FACT CHECK | ಸುಂಕ ಘೋಷಣೆ ಬಗ್ಗೆ ಮೌನವಹಿಸಿದ ಮೋದಿಯನ್ನು ಟ್ರಂಪ್ ಟೀಕಿಸಿದ್ದಾರೆ ಎನ್ನುವುದು ಸುಳ್ಳು!
PC | thecurrent.pk
ಹೊಸದಿಲ್ಲಿ: ಭಾರತದ ಮೇಲೆ ಶೇ.25ರಷ್ಟು ಸುಂಕ ಘೋಷಣೆ ಬಗ್ಗೆ ಮೌನವಹಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ ಎಂದು ಹೇಳುವ ಟ್ರೂತ್ ಸೋಷಿಯಲ್ ಪೋಸ್ಟ್ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜಕ್ಕೂ ಈ ರೀತಿ ಟ್ರಂಪ್ ಪೋಸ್ಟ್ ಮಾಡಿದ್ದಾರ? ಈ ವೈರಲ್ ಸ್ಕ್ರೀನ್ ಶಾಟ್ ನ ವಾಸ್ತವವೇನು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳ ಮೇಲೆ ಶೇ.25ರಷ್ಟು ಸುಂಕವನ್ನು ವಿಧಿಸುವುದಾಗಿ ಬುಧವಾರ ಘೋಷಿಸಿದ್ದರು. ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವದಕ್ಕಾಗಿ ಭಾರತವು ಹೆಚ್ಚುವರಿ ದಂಡವನ್ನೂ ಪಾವತಿಸಬೇಕಿದೆ ಎಂದು ಟ್ರಂಪ್ ಹೇಳಿದ್ದರು. ಇದರ ಬೆನ್ನಲ್ಲೇ ಮೋದಿಯ ಮೌನವನ್ನು ಟ್ರಂಪ್ ಪ್ರಶ್ನಿಸಿದ್ದಾರೆ ಎಂದು ಹೇಳುವ ಟ್ರೂತ್ ಸೋಷಿಯಲ್ ಪೋಸ್ಟ್ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
►ವೈರಲ್ ಪೋಸ್ಟ್ ನಲ್ಲಿ ಏನಿದೆ?
ʼಪ್ರಧಾನಿ ಮೋದಿ ನನ್ನ ಟ್ವೀಟ್‌ಗಳು, ಹೇಳಿಕೆಗಳು ಅಥವಾ ಸುಂಕ ಘೋಷಣೆ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ನಂಬುದು ಕಷ್ಟ. ನಾವು ಭಾರತಕ್ಕೆ ರಕ್ಷಣಾ ಬೆಂಬಲ, ಉತ್ತಮ ಒಪ್ಪಂದಗಳು, ದೊಡ್ಡ ಜನಸಮೂಹ ಸೇರಿದಂತೆ ಬಹಳಷ್ಟು ಕೊಟ್ಟಿದ್ದೇವೆ. ಆದರೆ ಈಗ ಸಂಫೂರ್ಣವಾಗಿ ನಿಶ್ಯಬ್ದತೆ ವಹಿಸಿದ್ದಾರೆ. ಧನ್ಯವಾದ ಕೂಡ ಹೇಳಿಲ್ಲ. ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸುವಂತೆ ಮಾಡಿದವನು ನಾನೇ ಎಂಬುದನ್ನು ಮರೆಯಬೇಡಿ. ಬೇರೆ ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ನನಗೆ ನೋಬೆಲ್ ಪ್ರಶಸ್ತಿ ಸಿಗಬೇಕಿತ್ತು ಎಂದು ಹಲವರು ಹೇಳಿದರು. ಅಮೆರಿಕದ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಆದರೆ, ಭಾರತ ಪ್ರಯೋಜನ ಪಡೆಯುತ್ತಿದೆ. ನಾನು ಮೋದಿಯನ್ನು ಯಾವಾಗಲೂ ಇಷ್ಟಪಡುತ್ತಿದ್ದೆ. ಆದರೆ, ಈ ರೀತಿಯ ಅಗೌರವವನ್ನು ಮರೆಯಲು ಸಾಧ್ಯವಿಲ್ಲ. ಇದು ವ್ಯಾಪಾರಕ್ಕೂ ಕೆಟ್ಟದು, ಸ್ನೇಹಕ್ಕೂ ಕೆಟ್ಟದು. ಅಮೆರಿಕ ಮೊದಲು ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿತ್ತು.
ಪೋಸ್ಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
►ವಾಸ್ತವವೇನು?
ಸ್ಕ್ರೀನ್ ಶಾಟ್ ನ ಸತ್ಯಾಸತ್ಯತೆಯ ಬಗ್ಗೆ ʼದಿ ಕರೆಂಟ್ʼ(The Current) ಸುದ್ದಿ ಜಾಲತಾಣ ಪರಿಶೀಲನೆ ನಡೆಸಿದೆ. ವಿಶೇಷವಾಗಿ ಎಕ್ಸ್ ನಲ್ಲಿ ಪರಿಶೀಲನೆ ನಡೆಸಿದೆ. ಕಳೆದ 24 ಗಂಟೆಗಳಲ್ಲಿ ಟ್ರೂತ್ ಸೋಶಿಯಲ್ ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮಾಡಿದ ಎಲ್ಲಾ ಪೋಸ್ಟ್‌ಗಳನ್ನು ಪರಿಶೀಲಿಸಿದೆ. ಆದರೆ ಇಂತಹ ಯಾವುದೇ ಪೋಸ್ಟ್ ಕಂಡುಬಂದಿಲ್ಲ, ವೈರಲ್ ಪೋಸ್ಟ್ ಸ್ಕ್ರೀನ್ ಶಾಟ್ ನಕಲಿ ಎಂದು ಹೇಳಿದೆ.
ʼಟ್ರೂತ್ ಸೋಶಿಯಲ್ ನಲ್ಲಿ ಅಮೆರಿಕ ಅಧ್ಯಕ್ಷರು ಹಂಚಿಕೊಂಡ ಎಲ್ಲಾ 40 ಪೋಸ್ಟ್‌ಗಳನ್ನು ಪರಿಶೀಲಿಸಿದಾಗ, ಅವರು ಈ ರೀತಿಯ ಪೋಸ್ಟ್ ಮಾಡಿರುವುದು ಕಂಡು ಬಂದಿಲ್ಲʼ ಎಂದು ʼದಿ ಕರೆಂಟ್ʼ ಹೇಳಿದೆ.
ಹೆಚ್ಚಿನ ಪರಿಶೀಲನೆ ನಡೆಸಿದಾಗ ಈ ಸ್ಕ್ರೀನ್ ಶಾಟ್ ʼʼವೋಕ್‌ಫ್ಲಿಕ್ಸ್ʼ(Wokeflix) ಎಂಬ ಖಾತೆ ಹಂಚಿಕೊಂಡಿದೆ ಎಂದು ದಿ ಕರೆಂಟ್ ಪತ್ತೆ ಹಚ್ಚಿದೆ. ಇದೇ ಸ್ಕ್ರೀನ್ ಶಾಟ್ ಟ್ರಂಪ್ ಪೋಸ್ಟ್ ಎಂದು ಹಲವರು ಹಂಚಿಕೊಂಡಿದ್ದಾರೆ ಎಂದು ʼದಿ ಕರೆಂಟ್ʼ ತಿಳಿಸಿದೆ.