×
Ad

Fact Check | ಐಎಸ್‌ಐಗೆ ಮುಸ್ಲಿಮರಿಗಿಂತ ಹೆಚ್ಚು ಹಿಂದೂಗಳನ್ನೇ ನೇಮಿಸಲಾಗಿದೆ ಎಂದು ಅಜಿತ್ ದೋವಲ್ ಹೇಳಿದ್ದು ಹೌದು, ಅದು ʼಡೀಪ್ ಫೇಕ್ʼ ಅಲ್ಲ!

Update: 2025-11-18 10:10 IST

Photo | ndtv

ಬೆಂಗಳೂರು: ಕೆಂಪು ಕೋಟೆ ಬಳಿ ನವೆಂಬರ್ 10ರಂದು ಸಂಭವಿಸಿದ ಭಯೋತ್ಪಾದಕ ದಾಳಿಯಲ್ಲಿ 13 ಮಂದಿ ಮೃತಪಟ್ಟ ಘಟನೆಯ ತೀವ್ರತೆ ಕಡಿಮೆಯಾಗುವ ಮುನ್ನವೇ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ 35 ಸೆಕೆಂಡ್‌ ಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಹೊಸ ವಿವಾದಕ್ಕೆ ಕಾರಣವಾಗಿದೆ.  

“ಭಾರತದಲ್ಲಿ ಐಎಸ್‌ಐ ಕಾರ್ಯಚಟುವಟಿಕೆಗಳಿಗೆ ಮುಸ್ಲಿಮರಿಗಿಂತ ಹೆಚ್ಚು ಹಿಂದೂಗಳನ್ನು ನೇಮಕ ಮಾಡಿಕೊಳ್ಳಲಾಗಿದೆ” ಎಂಬ ಹೇಳಿಕೆ ಕ್ಲಿಪ್‌ ನಲ್ಲಿ ಕೇಳಿಬರುತ್ತಿದ್ದು, ದಾಳಿಯ ನಂತರ ಹೆಚ್ಚಾಗಿರುವ ಕೋಮು ಆಯಾಮದ ಚರ್ಚೆಗೂ ಇದು ಕಿಚ್ಚು ಹಚ್ಚಿದೆ.

ವೀಡಿಯೊ ವೈರಲ್ ಬಳಿಕ CNN–NEWS18ಗೆ ಪ್ರತಿಕ್ರಿಯಿಸಿದ ಅಜಿತ್ ದೋವಲ್, ಇದು ʼಡೀಪ್‌ಫೇಕ್ʼ ಆಗಿದ್ದು, ತಾವು ಅಂತಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸಾರ್ವಜನಿಕ ಅಭಿಪ್ರಾಯವನ್ನು ತಪ್ಪು ದಾರಿಗೆಳೆಯಲು ಇದನ್ನು ರಚಿಸಲಾಗಿದೆ ಎಂಬುದಾಗಿ ಅವರು ಆರೋಪಿಸಿದರು. Moneycontrol ಕೂಡ ಇದೇ ಅಭಿಪ್ರಾಯವನ್ನು ಪ್ರತಿಧ್ವನಿಸಿತು.

Alt news ನಡೆಸಿದ Fact Check ಅಜಿತ್ ದೋವಲ್ ಅವರ ಹೇಳಿಕೆ ಡೀಪ್ ಫೇಕ್ ಅಲ್ಲ ಎಂದು ಹೇಳಿದೆ. ವೈರಲ್ ವೀಡಿಯೊದ ಕೀಫ್ರೇಮ್‌ ಗಳ ರಿವರ್ಸ್ ಇಮೇಜ್ ಹುಡುಕಾಟದಲ್ಲಿ, ಈ ಕ್ಲಿಪ್‌ 2014ರ ಮಾರ್ಚ್ 11ರಂದು ದೋವಲ್ ನೀಡಿದ ಉಪನ್ಯಾಸದ ಭಾಗವೆಂಬುದು ಪತ್ತೆಯಾಗಿದೆ. ಅದನ್ನು ಡೀಪ್‌ಫೇಕ್ ತಂತ್ರಜ್ಞಾನ ಸಾಮಾನ್ಯ ಬಳಕೆಗೆ ಬರುವುದಕ್ಕಿಂತಲೂ ಮುಂಚೆಯೇ ಆಸ್ಟ್ರೇಲಿಯಾ ಇಂಡಿಯಾ ಇನ್‌ಸ್ಟಿಟ್ಯೂಟ್ ಮಾರ್ಚ್ 20, 2014ರಂದು ಯೂಟ್ಯೂಬ್‌ ಗೆ ಅಪ್‌ಲೋಡ್ ಮಾಡಿತ್ತು.

