ತುರ್ತು ಪರಿಸ್ಥಿತಿಗೆ 50 ವರ್ಷ| ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯ ಎಂದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿ ಇಂದಿಗೆ 50 ವರ್ಷಗಳು ಪೂರೈಸಿರುವ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, “ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ್ದ ರೀತಿಯನ್ನು ಯಾವುದೇ ಭಾರತೀಯ ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದ್ದಾರೆ. ಅಲ್ಲದೆ, ಸಾಂವಿಧಾನಿಕ ಆದರ್ಶಗಳನ್ನು ಬಲಪಡಿಸುವ ಕೇಂದ್ರ ಸರಕಾರದ ಸಂಕಲ್ಪವನ್ನು ಅವರು ಒತ್ತಿ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ‘ಸಂವಿಧಾನ ಹತ್ಯೆ ದಿನ’ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಸರಣಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ದೇಶದ ಪ್ರಜಾಪ್ರಭುತ್ವದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳ ಪೈಕಿ ತುರ್ತು ಪರಿಸ್ಥಿತಿ ಒಂದಾಗಿದೆ” ಎಂದು ಹೇಳಿದ್ದಾರೆ.
“ತುರ್ತು ಪರಿಸ್ಥಿತಿಯ ವೇಳೆ ಸಂವಿಧಾನ ಪ್ರತಿಪಾದಿಸಿರುವ ಮೌಲ್ಯಗಳನ್ನು ಕಡೆಗಣಿಸಲಾಗಿತ್ತು. ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿಡಲಾಗಿತ್ತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಇದರೊಂದಿಗೆ, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರನ್ನು ಜೈಲಿಗೆ ಕಳಿಸಲಾಯಿತು” ಎಂದು ಅವರು ಸ್ಮರಿಸಿದ್ದಾರೆ.
“ಅಂದಿನ ಕಾಂಗ್ರೆಸ್ ಸರಕಾರ ಪ್ರಜಾಪ್ರಭುತ್ವವನ್ನು ಸೆರೆಯಲ್ಲಿರಿಸಿತ್ತು. ಸಂಸತ್ತಿನ ಧ್ವನಿಯನ್ನು ಕ್ಷೀಣಗೊಳಿಸಿತ್ತು. ನ್ಯಾಯಾಲಯಗಳನ್ನು ನಿಯಂತ್ರಿಸಲು ಯತ್ನಿಸಿತ್ತು. ಹಿಂದುಳಿದವರು, ಬಡವರು ಹಾಗೂ ದೀನ ದಲಿತರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸಿತು. ಇವೆಲ್ಲವೂ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಸರಕಾರದ ಕುತಂತ್ರಗಳಿಗೆ ಉದಾಹರಣೆಗಳಾಗಿವೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
“ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಡಿದ ಪ್ರತಿಯೊಬ್ಬರಿಗೂ ನಾನು ವಂದಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಲು ಹಾಗೂ ತಮ್ಮ ಜೀವವನ್ನೇ ಮುಡುಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳ ಸಂರಕ್ಷಣೆಗಾಗಿ ದೇಶಾದ್ಯಂತ ಜನರು ಒಂದೇ ಗುರಿಯೊಂದಿಗೆ ಅಂದು ಒಗ್ಗಟ್ಟಾಗಿ ಕೆಲಸ ಮಾಡಿದ್ದರು” ಎಂದು ಅವರು ಈ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
“ಈ ಸಾಮಾಜಿಕ ಹೋರಾಟದಿಂದಾಗಿ ಕಾಂಗ್ರೆಸ್ ಸರಕಾರ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿ, ಹೊಸ ಚುನಾವಣೆ ಘೋಷಿಸುವಂತಾಯಿತು. ನಂತರ, ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತು” ಎಂದೂ ಅವರು ಹೇಳಿದ್ದಾರೆ.
“ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸಲು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂಬ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ. ನಾವು ಪ್ರಗತಿಯ ಹೊಸ ಎತ್ತರಕ್ಕೆ ಏರೋಣ ಹಾಗೂ ಬಡವರು, ದೀನದಲಿತರ ಕನಸುಗಳನ್ನು ನನಸಾಗಿಸೋಣ” ಎಂದು ಅವರು ಕರೆ ನೀಡಿದ್ದಾರೆ.
ಇದಕ್ಕೂ ಮುನ್ನ, 1975ರಲ್ಲಿ ಹೇರಿಕೆಯಾಗಿದ್ದ ತುರ್ತು ಪರಿಸ್ಥಿತಿಯ 50ನೇ ವರ್ಷದ ಅಂಗವಾಗಿ 2025ರಲ್ಲಿ ‘ಸಂವಿಧಾನ ಹತ್ಯೆ ದಿನ’ವನ್ನು ಆಚರಿಸಲಾಗುವುದು ಎಂದು ಕಳೆದ ವರ್ಷವೇ ಕೇಂದ್ರ ಸರಕಾರ ಘೋಷಿಸಿತ್ತು.