ಕೇರಳ | ಪುತ್ರನ ಇಂಜಿನಿಯರಿಂಗ್ ಸೀಟಿಗೆ ಫೀಸು ಕಟ್ಟಲಾಗಲಿಲ್ಲ; ಮನನೊಂದ ತಂದೆ ಆತ್ಮಹತ್ಯೆ
ಪಟ್ಟಣಂತಿಟ್ಟ: ತಮ್ಮ ಪುತ್ರನ ಇಂಜಿನಿಯರಿಂಗ್ ಸೀಟಿಗೆ ಫೀಸು ಕಟ್ಟಲು ಹಣ ವ್ಯವಸ್ಥೆಗೊಳಿಸಲು ವಿಫಲವಾಗಿದ್ದರಿಂದ ಮನನೊಂದ 47 ವರ್ಷದ ವ್ಯಕ್ತಿಯೊಬ್ಬರು ಪಟ್ಟಣಂತಿಟ್ಟ ಜಿಲ್ಲೆಯ ಅರಣ್ಯವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ವಿ.ಟಿ.ಶಿಜೊ ಎಂದು ಗುರುತಿಸಲಾಗಿದ್ದು, ಅವರು ಮೂಂಗಪರ ಅರಣ್ಯವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ರವಿವಾರ ಸಂಜೆ ಪತ್ತೆಯಾಗಿದೆ.
ಮೃತ ವ್ಯಕ್ತಿಯ ಪುತ್ರನಿಗೆ ತಮಿಳುನಾಡಿನ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಸೀಟು ಸಿಕ್ಕಿತ್ತು. ಆದರೆ, ಆತನ ಶುಲ್ಕ ಭರಿಸಲು ಅಗತ್ಯವಿದ್ದಷ್ಟು ಹಣವನ್ನು ಹೊಂದಿಸುವಲ್ಲಿ ಅವರ ಕುಟುಂಬ ವಿಫಲವಾಗಿತ್ತು ಎನ್ನಲಾಗಿದೆ.
ಶಿಜೊ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಈ ವರ್ಷಾರಂಭದಲ್ಲಿ ಸರಕಾರಿ ಅನುದಾದಿತ ಶಿಕ್ಷಕಿಯಾದ ತಮ್ಮ ಪತ್ನಿಯ ನೇಮಕಾತಿಯನ್ನು ರಾಜ್ಯ ಹೈಕೋರ್ಟ್ ಖಾಯಂಗೊಳಿಸಿ ಆದೇಶಿಸಿತ್ತು. ಹೀಗಾಗಿ, ಅವರಿಗೆ ಬರಬೇಕಿದ್ದ 12 ವರ್ಷಗಳ ಹಿಂಬಾಕಿ ವೇತನದ ನಿರೀಕ್ಷೆಯಲ್ಲಿ ಶಿಜೊ ಇದ್ದರು ಎಂದು ಹೇಳಲಾಗಿದೆ.
ಶಿಜೊ ಪತ್ನಿಗೆ ಈ ವರ್ಷದ ಫೆಬ್ರವರಿ ತಿಂಗಳಿನಿಂದ ವೇತನ ಪಾವತಿಯಾಗಲು ಪ್ರಾರಂಭವಾಗಿತ್ತಾದರೂ, ಕಳೆದ 12 ವರ್ಷಗಳ ಹಿಂಬಾಕಿ ವೇತನ ಪಾವತಿಯನ್ನು ಡಿಇಒ ಅಧಿಕಾರಿಗಳು ವಿಳಂಬಗೊಳಿಸಿದ್ದರು ಎಂದು ಆರೋಪಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ, ಶಿಜೊ ಮೃತದೇಹವನ್ನು ಅವರ ಸಂಬಂಧಿಕರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.