ಕೇರಳ: ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಇದುವರೆಗೆ 23 ಮಂದಿ ಬಲಿ
Photo : indiatoday
ತಿರುವನಂತಪುರ, ಅ. 12: ಕೇರಳದಲ್ಲಿ ಇದುವರೆಗೆ ಮೆದುಳು ತಿನ್ನುವ ಅಮೀಬಾ ಸೋಂಕಿನ (ಮೆನಿಂಗೋ ಅಮೀಬಿಕ್ ಎನ್ಸೆಫಲೈಟಿಸ್) ಒಟ್ಟು 104 ಪ್ರಕರಣಗಳು ವರದಿಯಾಗಿವೆ. ಇವುಗಳ ಪೈಕಿ 23 ಪ್ರಕರಣಗಳಲ್ಲಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ರವಿವಾರ ಹೇಳಿದ್ದಾರೆ. ‘‘ಮೆದುಳು ತಿನ್ನುವ ಅಮೀಬಾ’’ದಿಂದ ಉಂಟಾಗುವ ಅಪರೂಪದ ಹಾಗೂ ಕೆಲವೊಮ್ಮೆ ಮಾರಕವಾಗಬಲ್ಲ ಮೆದುಳಿನ ಸೋಂಕಿನ ವಿರುದ್ಧ ಕೇರಳ ಹೋರಾಡುತ್ತಿದೆ.
ಅಂದಾಜಿನ ಪ್ರಕಾರ ಕೊಲ್ಲಂ ಹಾಗೂ ತಿರುವನಂತಪುರ ಜಿಲ್ಲೆಗಳು ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ ತೀವ್ರ ಸಂತ್ರಸ್ತವಾಗಿವೆ. ಕೋಝಿಕ್ಕೋಡ್ ಹಾಗೂ ಮಲಪ್ಪುರಂನಲ್ಲಿ ಕೂಡ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ.
‘‘2023ರಲ್ಲಿ ಕೋಝಿಕ್ಕೋಡ್ನಲ್ಲಿ ನಿಫಾ ಹರಡಿದ ಬಳಿಕ, ಎಲ್ಲಾ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳನ್ನು ಕಡ್ಡಾಯವಾಗಿ ವರದಿ ಮಾಡಬೇಕು ಹಾಗೂ ಅಂತಹ ಪ್ರಕರಣಗಳ ಹಿಂದಿನ ಕಾರಣಗಳನ್ನು ಗುರುತಿಸಬೇಕು ಎಂದು ನಿರ್ಧರಿಸಲಾಯಿತು, ನಿರ್ದೇಶಿಸಲಾಯಿತು. ಇದರ ಪರಿಣಾಮ 2024ರಿಂದ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಅಧಿಕೃತವಾಗಿ ವರದಿಯಾಗಲು ಆರಂಭವಾಯಿತು’’ ಎಂದು ವೀಣಾ ಜಾರ್ಜ್ ಅವರು ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
‘‘ಇಂದು ವರದಿಯಾದ ಪ್ರಕರಣ ಸೇರಿದಂತೆ ಇದುವರೆಗೆ ಒಟ್ಟು 104 ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇವುಗಳ ಪೈಕಿ 23 ಪ್ರಕರಣಗಳಲ್ಲಿ ರೋಗಿಗಳು ಸಾವನ್ನಪ್ಪಿದ್ದಾರೆ’’ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.