×
Ad

ಮುಸ್ಲಿಂ ಬಹುಸಂಖ್ಯಾತ ವಯನಾಡಿನಲ್ಲಿ ಮುಸ್ಲಿಮೇತರರನ್ನು ಆಯ್ಕೆ ಮಾಡಬಹುದಾದರೆ, ರಾಯ್ ಬರೇಲಿಯಲ್ಲಿ ಮುಸ್ಲಿಮರನ್ನು ಆಯ್ಕೆ ಮಾಡಬಹುದು: ಸಂಸದ ಉವೈಸಿ

Update: 2025-12-11 06:21 IST

PC: PTI 

ಹೊಸದಿಲ್ಲಿ, ಡಿ.10: ಲೋಕಸಭೆಯಲ್ಲಿ ಮುಸ್ಲಿಂ ಸಂಸದರ ಅತಿ ಕಡಿಮೆ ಪ್ರತಿನಿಧಿತ್ವದ ವಿಚಾರ ಗಂಭೀರವಾಗಿದೆ ಎಂದು ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಬುಧವಾರ ಕಳವಳ ವ್ಯಕ್ತಪಡಿಸಿದರು. ಮುಸ್ಲಿಂ ಬಹುಸಂಖ್ಯಾತರಿರುವ ವಯನಾಡು ಕ್ಷೇತ್ರವೇ ಮುಸ್ಲಿಮೇತರ ಪ್ರತಿನಿಧಿಯನ್ನು ಆಯ್ಕೆ ಮಾಡುವಾಗ, ರಾಯ್‌ಬರೇಲಿ, ಅಮೇಥಿ ಮತ್ತು ಇಟಾವಾದಂತಹ ದೀರ್ಘಕಾಲದ ರಾಜಕೀಯ ಭದ್ರ ಕೋಟೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಏಕೆ ಅವಕಾಶ ನಿರಾಕರಣೆ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಸಂಸತ್ತಿನಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಅಂಬೇಡ್ಕರ್ ಅವರ ರಾಜಕೀಯ ತತ್ವಗಳನ್ನು ಉಲ್ಲೇಖಿಸಿದ ಉವೈಸಿ, “ಅಂಚಿನಲ್ಲಿರುವ ಸಮುದಾಯಗಳಿಗೆ ರಾಜಕೀಯ ಶಕ್ತಿ ದೊರಕದೆ ದೇಶ ನಿಜವಾದ ಪ್ರಜಾಪ್ರಭುತ್ವವಾಗಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಇದನ್ನು ಪದೇಪದೇ ಒತ್ತಿ ಹೇಳಿದ್ದಾರೆ,” ಎಂದು ಸ್ಮರಿಸಿದರು.

ಲೋಕಸಭೆಯಲ್ಲಿ ಕೇವಲ ನಾಲ್ಕು ಪ್ರತಿಶತ ಮುಸ್ಲಿಂ ಸಂಸದರು ಮಾತ್ರ ಇರುವುದನ್ನು ಅವರು ಆಕ್ಷೇಪಿಸಿ, “ಆಡಳಿತ ಪಕ್ಷದಲ್ಲಿ ಒಬ್ಬರೂ ಮುಸ್ಲಿಂ ಸದಸ್ಯರಿಲ್ಲ. ಜಾತ್ಯತೀತ ಎಂದೇ ಹೇಳಿಸಿಕೊಳ್ಳುವ ಪಕ್ಷಗಳಲ್ಲಿಯೂ ಪ್ರತಿನಿಧಿತ್ವ ಕುಗ್ಗುತ್ತಿದೆ. ಇದು ಗಂಭೀರ ಸೂಚನೆ,” ಎಂದು ಎಚ್ಚರಿಕೆ ನೀಡಿದರು.

ವಯನಾಡಿನಂತಹ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರವು ಮುಸ್ಲಿಮೇತರರನ್ನು ಆಯ್ಕೆ ಮಾಡಿದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, “ಇದು ಮತದಾರರ ವಿಸ್ತೃತ ಮನೋಭಾವವನ್ನು ತೋರಿಸುತ್ತದೆ. ಹೀಗಿರುವಾಗ, ರಾಯ್‌ಬರೇಲಿ, ಅಮೇಥಿ ಮತ್ತು ಇಟಾವಾ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಯಸಬಾರದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ,” ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳತ್ತ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಿಯಾಂಕಾ ಗಾಂಧಿ ವಾದ್ರಾ (ವಯನಾಡು) ಮತ್ತು ರಾಹುಲ್ ಗಾಂಧಿ (ರಾಯ್‌ಬರೇಲಿ) ಪ್ರಸ್ತುತ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಮೇಥಿ–ರಾಯ್‌ಬರೇಲಿ ದೀರ್ಘಕಾಲದಿಂದ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು ಇಟಾವಾ ಸಮಾಜವಾದಿ ಪಕ್ಷದ ಪರಂಪರೆಯ ನೆಲೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News