ಹಣಕಾಸಿನ ಕೊರತೆ: ಸಾಗರೋತ್ತರ ವಿದ್ಯಾರ್ಥಿ ವೇತನಗಳನ್ನು ತಡೆಹಿಡಿದ ಕೇಂದ್ರ ಸರಕಾರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2025-26ನೇ ಶೈಕ್ಷಣಿಕ ವರ್ಷಕ್ಕಾಗಿ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ(ಎನ್‌ಒಎಸ್)ಕ್ಕೆ ಆಯ್ಕೆಯಾಗಿರುವ 106 ಅಭ್ಯರ್ಥಿಗಳ ಪೈಕಿ 40 ಜನರಿಗೆ ತಾತ್ಕಾಲಿವಾಗಿ ವಿದ್ಯಾರ್ಥಿ ವೇತನಗಳನ್ನು ಮಂಜೂರು ಮಾಡಿದೆ. ಉಳಿದ 66 ಅಭ್ಯರ್ಥಿಗಳಿಗೆ ಹಣಕಾಸಿನ ಲಭ್ಯತೆಗೊಳಪಟ್ಟು ಮಂಜೂರಾತಿ ಪತ್ರಗಳನ್ನು ನೀಡಬಹುದು ಎಂದು ಅದು ನೋಟಿಸ್‌ನಲ್ಲಿ ತಿಳಿಸಿದೆ ಎಂದು hindustantimes.com ವರದಿ ಮಾಡಿದೆ.
ಜುಲೈ 1ರ ಪ್ರಕಟಣೆಯ ಪ್ರಕಾರ ಸಚಿವಾಲಯವು 106 ಅಭ್ಯರ್ಥಿಗಳನ್ನು ತನ್ನ ಆಯ್ಕೆ ಪಟ್ಟಿಯಲ್ಲಿ ಮತ್ತು 64 ಅಭ್ಯರ್ಥಿಗಳನ್ನು ಆಯ್ಕೆಯಾಗದ ಪಟ್ಟಿಯಲ್ಲಿ ಇರಿಸಿದೆ. 207 ಅಭ್ಯರ್ಥಿಗಳನ್ನು ತಿರಸ್ಕರಿಸಲಾಗಿದೆ. 2025-26ನೇ ಸಾಲಿಗಾಗಿ ಅದು ಒಟ್ಟು 440 ಅರ್ಜಿಗಳನ್ನು ಸ್ವೀಕರಿಸಿತ್ತು.
ಆಯ್ಕೆಯಾಗದ ಎಂದರೆ ಶೇ.10 ರಾಜ್ಯ ಮತ್ತು ಇತರ ಕೋಟಾಗಳ ಮಿತಿಯಿಂದಾಗಿ ಪಟ್ಟಿಯಲ್ಲಿ ವಿದ್ಯಾರ್ಥಿಗಳನ್ನು ಪರಿಗಣಿಸಲಾಗಿಲ್ಲ ಎಂದು ಅರ್ಥ. ತಾತ್ಕಾಲಿಕ ವಿದ್ಯಾರ್ಥಿ ವೇತನಗಳಿಗೆ ಆಯ್ಕೆಯಾಗಿರುವರು ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ವೈಫಲ್ಯದಿಂದಾಗಿ ತಿರಸ್ಕರಿಲ್ಪಟ್ಟರೆ ಈ ಆಯ್ಕೆಯಾಗದ ವಿದ್ಯಾರ್ಥಿಗಳನ್ನು ಮುಂದಿನ ಪಟ್ಟಿಯಲ್ಲಿ ಪರಿಗಣಿಸಲಾಗುವುದು. ಹಿಂದಿನ ವರ್ಷಗಳಲ್ಲಿ ಆಯ್ಕೆಯಾದ ಪಟ್ಟಿಯಲ್ಲಿನ ಎಲ್ಲ ವಿದ್ಯಾರ್ಥಿಗಳು ಏಕಕಾಲದಲ್ಲಿ ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರಗಳನ್ನು ಸ್ವೀಕರಿಸಿದ್ದರು. ಈ ವರ್ಷ ಹಣಕಾಸಿನ ಲಭ್ಯತೆಯನ್ನು ಅವಲಂಬಿಸಿ ಹಂತ ಹಂತವಾಗಿ ಪತ್ರಗಳನ್ನು ವಿತರಿಸಲು ಸಚಿವಾಲಯವು ನಿರ್ಧರಿಸಿದ್ದು,ಇದು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ತಳ್ಳಿದೆ.
1954-55ರಲ್ಲಿ ಆರಂಭಗೊಂಡ ಎನ್‌ಒಎಸ್ ಕಾರ್ಯಕ್ರಮವು ವಾರ್ಷಿಕ ಆದಾಯ 18 ಲಕ್ಷ ರೂ.ಗಳನ್ನು ಮೀರದ ಪರಿಶಿಷ್ಟ ಜಾತಿಗಳು(ಎಸ್‌ಸಿ),ಡಿನೋಟಿಫೈಡ್ ಅಲೆಮಾರಿ ಪಂಗಡಗಳು(ಡಿಎನ್‌ಟಿ),ಅರೆ ಅಲೆಮಾರಿ ಪಂಗಡಗಳು, ಭೂರಹಿತ ಕೃಷಿಕಾರ್ಮಿಕರು ಅಥವಾ ಸಾಂಪ್ರದಾಯಿಕ ಕುಶಲಕರ್ಮಿ ವರ್ಗಗಳ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರಮುಖ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.
