ಅಕ್ರಮ ದತ್ತು ; ಮಗು ಎಚ್ ಐ ವಿ ಪೀಡಿತೆ ಎಂದು ಗೊತ್ತಾಗುತ್ತಿದ್ದಂತೆ ಬಿಟ್ಟು ಹೋದ ದತ್ತು ತಾಯಿ
ಸಾಂದರ್ಭಿಕ ಚಿತ್ರ
ಮುಂಬೈ: ದತ್ತು ಪ್ರಕ್ರಿಯೆಯು ಸುಧೀರ್ಘ ಕಾನೂನಾತ್ಮಕ ವಿಧಾನ ಎಂದು ಇಬ್ಬರು ತಾಯಂದಿರು, ಅಕ್ರಮ ದತ್ತು ಪ್ರಕ್ರಿಯೆ ನಡೆಸಿದ ಪರಿಣಾಮ, ಎಚ್ ಐ ವಿ ಪೀಡಿತ ನಾಲ್ಕು ತಿಂಗಳ ಹೆಣ್ಣು ಮಗುವು ಅನಾಥವಾಗಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ನಡೆದಿದೆ.
ಕಲ್ಯಾಣ್ ನಲ್ಲಿ ವಾಸವಿರುವ ಹಿಂದೂ ಮತ್ತು ಮುಸ್ಲಿಂ ಮಹಿಳೆ ನೆರೆಹೊರೆಯವರು. ಹಿಂದೂ ಮಹಿಳೆ ಗರ್ಭವತಿಯಾಗಿದ್ದು, ಆಕೆಯ ಪತಿ ಮಾದಕ ವ್ಯಸನಿಯಾಗಿದ್ದರಿಂದ ಆಕೆಗೆ ಮಗು ಬೇಕಿರಲಿಲ್ಲ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಮುಸ್ಲಿಂ ಮಹಿಳೆಗೆ ಗರ್ಭಪಾತವಾದ ಹಿನ್ನೆಲೆಯಲ್ಲಿ ಆಕೆಗೆ ಮಗು ಬೇಕಿತ್ತು. ಇಬ್ಬರೂ ನೆರೆಹೊರೆಯವರಾಗಿದ್ದರಿಂದ ಪರಸ್ಪರ ಮಾತನಾಡಿಕೊಂಡು, ಹಿಂದೂ ಮಹಿಳೆಯಿಂದ ಮಗುವನ್ನು ದತ್ತುರೂಪದಲ್ಲಿ ಪಡೆಯಲು ಮುಸ್ಲಿಂ ಮಹಿಳೆ ಬಯಸಿದ್ದರು. ಈ ಬಗ್ಗೆ ಇಬ್ಬರೂ ದತ್ತು ಒಪ್ಪಂದ ಮಾಡಿಕೊಂಡರು.
ಅದರಂತೆ ಹಿಂದೂ ಮಹಿಳೆಯು ಮುಸ್ಲಿಂ ಮಹಿಳೆಯ ಆಧಾರ್ ಕಾರ್ಡ್ ಬಳಸಿ ಕೆಇಎಂ ಆಸ್ಪತ್ರೆಗೆ ದಾಖಲಾಗಿ, ಅಕ್ಟೋಬರ್ 2024ರಂದು ಹೆರಿಗೆಯಾಗಿದ್ದರು. ಆ ಬಳಿಕ ಮುಸ್ಲಿಂ ಮಹಿಳೆ ತಾಯಿ ಎಂದು, ಮುಸ್ಲಿಂ ಹೆಸರಿನಲ್ಲಿ ಹೆಣ್ಣುಮಗುವಿಗೆ ಜನನ ಪ್ರಮಾಣ ಪತ್ರವೂ ಮಾಡಿಸಿಕೊಂಡಿದ್ದರು. ಐದು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ, ಮುಸ್ಲಿಂ ಮಹಿಳೆಯು ಮಗುವನ್ನು ಮನೆಗೆ ಕರೆದೊಯ್ದರು. ಮಗು ಅಸ್ವಸ್ಥವಾಗಿದ್ದರಿಂದ ಜನವರಿಯಲ್ಲಿ ವಾಡಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವಿಗೆ ಅಪೆಂಡಿಸ್ ಪತ್ತೆಯಾದ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆಯ ವೇಳೆ ಮಗುವಿಗೆ ಎಚ್ ಐ ವಿ ಪಾಸಿಟಿವ್ ಇರುವುದು ಕಂಡುಬಂತು. ಆ ವೇಳೆ ಮಗುವಿನ ತಾಯಿಯಾಗಿದ್ದ ಮುಸ್ಲಿಂ ಮಹಿಳೆಯನ್ನು