×
Ad

“ಲಾಲ್, ನೀವು ಈ ಕಿರೀಟಕ್ಕೆ ಅರ್ಹರು” ಎಂದು ಅಭಿನಂದಿಸಿದ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ

► ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯ ಬೆನ್ನಿಗೇ ಭಾವನಾತ್ಮಕ ಸಂದೇಶ ► "ನಿಮಗೆ ತಕ್ಕ ಗೌರವ ಸಿಗಲಿಲ್ಲ” ಎಂದ ಅಭಿಮಾನಿಗಳು

Update: 2025-09-21 08:40 IST

PC | PTI

ತಿರುವನಂತಪುರಂ: ಭಾರತೀಯ ಸಿನಿರಂಗದ ಅತ್ಯುನ್ನತ ಗೌರವವಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 2023ನೇ ಸಾಲಿಗೆ ಮಲಯಾಳಂ ಸಿನಿರಂಗದ ದಿಗ್ಗಜ ನಟ ಮೋಹನ್ ಲಾಲ್ ಅವರಿಗೆ ಪ್ರಕಟವಾದ ತಕ್ಷಣ, ಅವರ ನಟ ಹಾಗೂ ಸ್ನೇಹಿತ, ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಹೃದಯಸ್ಪರ್ಶಿ ಸಂದೇಶದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ತಮ್ಮ ಸಂತಸ ಹಂಚಿಕೊಂಡ ನಟ ಮಮ್ಮುಟ್ಟಿ, "ಸಹೋದ್ಯೋಗಿ, ಸಹೋದರ ಮತ್ತು ದಶಕಗಳಿಂದ ಈ ಅದ್ಭುತ ಸಿನಿಮೀಯ ಪ್ರಯಾಣವನ್ನು ಸಾಗಿಸುತ್ತಿರುವ ಕಲಾವಿದನಿಗಿಂತ ಹೆಚ್ಚಾಗಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೇವಲ ನಟನಿಗಲ್ಲ, ಸಿನೆಮಾವನ್ನು ಬದುಕಿ ಉಸಿರಾಡಿದ ನಿಜವಾದ ಕಲಾವಿದನಿಗೆ ಸಲ್ಲುತ್ತದೆ. ಲಾಲ್, ನಿಮ್ಮ ಬಗ್ಗೆ ನನಗೆ ಅಪಾರ ಹೆಮ್ಮೆ. ನೀವು ಈ ಕಿರೀಟಕ್ಕೆ ನಿಜವಾಗಿಯೂ ಅರ್ಹರು", ಎಂದು ಪೋಸ್ಟ್ ಮಾಡಿದ್ದಾರೆ.

ಮಮ್ಮುಟ್ಟಿಯ ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿ ಅಬು ಅಬ್ರಹಾಂ, “ಪ್ರಿಯ ಇಕ್ಕಾ, ಕಳೆದ ಹಲವು ದಶಕಗಳಿಂದ ಪ್ರಶಸ್ತಿಗಳು ಬಹುತೇಕ ರಾಜಕೀಯ ಪ್ರಭಾವದಿಂದ ಹಂಚಲ್ಪಟ್ಟಿವೆ. ನಿಮ್ಮ ಪ್ರತಿಭೆ ಮೋಹನ್ ಲಾಲ್ ಅವರಿಗಿಂತ ಕಡಿಮೆ ಏನೂ ಅಲ್ಲ, ಆದರೆ ಅನೇಕ ಬಾರಿ ಪಕ್ಷಪಾತದ ಕಾರಣದಿಂದ ನಿಮಗೆ ತಕ್ಕ ಗೌರವ ದೊರಕಲಿಲ್ಲ. ಆದರೂ ಸರ್ವಶಕ್ತನ ಕಣ್ಣುಗಳಲ್ಲಿ ನಿಮ್ಮ ಸಿನೆಮಾ ಸಾಧನೆ ಈಗಾಗಲೇ ಗುರುತಿಸಲ್ಪಟ್ಟಿದೆ. ಮೋಹನ್ ಲಾಲ್ ಅವರ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಯಶಸ್ಸು ಕಾಣಲಿ” ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

ತ್ರಿಲೋಕ್ ಚಂದ್ರನ್ ಎಂಬವರು, “ಮಲಯಾಳಂ ಸಿನಿರಂಗದ ಒಬ್ಬ ರಾಜ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದರೆ, ಮತ್ತೊಬ್ಬ ರಾಜ ಅವರು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದು ಮಲಯಾಳಂ ಚಿತ್ರರಂಗದ ವೈಭವವನ್ನು ತೋರಿಸುವ ಅಪರೂಪದ ಕ್ಷಣ. ಮಲಯಾಳಿ ಎಂಬ ಹೆಮ್ಮೆಗೆ ಮತ್ತೊಂದು ಕಾರಣ” ಎಂದು ಹೇಳಿದ್ದಾರೆ.

ಮನು ಪೂಮುಖತು ಅವರು, “ಈ ಪ್ರಶಸ್ತಿ ಮೋಹನ್ ಲಾಲ್ ಅವರಿಗೆ ಸಂಪೂರ್ಣವಾಗಿ ಅರ್ಹವಾಗಿದೆ. 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ತೋರಿದ ಅವರ ಬಹುಮುಖತೆ ಅಸಾಧಾರಣ. ಆಕ್ಷನ್, ಪ್ರೀತಿ, ಭಾವನೆ, ನೃತ್ಯ ಮತ್ತು ಕಲಾತ್ಮಕ ಪಾತ್ರಗಳಲ್ಲಿ ಅವರ ನಟನೆ ಅಪ್ರತಿಮ. ಐದು ರಾಷ್ಟ್ರೀಯ ಪ್ರಶಸ್ತಿಗಳು, ಒಂಭತ್ತು ರಾಜ್ಯ ಪ್ರಶಸ್ತಿಗಳು ಮತ್ತು ಇದೀಗ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ. ಅವರ ಕೊಡುಗೆ, ಸಿನಿ ಪ್ರೇಮಿಗಳಿಗೆ ಅವರು ಕೊಟ್ಟ ನೆನಪುಗಳು ಮತ್ತು ಸ್ಫೂರ್ತಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಅಭಿಪ್ರಾಯಪಟ್ಟಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News