ಅಧಿಕೃತ ವೀಡಿಯೊದ 1 ಗಂಟೆ 4 ನಿಮಿಷದ ಭಾಗದಲ್ಲಿ, ದೋವಲ್ ಸ್ವತಃ “1947ರಿಂದಲೂ ಐಎಸ್‌ಐ ನೇಮಕಾತಿಗೆ ಒಳಪಟ್ಟವರಲ್ಲಿ ಬಹುಪಾಲು ಹಿಂದೂಗಳೇ; ಶೇಕಡಾ 20ರಷ್ಟೂ ಮುಸ್ಲಿಮರು ಇರಲಿಲ್ಲ” ಎಂದು ಸ್ಪಷ್ಟವಾಗಿ ಹೇಳಿರುವುದು ಕೇಳಿಸುತ್ತದೆ. ಹೀಗಾಗಿ, ವೈರಲ್ ಕ್ಲಿಪ್ ನಕಲಿ ಅಲ್ಲ; AI ಡೀಪ್‌ಫೇಕ್ ಕೂಡ ಅಲ್ಲ ಎಂಬುದು Fact Checkನಲ್ಲಿ ದೃಢಪಟ್ಟಿದೆ.

Alt news ನಡೆಸಿದ Fact check ನಲ್ಲಿ ಈಗ ವೈರಲ್ ಆಗುತ್ತಿರುವ ವೀಡಿಯೊ ಕ್ಲಿಪ್‌ ಅಜಿತ್ ದೋವಲ್ ಅವರ ದೀರ್ಘ ಉಪನ್ಯಾಸದ ಒಂದು ಆಯ್ದ ಭಾಗವಾಗಿದೆ. ಉಪನ್ಯಾಸದಲ್ಲಿ ದೋವಲ್ ರಾಷ್ಟ್ರೀಯ ಭದ್ರತೆಯನ್ನು ಕೋಮು ದೃಷ್ಟಿಯಿಂದ ನೋಡುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಭಾರತೀಯ ಮುಸ್ಲಿಮರು ಐತಿಹಾಸಿಕವಾಗಿ ಭಯೋತ್ಪಾದನೆಯನ್ನು ಎದುರಿಸಿದ್ದಾರೆ ಎಂದು ಹೇಳಿದ್ದಾರೆ.

2012ರಲ್ಲಿ ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ 50,000 ಮೌಲಾನಗಳು ಜಾಗತಿಕ ಭಯೋತ್ಪಾದನೆ ವಿರುದ್ಧ ಫತ್ವಾ ಹೊರಡಿಸಿದ್ದನ್ನೂ ಅವರು ಉಲ್ಲೇಖಿಸಿದ್ದರು. ಜಾಗತಿಕ ಇಸ್ಲಾಮಿಕ್ ಭಯೋತ್ಪಾದನೆಯ ಸಂತ್ರಸ್ತರಲ್ಲಿ ಬಹುತೇಕರು ಮುಸ್ಲಿಮರೇ ಎಂದು ಅವರು ಹೇಳಿದ್ದರು. ಭಾರತದ ಇಸ್ಲಾಮಿಕ್ ನಾಯಕರು ಇಂಡಿಯನ್ ಮುಜಾಹಿದ್ದೀನ್ ನ ಗುರಿಯ ಪಟ್ಟಿಯಲ್ಲಿದ್ದಾರೆ ಎಂಬುದನ್ನೂ ಅವರು ನೆನಪಿಸಿದ್ದರು.

ವೈರಲ್ ಆಗಿರುವ ವೀಡಿಯೊ ನಕಲಿಯಲ್ಲ, ಆದರೆ ಸಂದರ್ಭವಿಲ್ಲದ ಆಯ್ದ ಭಾಗವನ್ನು ಹಂಚಿಕೊಳ್ಳುವ ಮೂಲಕ ದೋವಲ್ ಅವರ ಸಂಪೂರ್ಣ ಸಂದೇಶವನ್ನು ತಿರುಚಲಾಗಿದೆ ಎಂದು Alt news ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News