ಎಚ್ ಐ ವಿ ಪರೀಕ್ಷೆಗೆ ಒಳಪಡಿಸಿದಾಗ, ಆಕೆಯು ಆಸ್ಪತ್ರೆಯ ಸಿಬ್ಬಂದಿಗಳ ಜೊತೆಗೆ ಅಕ್ರಮ ದತ್ತು ವಿಚಾರವನ್ನು ಬಹಿರಂಗಪಡಿಸಿದಳು. ಆ ವೇಳೆಗಾಗಲೇ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಮುಸ್ಲಿಂ ತಾಯಿ ನಾಪತ್ತೆಯಾಗಿದ್ದಳು. ಆಸ್ಪತ್ರೆಯ ಸಿಬ್ಬಂದಿ ಕೂಡಲೇ ಮುಂಬೈನಲ್ಲಿರುವ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖೀ ಸಹಾಯವಾಣಿಗೆ ಮಾಹಿತಿ ನೀಡಿದರು. ಅದರಂತೆ ಫೆ.21ರಂದು ಸಖೀ ಸಹಾಯವಾಣಿಯು ಥಾಣೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಘಟನೆಯ ಕುರಿತ ಮಾಹಿತಿಯುಳ್ಳ ಈಮೇಲ್ ಕಳುಹಿಸಿತು.
ಮಕ್ಕಳ ರಕ್ಷಣಾ ಘಟಕವು ಮುಸ್ಲಿಂ ಮಹಿಳೆಯನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೂ, ಜನ್ಮವಿತ್ತ ಬಳಿಕ ದತ್ತು ನೀಡಿದ ಹಿಂದೂ ಮಹಿಳೆಯ ಫೋನ್ ನಂಬರ್ ಸಂಗ್ರಹಿಸಲು ಯಶಸ್ವಿಯಾಯಿತು. ಅದರಂತೆ ಥಾಣೆಯ ಮನ್ಪಡ ಪೊಲೀಸ್ ಠಾಣೆಯಲ್ಲಿ ಫೆ.28ರಂದು ದೂರು ದಾಖಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಮುಂಬೈನ ಭೋಯ್ವಾಡಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಈ ಕುರಿತು ಮಾನತನಾಡಿದ ಥಾಣೆ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಯೊಬ್ಬರು, "ಜನರು ದತ್ತು ನಿಯಮಗಳನ್ನು ಪಾಲಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ದತ್ತು ಪಡೆಯಲು ಇರುವ ಅಡೆತಡೆಗಳನ್ನು ಸಡಿಲಿಸಬೇಕು. ಈ ಪ್ರಕರಣವು ಸರ್ಕಾರಿ ಸ್ವಾಮ್ಯದ ಪ್ರಮುಖ ಆಸ್ಪತ್ರೆಗಳಿಗೆ ಹೆರಿಗೆಗಾಗಿ ದಾಖಲಾಗುವ ಗರ್ಭಿಣಿಯರ ಗುರುತಿನ ತಪಾಸಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ" ಎಂದು ಹೇಳಿದರು.
ಆಸ್ಪತ್ರೆಗಳು, ಚಿಕಿತ್ಸಾಲಯಗಳಲ್ಲಿ ನಡೆಯುತ್ತಿರುವ ಇಂತಹ ಅಕ್ರಮ ದತ್ತುಗಳ ಬಗ್ಗೆ ತನಿಖೆ ನಡೆಸಬೇಕೆಂದು ಸಾಮಾಜಿಕ ಹೋರಾಟಗಾರರು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ.