಡೆಂಟ್ ವೈದ್ಯರು ಎದುರಿಸುತ್ತಿರುವ ಸಂಕಷ್ಟವು ವೀಡಿಯೊ ಮೂಲಕ ಶುಕ್ರವಾರ ವೈರಲ್ ಆಗಿತ್ತು. ಬಿ ಜೆ ಮೆಡಿಕಲ್ ಕಾಲೇಜು ಹಾಗು ಅದರ ಹಾಸ್ಟೆಲ್ ಕಟ್ಟಡದ ಮೇಲೆ ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ನಂತರ, ಅದರ ಎದುರಲ್ಲೇ ಇರುವ ಯು ಎನ್ ಮೆಹ್ತಾ ಆಸ್ಪತ್ರೆಯ ವೈದ್ಯರ ವಸತಿಗೃಹಗಳನ್ನು ತಕ್ಷಣವೇ ಖಾಲಿ ಮಾಡಲು ಸೂಚಿಸಲಾಗಿತ್ತು.

"ನಮಗೆ ಜೂನ್ 13 ರಂದು ರಾತ್ರಿ 8 ಗಂಟೆಯೊಳಗೆ ರೂಮ್ ಖಾಲಿ ಮಾಡಲು ಹೇಳಿದರು," ಎಂದು ಕಣ್ಣೀರು ಹಾಕುತ್ತಾ ರೆಸಿಡೆಂಟ್ ವೈದ್ಯ ಡಾ. ಅನಿಲ್ ಹೇಳಿದ್ದರು. ಆ ವಿಡಿಯೋದಲ್ಲಿ ಅವರು ತೀವ್ರ ಸಮಸ್ಯೆಗೆ ಸಿಲುಕಿದ್ದ ಹಾಗೆ ಕಾಣುತ್ತಿದ್ದರು. ಮನೆಯ ಸಾಮಾನುಗಳನ್ನು ಸಾಗಿಸುತ್ತಿದ್ದರು. ಜೊತೆಗೆ ಅವರ ವೈದ್ಯಕೀಯ ಸಮವಸ್ತ್ರ ಸಂಪೂರ್ಣ ಕೊಳೆಯಾಗಿತ್ತು, ಮುಖದ ಮೇಲೆಯೂ ಕಪ್ಪು ಮಸಿಯಂತಹ ಕೊಳೆ ಅಂಟಿಕೊಂಡಿತ್ತು.

ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಅನೇಕ ವೈದ್ಯರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಅಥವಾ ಪ್ರಾಣ ಕಳೆದುಕೊಂಡಿದ್ದಾರೆ. ಕರ್ತವ್ಯದಲ್ಲಿದ್ದವರನ್ನೀಗ ರಾತ್ರಿ ಒಳಗೆ ರೂಮ್ ಖಾಲಿ ಮಾಡಲು ಹೇಳುತ್ತಿದ್ದಾರೆ. ಕರ್ತವ್ಯದಲ್ಲಿಲ್ಲದ ನಮ್ಮ ಸ್ನೇಹಿತರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ನಮಗೆ ರೂಮ್ ಖಾಲಿ ಮಾಡಲು ಹೇಳಿದ್ದಾರೆ, ಇದು ಸರಿಯಲ್ಲ. ನಮ್ಮ ಸ್ನೇಹಿತರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಒಂದೇ ರಾತ್ರಿಯಲ್ಲಿ ನಾವು ರೂಮ್ ಖಾಲಿ ಮಾಡಲು ಸಾಧ್ಯವಿಲ್ಲ. ನಮ್ಮ ಎಲ್ಲಾ ವಸ್ತುಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು? ನಮಗೆ ಮಾನಸಿಕವಾಗಿ ತುಂಬಾ ತೊಂದರೆಯಾಗಿದೆ. ಕನಿಷ್ಠ 2-3 ದಿನಗಳ ಕಾಲಾವಕಾಶ ನೀಡಬೇಕಿತ್ತು. ದಯವಿಟ್ಟು ನನ್ನ ಸಂದೇಶವನ್ನು ಮೇಲಿನ ಅಧಿಕಾರಿಗಳಿಗೆ ತಲುಪಿಸಿ. ನನ್ನನ್ನು ಕ್ಷಮಿಸಿ. ನಾನು ಗುಜರಾತ್‌ನವನಲ್ಲ. ನನ್ನ ತಪ್ಪೇನೂ ಇಲ್ಲ. ಎಲ್ಲಾ ಮಾಧ್ಯಮದವರು ದಯವಿಟ್ಟು ನಮಗೆ ಸಹಾಯ ಮಾಡಿ," ಎಂದು ಅವರು ವೀಡಿಯೊದಲ್ಲಿ ಮನವಿ ಮಾಡಿದ್ದರು.

