×
Ad

60 ಮೆಡಿಕಲ್ ಕಾಲೇಜುಗಳು ಇಂಟರ್ನ್‌ಗಳಿಗೆ ಸ್ಟೈಪೆಂಡ್‌ಗಳನ್ನು ನೀಡುತ್ತಿಲ್ಲ: ಆರ್‌ಟಿಐ ಉತ್ತರದಿಂದ ಬಹಿರಂಗ

Update: 2025-02-23 16:22 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: 500ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳು ಮತ್ತು ಸಂಸ್ಥೆಗಳ ಪೈಕಿ 60 ತಮ್ಮ ಪದವಿಪೂರ್ವ ಇಂಟರ್ನ್‌ಗಳು(ಪ್ರಾಯೋಗಿಕ ಅನುಭವ ಪಡೆಯುತ್ತಿರುವ ವೈದ್ಯರು),ಸ್ನಾತಕೋತ್ತರ ರೆಸಿಡೆಂಟ್‌ಗಳು ಮತ್ತು ಸೀನಿಯರ್ ರೆಸಿಡೆಂಟ್‌ಗಳಿಗೆ ಸ್ಟೈಪೆಂಡ್‌ಗಳನ್ನು ನೀಡುತ್ತಿಲ್ಲ ಎನ್ನುವುದನ್ನು ಆರ್‌ಟಿಐ ಉತ್ತರವು ಬಹಿರಂಗಗೊಳಿಸಿದೆ.

ಸ್ಟೈಪೆಂಡ್‌ ಪಾವತಿಸಲು ವಿಫಲಗೊಂಡಿರುವ 60 ಮೆಡಿಕಲ್ ಕಾಲೇಜುಗಳ ಪೈಕಿ 33 ಸರಕಾರಿಯಾಗಿದ್ದರೆ ಉಳಿದವು ಖಾಸಗಿ ಕಾಲೇಜುಗಳಾಗಿವೆ. ಸ್ಟೈಪೆಂಡ್‌ ನೀಡಬೇಕೆಂಬ ಆದೇಶವಿದ್ದರೂ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಅವುಗಳ ವಿರುದ್ಧ ಈವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.

ಕೇರಳದ ಆರ್‌ಟಿಐ ಕಾರ್ಯಕರ್ತ ಡಾ.ಕೆ.ವಿ.ಬಾಬು ಅವರು ಎನ್‌ಎಂಸಿಗೆ ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ನೀಡಲಾಗಿರುವ ಉತ್ತರದಲ್ಲಿ ಹಂಚಿಕೊಂಡಿರುವ ಕಡತ ಟಿಪ್ಪಣಿಯಂತೆ,ಈವರೆಗೆ 290 ಸರಕಾರಿ ಕಾಲೇಜುಗಳು ಮತ್ತು ಡೀಮ್ಡ್ ಟು ಬಿ ಯುನಿವರ್ಸಿಟಿಗಳ ಸಹಿತ 265 ಖಾಸಗಿ ಕಾಲೇಜುಗಳು ಸೇರಿದಂತೆ ಕೇವಲ 555 ಕಾಲೇಜುಗಳು 2023-24ನೇ ಸಾಲಿಗೆ ತಮ್ಮ ಡೇಟಾಗಳನ್ನು ಸಲ್ಲಿಸಿವೆ. ಉಳಿದ 198( 115 ಸರಕಾರಿ ಮತ್ತು 83 ಖಾಸಗಿ) ಕಾಲೇಜುಗಳು ತಮ್ಮ ಡೇಟಾಗಳನ್ನು ಸಲ್ಲಿಸಿಲ್ಲ. ಭಾರತದಲ್ಲಿ ಒಟ್ಟು 753 ಮೆಡಿಕಲ್ ಕಾಲೇಜುಗಳಿವೆ.

ಸ್ಟೈಪೆಂಡ್‌ಗಳ ಕುರಿತು ವಿವರಗಳನ್ನು ಸಲ್ಲಿಸಿರುವ 290 ಸರಕಾರಿ ಕಾಲೇಜುಗಳ ಪೈಕಿ 257 ಕಾಲೇಜುಗಳು ತಾವು ಸ್ಟೈಪೆಂಡ್‌ಗಳನ್ನು ನೀಡಿರುವುದಾಗಿ ತಿಳಿಸಿವೆ, ಆದರೆ 33 ಕಾಲೇಜುಗಳು ತಮ್ಮ ಇಂಟರ್ನ್‌ಗಳು ಮತ್ತು ಸೀನಿಯರ್ ರೆಸಿಡೆಂಟ್‌ಗಳಿಗೆ ಯಾವುದೇ ಸ್ಟೈಪೆಂಡ್‌ ನೀಡಿಲ್ಲ ಎಂದು ಹೇಳಿವೆ.

