ಮತಪಟ್ಟಿಯನ್ನು ಡಿಜಿಟಲ್ ಸ್ವರೂಪದಲ್ಲಿ ನೀಡಿದರೆ, ಒಂದೇ ವಾರದಲ್ಲಿ ಮತಗಳ್ಳತನ ಸಾಬೀತು ಪಡಿಸುತ್ತೇವೆ: ಚುನಾವಣಾ ಆಯೋಗಕ್ಕೆ ಕೇರಳ ಕಾಂಗ್ರೆಸ್ ಸವಾಲು
ಚುನಾವಣಾ ಆಯೋಗ | Photo Credit : PTI
ತಿರುವನಂತಪುರಂ: ಇತ್ತೀಚೆಗೆ ಪ್ರಕಟಗೊಂಡ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಆರೋಪಗಳು ಕೇಳಿ ಬಂದಿವೆ. ಇದರ ಬೆನ್ನಿಗೇ, “ಮತಪಟ್ಟಿಯನ್ನು ಡಿಜಿಟಲ್ ಸ್ವರೂಪದಲ್ಲಿ ನೀಡಿದರೆ, ಒಂದೇ ವಾರದಲ್ಲಿ ನಾವು ಮತಗಳ್ಳತನವನ್ನು ಸಾಬೀತುಪಡಿಸುತ್ತೇವೆ. ನಿಮಗೆ ಈ ಸವಾಲು ಸ್ವೀಕರಿಸಲು ಸಾಧ್ಯವೆ?” ಎಂದು ಚುನಾವಣಾ ಆಯೋಗಕ್ಕೆ ಕೇರಳ ಕಾಂಗ್ರೆಸ್ ಸವಾಲು ಹಾಕಿದೆ.
ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಆತ್ಮೀಯರೇ, ನಿಮ್ಮ ಅಜ್ಞಾನವನ್ನು ಪ್ರದರ್ಶಿಸಬೇಡಿ. 2019ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಅಭ್ಯರ್ಥಿಗಳಿಗೆ ಮುದ್ರಿತ ಮತಪಟ್ಟಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಹೀಗಾಗಿ ನೀವು ಡಿಜಿಟಲ್ ಮತಪಟ್ಟಿಯನ್ನು ಹಕ್ಕಿನಂತೆ ಕೇಳಲು ಸಾಧ್ಯವಿಲ್ಲ. ಮತಪತ್ರಗಳಿಗೆ ಹೋಗಲು ಬಯಸುವ ನೀವು, ಡಿಜಿಟಲ್ ಮತಪಟ್ಟಿಯನ್ನು ಬಯಸುತ್ತಿರುವುದು ಸೋಜಿಗವಾಗಿದೆ” ಎಂದು ಪಲ್ಲವಿ ಸಿ.ಟಿ. ಎಂಬ ಬಳಕೆದಾರರೊಬ್ಬರು ಟೀಕಿಸಿದ್ದಾರೆ.
Dear @ECISVEEP,
— Congress Kerala (@INCKerala) November 17, 2025
Publish the Bihar's voters list in digital format, and we will prove the vote chori in one week. Wanna take up this challenge?#MVDA pic.twitter.com/bdB8dskCS3
“ತುಂಬಾ ವಿದ್ಯಾವಂತರ ರಾಜ್ಯ! ಮತಪಟ್ಟಿ ಈಗಾಗಲೇ ಲಭ್ಯವಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಂಡೂ ಆಗಿದೆ. ನಿಮ್ಮ ಏಜೆಂಟ್ ಗಳು ಅದಕ್ಕೆ ಸಹಿಯನ್ನೂ ಮಾಡಿದ್ದಾರೆ. ಅಪಹಾಸ್ಯದ ಚಟುವಟಿಕೆಗಳನ್ನು ನಿಲ್ಲಿಸಿ, ಒಂದಿಷ್ಟು ಕೆಲಸ ಮಾಡಿ” ಎಂದು ಎಟರ್ನಲ್ ಆಪ್ಟಿಮಿಸ್ಟ್ ಎಂಬ ಮತ್ತೊಬ್ಬ ಬಳಕೆದಾರರು ಛೇಡಿಸಿದ್ದಾರೆ.
“ಮತಪಟ್ಟಿಯನ್ನು ಡಿಜಟಲೀಕರಿಸಿ ಹಾಗೂ ಎಲ್ಲ ಏಕ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಿ. ನಂತರದ್ದು ಇತಿಹಾಸವಾಗಲಿದೆ! ನಿಮಗೆ ಬೆನ್ನು ಮೂಳೆ ಇದ್ದರೆ ಇದನ್ನು ಮಾಡಿ ಜ್ಞಾನೇಶ್” ಎಂದು ವಿ.ಜೆ.ಪೌಲ್ ಎಂಬ ಮತ್ತೊಬ್ಬ ಬಳಕೆದಾರರು ಸವಾಲು ಹಾಕಿದ್ದಾರೆ.
ಮೆಷಿನ್ ಗಳು ಓದಲು ಆಗುವಂತಹ ಮಾದರಿಯ ಮತಪಟ್ಟಿಗಳು ಸಾರ್ವಜನಿಕರಿಗೆ ಲಭ್ಯವಾಗುವ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಂತಹ ಮತಪಟ್ಟಿ ಬಿಡುಗಡೆಯಿಂದ ಮತದಾರರ ಖಾಸಗಿತನಕ್ಕೆ ತೀವ್ರ ಧಕ್ಕೆಯಾಗಲಿದೆ ಎಂದು ಈ ಹಿಂದಿನ ತೀರ್ಪನ್ನು ಉಲ್ಲೇಖಿಸಿ ನಿಯೋಜಿತ ಮುಖ್ಯಂ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ. ಜೋಯ್ ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಬಿಹಾರ ಮತಪಟ್ಟಿಗಳು ಚುನಾವಣಾ ಆಯೋಗದ ಅಂತರ್ಜಾಲ ತಾಣದಲ್ಲಿ ಪಿಡಿಎಫ್ ಮಾದರಿಯಲ್ಲಿ ಲಭ್ಯವಿದ್ದು, ಅದನ್ನು ಬಳಸಿಕೊಳ್ಳಿ ಹಾಗೂ ನಿಮಗೆ ಬೇಕಾದ ಮಾದರಿಯಲ್ಲಿ ಅದನ್ನು ಬಳಸಿಕೊಳ್ಳಿ ಎಂದು ರವಿಕುಮಾರ್ ಎಂಬ ನಾಲ್ಕನೆ ಬಳಕೆದಾರರು ಸಲಹೆ ನೀಡಿದ್ದಾರೆ.