Full View

"ನಮಗೆ ಏಕೆ ಅಲ್ಟಿಮೇಟಮ್ ನೀಡುತ್ತಿದ್ದಾರೆ? ದಯವಿಟ್ಟು ಸ್ವಲ್ಪ ಮಾನವೀಯತೆಯನ್ನು ತೋರಿಸಿ. ನನ್ನ ಮಗು ಆಸ್ಪತ್ರೆಯಲ್ಲಿ ದಾಖಲಾಗಿದೆ. ನಾನು ಅಲ್ಲಿ ಇರಬೇಕಾಗಿತ್ತು," ಎಂದಿದ್ದಾರೆ. "ನಾನು ಇಲ್ಲಿಯೇ ಓದಿದ್ದು. ನಾಲ್ಕು ವರ್ಷಗಳಿಂದ ಇಲ್ಲಿದ್ದೇನೆ. ನನ್ನ ಪತ್ನಿ ಕೂಡ ಇಲ್ಲೇ ಇದ್ದಾರೆ. ನನ್ನ ಮಗು ಮತ್ತು ಕೆಲಸದವರು ಹಾಸ್ಟೆಲ್‌ನಲ್ಲಿದ್ದರು. ನನ್ನ ಮಗುವಿಗೆ ಕೇವಲ 2.5 ವರ್ಷ. ಅವರು ಆಸ್ಪತ್ರೆಯಲ್ಲಿದ್ದಾರೆ. ಅವರು ಚೆನ್ನಾಗಿದ್ದಾರೆ, ಆದರೆ ನಾನು ಅವರನ್ನು ಬೇರೆಯವರೊಂದಿಗೆ ಬಿಟ್ಟು ಹೋಗುವಷ್ಟು ಚೆನ್ನಾಗಿಲ್ಲ," ಎಂದು ಡಾ. ಅನಿಲ್ ತಮ್ಮ ಅಸಹಾಯಕತೆಯನ್ನು ವಿವರಿಸಿದ್ದರು.

"ಎಲ್ಲಾ ವಸ್ತುಗಳನ್ನು ಸಾಗಿಸುವುದು ಕಷ್ಟ. ದಯವಿಟ್ಟು ನಮಗೆ ವಸ್ತುಗಳನ್ನು ಸ್ಥಳಾಂತರಿಸಲು ಸ್ವಲ್ಪ ಸಮಯ ಕೊಡಿ”, ಎಂದು ಅವರು ಪುನರುಚ್ಚರಿಸಿದ್ದಾರೆ. "ನಾನೂ ಮತ್ತು ನನ್ನ ಹೆಂಡತಿ ಇಬ್ಬರೂ ಯು.ಎನ್. ಮೆಹ್ತಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ”, ಎಂದು ಅನಿಲ್ ಹೇಳಿದ್ದರು.

