×
Ad

2027ರ ಮಾರ್ಚ್ 1ರಿಂದ ಜನಗಣತಿ; ಜಾತಿಗಣತಿಗೂ ಚಾಲನೆ

Update: 2025-06-04 21:08 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಮುಂದಿನ ರಾಷ್ಟ್ರವ್ಯಾಪಿ ಜನಗಣತಿಯು 2027ರ ಮಾರ್ಚ್ 1ರಂದು ಆರಂಭವಾಗಲಿದೆಯೆಂದು ಕೇಂದ್ರ ಸರಕಾರವು ಬುಧವಾರ ಘೋಷಿಸಿದೆ. ಈ ಜನಗಣತಿಯು ಕಳೆದ ಏಳು ದಶಕಗಳಲ್ಲಿಯೇ ಮೊದಲ ಬಾರಿಗೆ ಜಾತಿಗಣತಿಯನ್ನು ಕೂಡಾ ಒಳಗೊಂಡಿರುವುದು.

ಲಡಾಕ್, ಜಮ್ಮುಕಾಶ್ಮೀರ, ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡದ ಕೆಲವು ಭಾಗಗಳು ಸೇರಿದಂತೆ ಹಿಮಾಚ್ಚಾದಿತ ಹಾಗೂ ದುರ್ಗಮಪ್ರದೇಶಗಳಲ್ಲಿ ಜನಗಣತಿಯು 2026ರ ಆಕ್ಟೋಬರ್‌ನಲ್ಲಿ ಆರಂಭಗೊಳ್ಳಲಿದೆ. ಈ ಪ್ರದೇಶಗಳಲ್ಲಿ ಜಗಣತಿಯ ಪ್ರಾಸ್ತಾವಿಕ ದಿನಾಂಕವನ್ನು 2026 ಆಕ್ಟೋಬರ್ 1ರಂದು 00:00 ತಾಸುಗಳೆಂದು ನಿಗದಿಪಡಿಸಲಾಗಿದೆ. ದೇಶದ ಉಳಿದ ಭಾಗಗಳಲ್ಲಿ ಅದು 2027ರ ಮಾರ್ಚ್ 1ರಂದು 00:00 ತಾಸುಗಳಾಗಿರುವುದು.

ಜನಗಣತಿ ಔಪಚಾರಿಕ ಅಧಿಸೂಚನೆಯೊಂದನ್ನು ಪ್ರಸ್ತಾವನೆ ದಿನಾಂಕಗಳ ಸಮೇತ 2025ರ ಜೂನ್ 16ರಂದು ಅಧಿಕೃತ ಗಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. 1948ರ ಜನಗಣತಿ ಕಾಯ್ದೆ ಹಾಗೂ 1990ರ ಜನಗಣತಿ ಕಾನೂನುಗಳಿಗೆ ಅನ್ವಯವಾಗಿ ಎರಡು ಹಂತಗಳಲ್ಲಿ ನಡೆಯಲಿರುವುದು.

ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಕೂಡಾ ನಡೆಸುವ ನಿರ್ಧಾರವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಎಪ್ರಿಲ್ 30ರಂದು ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯ ಬಳಿಕ ಪ್ರಕಟಿಸಿದ್ದರು. ಕೆಲವು ರಾಜ್ಯಗಳು ಜಾತಿಗಣತಿಯನ್ನು ಸಮರ್ಪಕವಾಗಿ ನಡೆಸಿದ್ದರೆ , ಇನ್ನು ಕೆಲವು ಸರಿಯಾಗಿ ನಡೆಸಿಲ್ಲ. ಇಂತಹ ಅಸ್ಥಿರತೆಗಳು ಸಂದೇಹಗಳನ್ನು ಹುಟ್ಟುಹಾಕಿದ್ದು, ಸಾಮಾಜಿಕ ಸೌಹಾರ್ದತೆಯನ್ನು ಕದಡುವ ಸಾಧ್ಯತೆಯಿದೆ. ಈ ಕುರಿತ ಕಳವಳಗಳ ನಿವಾರಣೆಗಾಗಿ ಕೇಂದ್ರವು ಜನಗಣತಿಯ ಜೊತೆಗೆ ಜಾತಿ ಗಣತಿ ಕೂಡಾ ನಡೆಸಲು ನಿರ್ಧರಿಸಿದೆ ಎಂದರು.

