ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು : ಪತ್ನಿ ಸೇರಿದಂತೆ ಮೂವರ ಬಂಧನ
Photo | India Today
ಇಂದೋರ್ : ಮೇಘಾಲಯದಲ್ಲಿ ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣ ರೋಚಕ ತಿರುವನ್ನು ಪಡೆದುಕೊಂಡಿದೆ. ಆತನ ಪತ್ನಿಯೇ ಬಾಡಿಗೆ ಕೊಲೆಗಾರರ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಕಳೆದ ವಾರ ರಾಜಾ ರಘುವಂಶಿ ಅವರ ಮೃತದೇಹ ಮೇಘಾಲಯದಲ್ಲಿ ಕಂದಕದಲ್ಲಿ ಪತ್ತೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಪತಿಯ ಕೊಲೆಗೆ ಸಂಬಂಧಿಸಿ ಪತ್ನಿ ಸೋನಮ್(24) ಎಂಬಾಕೆಯನ್ನು ಉತ್ತರ ಪ್ರದೇಶದ ಘಾಝಿಪುರದಲ್ಲಿ ಬಂಧಿಸಲಾಗಿದೆ.
ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಂ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದಾರೆ. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಿಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದಾರೆ. ಈ ವೇಳೆ ಅವರು ಎರಡು ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು.
ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ ಒಂದು ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು.
11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.
ಸೋನಮ್ ನಾಪತ್ತೆ ನಿಗೂಢವಾಗಿಯೇ ಇತ್ತು. ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ರವಿವಾರ ತನ್ನ ಕುಟುಂಬಸ್ಥರಿಗೆ ಕರೆ ಮಾಡಿದ ಆಕೆ ತಾನು ಘಾಝಿಪುರದಲ್ಲಿ ಇರುವುದಾಗಿ ತಿಳಿಸಿದ್ದಳು. ಈ ಬಗ್ಗೆ ಆಕೆಯ ಕುಟುಂಬವು ಇಂದೋರ್ ಪೊಲೀಸರಿಗೆ ಮಾಹಿತಿ ನೀಡಿದೆ. ಉತ್ತರ ಪ್ರದೇಶದ ಸ್ಥಳೀಯ ಪೊಲೀಸರ ಸಹಾಯದಿಂದ ಆಕೆಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ. ಇಂದೋರ್ ಪೊಲೀಸ್ ತಂಡವು ಆಕೆಯನ್ನು ವಶಕ್ಕೆ ಪಡೆಯಲು ತೆರಳಿದೆ.
ಪೊಲೀಸರು ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿದ ಮೇಘಾಲಯ ಪೊಲೀಸ್ ಮಹಾನಿರ್ದೇಶಕಿ ಇದಶಿಶಾ ನೊಂಗ್ರಾಂಗ್, ಸೋನಮ್ ತನ್ನ ಪತಿಯ ಕೊಲೆಯ ಪಿತೂರಿಯಲ್ಲಿ ಭಾಗಿಯಾಗಿದ್ದಾಳೆ ಮತ್ತು ಕೊಲೆಗೆ ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಸೋನಮ್ ಮತ್ತು ಮಧ್ಯಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೋನಮ್ ಪತಿಯನ್ನು ಕೊಲೆ ನಡೆಸಿದ್ದೇಕೆ?
ಸೋನಮ್‌ಗೆ ರಾಜ್ ಕುಶ್ವಾಹ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಕೆ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ ವೇಳೆ ಸೊಹ್ರಾ ಪ್ರದೇಶದಲ್ಲಿ ಪತಿಯನ್ನು ಕೊಲೆ ಮಾಡಲು ಆಕೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು.
ಪೊಲೀಸರ ತನಿಖೆಯ ಹಾದಿ ಬದಲಿಸಿದ ಟೂರಿಸ್ಟ್ ಗೈಡ್ ಕೊಟ್ಟ ಮಾಹಿತಿ!
ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಈ ಮೊದಲು ಕೂಡ ಟೂರಿಸ್ಟ್‌ಗಳು ನಾಪತ್ತೆಯಾಗಿದ್ದರು. ಇದರಿಂದಾಗಿ ರಾಜಾ ರಘುವಂಶಿ ದಂಪತಿ ನಾಪತ್ತೆ ಪ್ರಕರಣ ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಾ ರಘುವಂಶಿ ಮೃತದೇಹ ಪತ್ತೆ ಬಳಿಕ ಪ್ರಕರಣದ ಹಿಂದಿನ ಪಿತೂರಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೇ ವೇಳೆ ಸ್ಥಳೀಯ ಟೂರಿಸ್ಟ್ ಗೈಡ್ ಓರ್ವರು, ಹನಿಮೂನ್‌ಗೆ ತೆರಳಿದ್ದ ರಾಜಾ ರಘುವಂಶಿ ದಂಪತಿ ನಾಪತ್ತೆಯಾದ ದಿನ ಅವರ ಜೊತೆ ಮೂವರು ಅಪರಿಚಿತರಿದ್ದರು ಎಂಬುದನ್ನು ಪೊಲೀಸರಿಗೆ ತಿಳಿಸಿದ್ದರು. ಈ ಮಾಹಿತಿ ಪೊಲೀಸ್ ತನಿಖೆಯ ದಿಕ್ಕನ್ನು ಬದಲಿಸಿತ್ತು.
ಸೋನಮ್ ಪೋಷಕರು ಹೇಳಿದ್ದೇನು?
ಸೋನಮ್ ತಂದೆ ತನ್ನ ಮಗಳು ರಾಜಾ ರಘುವಂಶಿ ಕೊಲೆ ಮಾಡಿದ್ದಾಳೆ ಎಂಬ ಆರೋಪವನ್ನು ತಿರಸ್ಕರಿಸಿದ್ದಾರೆ. ಮೇಘಾಲಯ ಪೊಲೀಸರು ಕಥೆಗಳನ್ನು ಹೆಣೆಯುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ʼನನ್ನ ಮಗಳು ನಿರಪರಾಧಿ. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹ ನಡೆದಿದೆ. ಮೇಘಾಲಯ ಸರಕಾರ ಮೊದಲಿನಿಂದಲೂ ಸುಳ್ಳು ಹೇಳುತ್ತಲೇ ಬಂದಿದೆ. ಮೇಘಾಲಯ ಪೊಲೀಸರು ಕಥೆಗಳನ್ನು ಹೆಣೆಯುತ್ತಿದ್ದಾರೆ. ಸಿಬಿಐ ತನಿಖೆ ಪ್ರಾರಂಭವಾಗಲಿ, ಸಿಬಿಐ ತನಿಖೆ ನಡೆಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇವೆ. ಸಿಬಿಐ ತನಿಖೆ ನಡೆದರೆ ವಾಸ್ತವ ಬಯಲಾಗಲಿದೆʼ ಎಂದು ಹೇಳಿದ್ದಾರೆ.