ಕಾರ್ಯಕ್ರಮವು ವಿಶ್ವದ 500 ಅತ್ಯುನ್ನತ ವಿವಿಗಳಲ್ಲಿ(ಕ್ಯೂಎಸ್ ರ್ಯಾಂಕಿಂಗ್ ಪ್ರಕಾರ) ಸ್ನಾತಕೋತ್ತರ(ಗರಿಷ್ಠ ಮೂರು ವರ್ಷಗಳಿಗೆ) ಅಥವಾ ಪಿಎಚ್‌ಡಿ(ಗರಿಷ್ಠ ನಾಲ್ಕು ವರ್ಷಗಳಿಗೆ) ವ್ಯಾಸಂಗಕ್ಕಾಗಿ ವಾರ್ಷಿಕ 16,920 ಡಾಲರ್ ವರೆಗೆ ವಿದ್ಯಾರ್ಥಿ ವೇತನಗಳನ್ನು ನೀಡುತ್ತದೆ. ಕಾರ್ಯಕ್ರಮವು ಪ್ರತಿ ರಾಜ್ಯಕ್ಕೆ ಶೇ.10ರ ಮಿತಿಯೊಂದಿಗೆ ವಾರ್ಷಿಕ 125 ವಿದ್ಯಾರ್ಥಿ ವೇತನಗಳನ್ನು ಒದಗಿಸುತ್ತದೆ.
ಆದಾಗ್ಯೂ, ವಿದ್ಯಾರ್ಥಿ ವೇತನಗಳನ್ನು ನೀಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅನುಮೋದನೆ ಅಗತ್ಯವಿದೆ ಎಂದು ಸಚಿವಾಲಯವು ತಿಳಿಸಿದೆ.
ಈ ಕಾರ್ಯಕ್ರಮಕ್ಕಾಗಿ ಬಜೆಟ್ ಹಂಚಿಕೆಯಲ್ಲಿ ಗಮನಾರ್ಹ ಏರಿಕೆಯನ್ನು ಮಾಡಲಾಗಿದ್ದರೂ ಅನಿಶ್ಚಿತತೆ ತಲೆದೋರಿದೆ.
‘ಫಲಿತಾಂಶಗಳನ್ನು ಪ್ರಕಟಿಸುವ ಮುನ್ನ ವಿದ್ಯಾರ್ಥಿಗಳೊಂದಿಗೆ ಯಾವುದೇ ಸಂವಹನ ನಡೆಸದೆ ಸಚಿವಾಲಯವು ಅಗ್ರ 40 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಮಂಜೂರಾತಿ ಪತ್ರಗಳನ್ನು ನೀಡುವುದಾಗಿ ತಿಳಿಸಿದೆ. ನಾನು ಅಗ್ರ 40ರಲ್ಲಿ ಸ್ಥಾನ ಪಡೆದಿಲ್ಲ ಮತ್ತು ಅದು ಪಟ್ಟಿಯಲ್ಲಿನ ಮುಂದಿನ 40 ವಿದ್ಯಾರ್ಥಿಗಳಿಗೆ ಪತ್ರಗಳನ್ನು ನೀಡಿದ ಬಳಿಕವೂ ಪತ್ರವನ್ನು ಪಡೆಯಲು ನನಗೆ ಸಾಧ್ಯವಾಗುವುದಿಲ್ಲ. ನಾನು ಅತಂತ್ರನಾಗಿದ್ದೇನೆ ಮತ್ತು ಇತರ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸಬೇಕೇ ಅಥವಾ ಕಾಯಬೇಕೇ ಎಂಬ ಗೊಂದಲದಲ್ಲಿದ್ದೇನೆ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಬಳಿಕವೂ ಸಚಿವಾಲಯದ ಬಳಿ ಸಾಕಷ್ಟು ಹಣವಿಲ್ಲದಿದ್ದರೆ ನಾನು ವಿದೇಶದಲ್ಲಿ ವ್ಯಾಸಂಗ ಮಾಡುವುದು ಸಾಧ್ಯವಾಗದಿರಬಹುದು ಮತ್ತು ಅದು ನನ್ನ ಶೈಕ್ಷಣಿಕ ವೃತ್ತಿ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ’ ಎಂದು ಅಗ್ರ 40ರ ಪಟ್ಟಿಯಿಂದ ಹೊರಗಿರುವ ಹಾಗೂ ಬ್ರಿಟನ್‌ನ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿಗೆ ಆಫರ್ ಪಡೆದಿರುವ ದಿಲ್ಲಿ ಮೂಲದ ಅಭ್ಯರ್ಥಿಯೋರ್ವರು ಅಳಲು ತೋಡಿಕೊಂಡರು.