ಇದೇ ರೀತಿ ಎನ್‌ಎಂಸಿಗೆ ಸ್ಟೈಪೆಂಡ್‌ಗಳ ವಿವರಗಳನ್ನು ಸಲ್ಲಿಸಿರುವ 265 ಖಾಸಗಿ ಮೆಡಿಕಲ್ ಕಾಲೇಜುಗಳ ಪೈಕಿ 238 ಕಾಲೇಜುಗಳು ತಮ್ಮ ಇಂಟರ್ನ್‌ಗಳು/ರೆಸಿಡೆಂಟ್‌ಗಳು/ಸೀನಿಯರ್ ರೆಸಿಡೆಂಟ್‌ಗಳಿಗೆ ಸ್ಟೈಪೆಂಡ್‌ ನೀಡಿದ್ದರೆ 27 ಕಾಲೇಜುಗಳು ಈ ಗೋಜಿಗೇ ಹೋಗಿಲ್ಲ.

ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿಗಳನ್ನು ಸಲ್ಲಿಸಬೇಕಿರುವುದರಿಂದ ಇನ್ನೂ ತಮ್ಮ ಡೇಟಾಗಳನ್ನು ಸಲ್ಲಿಸದ ಸರಕಾರಿ ಮತ್ತು ಖಾಸಗಿ ಕಾಲೇಜುಗಳ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು 2024,ಜು.29ರ ಕಡತ ಟಿಪ್ಪಣಿಯಲ್ಲಿ ಹೇಳಲಾಗಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡಾ.ಬಾಬು, 60 ಕಾಲೇಜುಗಳು ವೈದ್ಯಕೀಯ ಕಾಲೇಜುಗಳು ಕಷ್ಟಪಟ್ಟು ದುಡಿಯುವ ತಮ್ಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಇಂಟರ್ನ್‌ಗಳಿಗೆ ಹಣವನ್ನು ನೀಡುತ್ತಿಲ್ಲ ಮತ್ತು ಎನ್‌ಎಂಸಿ ಮಧ್ಯಪ್ರವೇಶಿಸುತ್ತಿಲ್ಲ. ಇದು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು.

ವೈದ್ಯಕೀಯ ಕಾಲೇಜುಗಳನ್ನು ನಿಯಂತ್ರಿಸುವ ಎನ್‌ಎಂಸಿ ಸರ್ವೋಚ್ಚ ನ್ಯಾಯಾಲಯದ ಸೂಚನೆಯ ಮೇರೆಗೆ ನವಂಬರ್‌ನಲ್ಲಿ 115 ಸರಕಾರಿ ಮತ್ತು 83 ಖಾಸಗಿ ಕಾಲೇಜುಗಳಿಗೆ ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಿತ್ತು. ಸ್ಟೈಪಂಡ್ ವಿವರಗಳನ್ನು ಸಲ್ಲಿಸದಿದ್ದರೆ ದಂಡನೀಯ ಕ್ರಮದ ಎಚ್ಚರಿಕೆ ನೀಡಿದ್ದರೂ ಈವರೆಗೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ.

ವಾಸ್ತವದಲ್ಲಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿರುವ ಎನ್‌ಎಂಸಿ ಈ ಮೆಡಿಕಲ್ ಕಾಲೇಜುಗಳು ಮತ್ತು ಸಂಸ್ಥೆಗಳಿರುವ ರಾಜ್ಯಗಳನ್ನು ದೂಷಿಸಿದೆ. ಆದರೆ ಸೆಪ್ಟಂಬರ್ 2023ರಲ್ಲಿ ಗೆಝೆಟ್‌ನಲ್ಲಿ ಅಧಿಸೂಚಿಸಲಾಗಿದ್ದ ‘ವೈದ್ಯಕೀಯ ಶಿಕ್ಷಣದ ಗುಣಮಟ್ಟ ನಿರ್ವಹಣೆ ನಿಯಮಗಳು 2023’ ಇಂಟರ್ನ್‌ಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್‌ಗಳನ್ನು ಪಾವತಿಸದಿರುವುದು ಸೇರಿದಂತೆ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ ತಪ್ಪಿತಸ್ಥ ಮೆಡಿಕಲ್ ಕಾಲೇಜು ಅಥವಾ ಸಂಸ್ಥೆಯ ವಿರುದ್ಧ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಎನ್‌ಎಂಸಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

ನಿಯಮ ಉಲ್ಲಂಘನೆಗಾಗಿ ಐದು ಶೈಕ್ಷಣಿಕ ವರ್ಷಗಳ ಕಾಲ ಮಾನ್ಯತೆಯನ್ನು ತಡೆಹಿಡಿಯಬಹುದು ಮತ್ತು ಹಿಂದೆಗೆದುಕೊಳ್ಳಬಹುದು ಹಾಗೂ ಒಂದು ಕೋ. ರೂ. ದಂಡವನ್ನು ವಿಧಿಸಬಹುದು.

ಡಾ.ಬಾಬು ಅವರು ಜ.29ರಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿನಡ್ಡಾ ಅವರಿಗೂ ಪತ್ರವನ್ನು ಬರೆದು,ಈ ವಿಷಯವನ್ನು ಪರಿಶೀಲಿಸುವಂತೆ ಮತ್ತು ಎನ್‌ಎಂಸಿ ಕಾಯ್ದೆಯ ಕಲಂ 45ರಡಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News