×
Ad

ವಂದೇಭಾರತ್ ರೈಲು ಚಾಲನೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಗೀತೆ | ಜಾತ್ಯತೀತತೆಯನ್ನು ನಾಶಗೊಳಿಸಲಾಗುತ್ತಿದೆ: ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ

Update: 2025-11-08 19:04 IST

ಪಿಣರಾಯಿ ವಿಜಯನ್ | Photo Credit : @pinarayivijayan

ತಿರುವನಂತಪುರಂ: ಎರ್ನಾಕುಲಂ-ಬೆಂಗಳೂರು ಮಾರ್ಗದ ವಂದೇಭಾರತ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಬನಾರಸ್ ನಿಂದ ವರ್ಚುಯಲ್ ಆಗಿ ಸಾಂಕೇತಿಕ ಚಾಲನೆ ನೀಡಿದರು. ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌)ದ ಗಂಗಾ ಗೀತ್ ಗೀತೆಯನ್ನು ವಿದ್ಯಾರ್ಥಿಗಳಿಂದ ಹಾಡಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, “ಇಂತಹ ಕ್ರಮದಿಂದ ಜಾತ್ಯತೀತತೆಯನ್ನು ನಾಶಗೊಳಿಸಲಾಗುತ್ತಿದೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದಕ್ಷಿಣ ರೈಲ್ವೆ ವಲಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕೇರಳ ಮುಖ್ಯುಮಂತ್ರಿ ಪಿಣರಾಯಿ ವಿಜಯನ್, “ಎರ್ನಾಕುಲಂ-ಬೆಂಗಳೂರು ಮಾರ್ಗವಾಗಿ ಸಂಚರಿಸುವ ವಂದೇಭಾರತ್ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌)ದ ಗೀತೆ ಹಾಡುವಂತೆ ಮಾಡಿರುವುದು ತೀವ್ರ ಪ್ರತಿಭಟನಾರ್ಹವಾಗಿದ್ದು, ಈ ನಡೆಯು ಅಸ್ವೀಕಾರಾರ್ಹವಾಗಿದೆ” ಎಂದು ಹೇಳಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದೂ ಅವರು ಜನತೆಗೆ ಕರೆ ನೀಡಿದ್ದಾರೆ.

“ಸರಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಇತರ ಧರ್ಮಗಳನ್ನು ದ್ವೇಷಿಸುವ, ಕೋಮು ವಿಭಜನೆ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌)ದ ಗೀತೆಯನ್ನು ಸೇರ್ಪಡೆ ಮಾಡಿರುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ನಡೆಗಳು ಸರಕಾರಿ ಕಾರ್ಯಕ್ರಮಗಳ ಜಾತ್ಯತೀತ ಗುಣವನ್ನು ನಾಶಗೊಳಿಸಲಿವೆ ಎಂದೂ ಅವರು ಆಕ್ಷೇಪಿಸಿದ್ದಾರೆ.

“ವಂದೇಭಾರತ್ ರೈಲಿನ ಉದ್ಘಾಟನಾ ಕಾರ್ಯಕ್ರಮವು ತೀವ್ರ ಹಿಂದುತ್ವ ರಾಜಕಾರಣ ನುಸುಳುವಿಕೆಗೆ ಸಾಕ್ಷಿಯಾಗಿದೆ. ಈ ನಡೆಯ ಹಿಂದೆ ಜಾತ್ಯತೀತತೆಯನ್ನು ನಾಶಗೊಳಿಸುವ ಗುರಿ ಹೊಂದಿರುವ ಸಂಕುಚಿತ ಮನಸ್ಥಿತಿ ಅಡಗಿದೆ” ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.

ಪಿಣರಾಯಿ ವಿಜಯನ್ ವಾಗ್ದಾಳಿಯ ಬೆನ್ನಿಗೇ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ವಂದೇಭಾರತ್ ರೈಲಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌)ದ ಗೀತೆ ಹಾಡುವಂತೆ ಮಾಡಿರುವುದರ ಕುರಿತು ವಿವರಣೆಗೆ ಆಗ್ರಹಿಸಿ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News