ಯೆಮನ್ ನಲ್ಲಿ ಕೇರಳದ ನರ್ಸ್ ಗೆ ವಿಧಿಸಲ್ಪಟ್ಟ ಗಲ್ಲು ಶಿಕ್ಷೆ ತಡೆಗೆ ವ್ಯಾಪಕ ಪ್ರಯತ್ನ
ನರ್ಸ್ ನಿಮಿಷಾ ಪ್ರಿಯಾ | ಮೃತ ಯೆಮನ್ ಪ್ರಜೆ PC: x.com/manoramanews
ಹೊಸದಿಲ್ಲಿ: ಯೆಮನ್ ಪ್ರಜೆಯನ್ನು ಕೊಂದ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಈ ತಿಂಗಳ 16ರಂದು ಮರಣದಂಡನೆ ವಿಧಿಸಲು ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಸಾವಿನ ಕುಣಿಕೆಯಿಂದ ಈಕೆಯನ್ನು ಪಾರು ಮಾಡಲು ಭಾರತೀಯ ಅಧಿಕಾರಿಗಳು ವ್ಯಾಪಕ ಪ್ರಯತ್ನ ಮಾಡುತ್ತಿದ್ದಾರೆ.
ವ್ಯಾಪಾರ ಪಾಲುದಾರನಾಗಿದ್ದ ಯೆಮನ್ ಪ್ರಜೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ 2017ರ ಜುಲೈನಲ್ಲಿ ನಿಮಿಷಾ ಪ್ರಿಯಾಳನ್ನು ಬಂಧಿಲಾಗಿತ್ತು. 2020ರಲ್ಲಿ ಯೆಮನ್ ನ್ಯಾಯಾಲಯ ಆಕೆಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2023ರ ನವೆಂಬರ್ ನಲ್ಲಿ ಸುಪ್ರೀಂ ಜ್ಯುಡೀಶಿಯಲ್ ಕೌನ್ಸಿಲ್ ನಿಮಿಷಾ ಪ್ರಿಯಾ ಅವರ ಮನವಿಯನ್ನು ತಿರಸ್ಕರಿಸಿತ್ತು. ಪ್ರಸ್ತುತ ಪ್ರಿಯಾ, ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ಸನಾ ಜೈಲಿನಲ್ಲಿದ್ದಾರೆ.
ಪ್ರಿಯಾ ಯೆಮನ್ ಪ್ರಜೆಯನ್ನು ಕೊಂದಿದ್ದಾಳೆ ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಲಯ ಆಕೆಗೆ ಮರಣ ದಂಡನೆ ವಿಧಿಸಿದ್ದರೂ, ಸಾವಿನ ಕುಣಿಕೆಯಿಂದ ತಪ್ಪಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ ಎಂದು ಮೂಲಗಳು ಹೇಳಿವೆ.
"ಆಕೆಗೆ ಮರಣದಂಡನೆ ವಿಧಿಸಿರುವುದರಿಂದ ಈ ಪ್ರಕರಣವನ್ನು ನಿಕಟವಾಗಿ ಅನುಸರಿಸುತ್ತಿದ್ದೇವೆ. ಯೆಮನ್ ಅಧಿಕಾರಿಗಳ ಜತೆ ಮತ್ತು ಆಕೆಯ ಕುಟುಂಬದವರ ಜತೆ ನಿರಂತರ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲ ನೆರವು ನೀಡಿದ್ದೇವೆ. ನಿರಂತರವಾಗಿ ಇದನ್ನು ಮುಂದುವರಿಸುತ್ತೇವೆ" ಎಂದು ಮೂಲಗಳು ಸ್ಪಷ್ಟಪಡಿಸಿವೆ. ಭಾರತ ಸರ್ಕಾರ ಕೂಡಾ ಅಗತ್ಯವಿರುವ ಎಲ್ಲ ನೆರವನ್ನು ನಿಮಿಷಾ ಪ್ರಿಯಾಗೆ ನೀಡಲಾಗುವುದು ಎಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿತ್ತು.
ಆದರೆ ಹೌದಿ ಬಂಡುಕೋರರ ಜತೆ ಅಧಿಕೃತ ಸಂಪರ್ಕವನ್ನು ಭಾರತ ಹೊಂದಿಲ್ಲದಿರುವುದು ಪ್ರಕರಣ ಸಂಕೀರ್ಣವಾಗಲು ಕಾರಣವಾಗಿದೆ. ಈ ಕಾರಣದಿಂದ ಇಸ್ಲಾಮಿಕ್ ಸಂಪ್ರದಾಯವಾದ 'ದಿಯಾತ್' ಅಥವಾ ಸಂತ್ರಸ್ತ ಕುಟುಂಬಕ್ಕೆ "ಬ್ಲಡ್ ಮನಿ" ನೀಡುವ ಮೂಲಕ ಸಾವಿನ ಕುಣಿಕೆಯಿಂದ ತಪ್ಪಿಸುವುದು ಸಂಕೀರ್ಣ ವಿಷಯವಾಗಿದೆ.
ಪ್ರಿಯಾ ತಾಯಿ ಪ್ರೇಮ ಕುಮಾರಿ ಕಳೆದ ವರ್ಷ ಯೆಮನ್ ಗೆ ತೆರಳಿ ಬ್ಲಡ್ ಮನಿ ಸಂಧಾನ ಮಾತುಕತೆ ನಡೆಸಿದ್ದರು. ಯೆಮನ್ ನಲ್ಲಿರುವ ಅನಿವಾಸಿ ಭಾರತೀಯರು ಇವರಿಗೆ ನೆರವಾಗಿದ್ದರು.