×
Ad

ʼತೆಂಗಿನಕಾಯಿ ಕೊಡಿ, ಹೊಟ್ಟೆ ತುಂಬಾ ಊಟ ಮಾಡಿʼ : ಕೇರಳದಲ್ಲಿ ವಿನಿಮಯ ವ್ಯವಸ್ಥೆಯ ಅಪರೂಪದ ಹೋಟೆಲ್!

Update: 2025-10-03 08:28 IST

PC | newindianexpress

ಕಣ್ಣೂರು: ರಸ್ತೆ ಬದಿಯಲ್ಲಿ ಬೊಂಡ (ಎಳ್ನೀರು) ಮಾರುವವರ ಬಳಿಯೂ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ ಇರುವ ಆಧುನಿಕ ಯುಗದಲ್ಲಿ ಜಿಲ್ಲೆಯ ಪನೂರು ಬಳಿಯ ಪೊಲಿಯೂರಿನಲ್ಲಿ ಇಂದಿಗೂ ಹಣದ ವ್ಯವಹಾರವೇ ಇಲ್ಲದೇ, ಪ್ರಾಚೀನ ಆರ್ಥಿಕತೆಯಲ್ಲಿ ಜಾರಿಯಲ್ಲಿದ್ದ ವಿನಿಮಯ ವ್ಯವಸ್ಥೆ ಮೂಲಕ ವಹಿವಾಟು ನಡೆಯುತ್ತದೆ.

ಹಲವು ದಶಕಗಳಿಂದ ಈ ವ್ಯವಸ್ಥೆ ಇಲ್ಲಿ ಮುಂದುವರಿದುಕೊಂಡು ಬಂದಿದ್ದು, ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶ್ರೀಧರನ್ ಅವರ ಈ ಪುಟ್ಟ ಹೋಟೆಲ್‍ನಲ್ಲಿ ಒಂದು ತೆಂಗಿನಕಾಯಿ ಕೊಟ್ಟರೆ ಪರೋಟಾ ಮತ್ತು ಚಹಾ ಸವಿಯಬಹುದು. ಎರಡು ಕಾಯಿ ಕೊಟ್ಟರೆ ಮರಗೆಣಸಿನ ಅಥವಾ ಚಿಕನ್ ಕರಿ ಇರುವ ಪುಷ್ಕಳ ಭೋಜನ. ಗ್ರಾಮದವರೇ ಹೆಚ್ಚಾಗಿ ಭೇಟಿ ನೀಡುವ ಇಲ್ಲಿ ರೈತರು ಹಣದ ಬದಲು ಸಾಮಾನ್ಯವಾಗಿ ಬಾಳೆಹಣ್ಣು, ಹಲಸಿನಹಣ್ಣು ಅಥವಾ ತರಕಾರಿಗಳನ್ನು ಕೂಡಾ ನೀಡುತ್ತಾರೆ.

ಈ ಅಪರೂಪದ ಹೋಟೆಲ್ ಇದೀಗ ಜಾಲತಾಣಿಗರ ಗಮನ ಸೆಳೆದಿದೆ. ಕ್ಯಾಮೆರಾ ತೂಗಿಹಾಕಿಕೊಂಡು ಬರುವವರು ಪರೋಟಾ ಹಿಟ್ಟು ಕಲಸುವುದರಿಂದ ಹಿಡಿದು ಚಹಾ ಮಾಡುವರೆಗೂ ಪ್ರತಿಯೊಂದನ್ನೂ ಕ್ಲಿಕ್ಕಿಸಿ ಯೂಟ್ಯೂಬ್ ಅಥವಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದು, ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

"ಹಿಂದೆ ಕೇವಲ ಗ್ರಾಮಸ್ಥರು ಮಾತ್ರ ಬರುತ್ತಿದ್ದರು. ಆದರೆ, ಇದೀಗ ಆನ್‍ಲೈನ್ ವಿಡಿಯೊಗಳಿಂದಾಗಿ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ" ಎಂದು ಶ್ರೀಧರನ್ ಹೇಳುತ್ತಾರೆ. ದಿಢೀರ್ ಖ್ಯಾತಿಯ ಬಳಿಕವೂ ವ್ಯವಸ್ಥೆ ಸ್ವಲ್ಪವೂ ಬದಲಾಗಿಲ್ಲ.

ವಿದ್ಯುತ್, ಅಡುಗೆ ಅನಿಲ, ರೆಫ್ರಿಜರೇಟರ್ ಹೀಗೆ ಯಾವ ಆಧುನಿಕ ವ್ಯವಸ್ಥೆಯೂ ಇಲ್ಲದೆಯೇ ಅಡುಗೆ ಸಿದ್ಧಪಡಿಸಲಾಗುತ್ತದೆ. ಗ್ರಾಹಕರು ಕೊಟ್ಟ ತೆಂಗಿನಕಾಯಿ ಪದಾರ್ಥಕ್ಕೆ ಬಳಕೆಯಾಗುತ್ತದೆ. ಅಥವಾ ಕರಿಯಲು ಎಣ್ಣೆ ತಯಾರಿಸಲು ಬಳಕೆಯಾಗುತ್ತದೆ.

ಜಾಲತಾಣಗಳಿಂದಾಗಿ ಪುಟ್ಟ ಹೋಟೆಲ್ ನಮ್ಮ ಊರಿಗೆ ಖ್ಯಾತಿ ತಂದುಕೊಟ್ಟಿದೆ ಎಂದು ಗ್ರಾಮಸ್ಥರು ಖುಷಿಯಿಂದ ಹೇಳಿಕೊಳ್ಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News