2011ರ ಬಳಿಕ ಭಾರತ ನಡೆಸಲಿರುವ ಮೊದಲ ಜನಗಣತಿ ಇದಾಗಲಿದೆ. ಕಳೆದ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗಿತ್ತು. ಎಪ್ರಿಲ್‌ನಿಂದ ಸೆಪ್ಟೆಂಬರ್ 2010ರವರೆಗೆ ಮನೆಗಳನ್ನು ಪಟ್ಟಿ ಮಾಡಿ, ಮನೆಮನೆಗಳಲ್ಲಿ ಜನಗಣತಿಯನ್ನು ನಡೆಸಲಾಗಿತ್ತು. 2021ರಲ್ಲಿ ನಡೆಸಲುದ್ದೇಶಿಸಿದ್ದ ಜನಗಣತಿಯನ್ನು ಕೂಡಾ ಇದೇ ಮಾದರಿಯಲ್ಲಿ ನಡೆಸುವ ಯೋಜನೆಯನ್ನು ರೂಪಿಸಲಾಗಿತು. ಆದರೆ ಕೋವಿಡ್‌19 ಸೋಂಕಿನ ಹಿನ್ನೆಲೆಯಲ್ಲಿ ಜನಗಣತಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. 2021ರ ಜನಗಣತಿಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು ಹಾಗೂ 2020ರ ಎಪ್ರಿಲ್ 1ರಂದು ಕ್ಷೇತ್ರ ಕಾರ್ಯ ಆರಂಭಗೊಳ್ಳಲಿರುವಾಗಲೇ ದೇಶಾದ್ಯಂತ ಕೊರೋನಾ ಸೋಂಕಿನ ಹಾವಳಿ ತಲೆದೋರಿದ್ದರಿಂದ ಜನಗಣತಿಯನ್ನು ಕೈಬಿಡಲಾಗಿತ್ತು.

►ರಾಷ್ಟ್ರವ್ಯಾಪಿ ಜಾತಿಗಣತಿ: ಮಹತ್ವದ ಮೈಲುಗಲ್ಲು

2027ರ ಜನಗಣತಿಯಲ್ಲಿ ಜಾತಿಗಣತಿಯನ್ನು ಸೇರ್ಪಡೆಗೊಳಿಸಿರುವುದು ಒಂದು ಮಹತ್ವದ ಬೆವಣಿಗೆಯಾಗಿದೆ. 1881 ಹಾಗೂ 1931ರ ನಡುವೆ ಬ್ರಿಟಿಶ್ ಆಡಳಿತವು ಜಾತಿ ಆಧಾರಿತ ಸಮಗ್ರ ಜನಗಣತಿಯನ್ನು ನಡೆಸಿತ್ತು. 2011ರಲ್ಲಿ ಆಗಿನ ಯುಪಿನ ಸರಕಾರವು ಜಾತಿಗಳ ದತ್ತಾಂಶ ಸಂಗ್ರಹಿಸಲು ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ (ಎಸ್‌ಇಸಿಸಿ)ಯನ್ನು ನಡೆಸಿತ್ತು. ಆದರೆ ಅದನ್ನು ಸಂಪೂರ್ಣವಾಗಿ ಪ್ರಕಟಿಸಲಾಗಿಲ್ಲ ಹಾಗೂ ಅದರ ಮಾಹಿತಿಗಳನ್ನು ಬಳಸಿಕೊಂಡಿರಲಿಲ್ಲ.

ಕರ್ನಾಟಕ, ಬಿಹಾರ ಹಾಗೂ ತೆಲಂಗಾಣ ರಾಜ್ಯಗಳು ಈಗಾಗಲೇ ಜಾತಿ ಗಣತಿಯನ್ನು ನಡೆಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News