"ನಮಗೆ ಇದುವರೆಗೂ ಬೇರೆ ವಸತಿ ವ್ಯವಸ್ಥೆ ನೀಡಿಲ್ಲ. ಅವರು ನಮಗೆ ವಸತಿ ನೀಡುತ್ತಾರೆ, ಆದರೆ ಸದ್ಯಕ್ಕೆ ನಾವು ನಮ್ಮ ವಸ್ತುಗಳನ್ನು ಎಲ್ಲಾದರೂ ಇಡಬೇಕಾಗುತ್ತದೆ. ನಾವು ಎಲ್ಲಿಗೆ ಹೋಗಬೇಕು? ನಮಗೆ ಸ್ಥಳಾಂತರಿಸಲು ಸಮಯ ಬೇಕು. ಇಲ್ಲಿರುವ ಎಲ್ಲಾ ವೈದ್ಯರು ತೊಂದರೆಯಲ್ಲಿದ್ದಾರೆ. ಕೆಲವು ವಸ್ತುಗಳು ಸುಟ್ಟುಹೋಗಿವೆ. ಆದರೆ ನಾನು ಪರಿಹಾರ ಕೇಳುತ್ತಿಲ್ಲ. ನಾನು ಅದನ್ನು ದುಡಿದು ನಾನೇ ಗಳಿಸುತ್ತೇನೆ. ನಾನು ಕೇಳುತ್ತಿರುವುದು ಕೇವಲ ಸ್ವಲ್ಪ ಸಮಯ. ದಯವಿಟ್ಟು ನನಗೆ ಸಮಯ ಕೊಡಿ. ನನ್ನದೇ ಸುಟ್ಟುಹೋದ ಮನೆಯಿಂದ ನನ್ನನ್ನು ಹೊರಹಾಕುತ್ತಿದ್ದಾರೆ. ಸ್ವಲ್ಪ ಮಾನವೀಯತೆ ತೋರಿಸಿ. ಅವರು ನಿಮ್ಮ ಮನೆಯನ್ನು ಲಾಕ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ತಪ್ಪು. ನಾವು ಮಾತನಾಡಬೇಕಾಗಿದೆ. ಇಲ್ಲಿ ಯಾವ ಅಧಿಕಾರಿಗಳೂ ಇಲ್ಲ. ಪಿಎಂ ಮೋದಿ ಬಂದಾಗ ಎಲ್ಲ ಅಧಿಕಾರಿಗಳೂ ಇದ್ದರು”, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸರಕಾರದ ಸಂವೇದನಾರಹಿತ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಬಳಿಕ, ಶನಿವಾರ ಸಂಜೆ ಅದೇ ಡಾ. ಅನಿಲ್ ಅವರು ಮಾತಾಡುತ್ತಿರುವ ಇನ್ನೊಂದು ವೀಡಿಯೊ ಹರಿದಾಡಿದೆ. ಅದರಲ್ಲಿ ನಾನು ಈ ಹಿಂದೆ ಮಾತಾಡಿದಾಗ ತೀವ್ರ ಮಾನಸಿಕ ಒತ್ತಡದಲ್ಲಿದ್ದೆ. ಹಾಗಾಗಿ ಏನೇನು ಹೇಳಿಬಿಟ್ಟೆ ಎಂದೇ ಗೊತ್ತಾಗಲಿಲ್ಲ. ಆದರೆ ನನ್ನ ಪತ್ನಿಗೆ ಸರಕಾರದಿಂದ ಕೂಡಲೇ ಫ್ಲಾಟ್ ಒಂದನ್ನು ನೀಡಿದ್ದರು. ಸರಕಾರಿ ಸಿಬ್ಬಂದಿ ಹಾಗು ಸ್ವಯಂ ಸೇವಕರು ನಮ್ಮ ಮನೆಯ ಸಾಮಾನುಗಳನ್ನು ಸ್ಥಳಾಂತರ ಮಾಡಲು ಸಹಕರಿಸಿದ್ದರು. ಆ ಎಲ್ಲ ಮಾಹಿತಿ ನನಗೆ ನನ್ನ ಪತ್ನಿಯಿಂದ ಸಿಕ್ಕಿರಲಿಲ್ಲ. ಹಾಗಾಗಿ ನಾನು ಹಾಗೆ ಮಾತಾಡಿದೆ. ನಾನು ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News