"ವಿದ್ಯುತ್ತೂ ಇಲ್ಲ, ವಿದ್ಯುತ್ ಬಿಲ್ಲೂ ಬರುವುದಿಲ್ಲ": ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಉಚಿತ ವಿದ್ಯುತ್ ಯೋಜನೆಗೆ ಬಿಜೆಪಿ ನಾಯಕ ವ್ಯಂಗ್ಯ
ಲಕ್ನೊ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಆಗಸ್ಟ್ 1ರಿಂದ ಪ್ರತಿ ವಸತಿ ಗೃಹಗಳಿಗೂ 125 ಯೂನಿಟ್ ಉಚಿತ ವಿದ್ಯುತ್ ಪೂರೈಸಲಾಗುವುದು ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಘೋಷಣೆಯನ್ನು ಶನಿವಾರ ವ್ಯಂಗ್ಯವಾಡಿರುವ ಉತ್ತರ ಪ್ರದೇಶ ಇಂಧನ ಮತ್ತು ನಗರಾಭಿವೃದ್ಧಿ ಸಚಿವ ಅರವಿಂದ್ ಕುಮಾರ್ ಶರ್ಮ, ವಿದ್ಯುತ್ ಸರಬರಾಜಾದಾಗ ಮಾತ್ರ ಅದು ಉಚಿತವಾಗಿರುತ್ತದೆ ಎಂದು ಛೇಡಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್ ಕುಮಾರ್ ಶರ್ಮ, “ವಿದ್ಯುತ್ ಸರಬರಾಜಾದಾಗ ಮಾತ್ರ ಅದು ಉಚಿತವಾಗಿರುತ್ತದೆ. ವಿದ್ಯುತ್ತೂ ಬರುವುದಿಲ್ಲ, ವಿದ್ಯುತ್ ಬಿಲ್ಲೂ ಬರುವುದಿಲ್ಲ. ಉಚಿತ ಆಗಿ ಹೋಯಿತು. ಆದರೆ, ನಾವು ವಿದ್ಯುತ್ ಪೂರೈಸುತ್ತಿದ್ದೇವೆ” ಎಂದು 125 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಘೋಷಣೆಯ ಕುರಿತು ವ್ಯಂಗ್ಯವಾಡಿದ್ದಾರೆ.
ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸರಕಾರ ರಚಿಸಿರುವ ಜನತಾ ದಳ (ಸಂಯುಕ್ತ) ಶರ್ಮರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಇದು ನೆಲದ ವಾಸ್ತವ ಮತ್ತು ಜ್ಞಾನದ ಕೊರತೆ ಎಂದು ತಿರುಗೇಟು ನೀಡಿದೆ. “ಉತ್ತರ ಪ್ರದೇಶದ ಇಂಧನ ಸಚಿವರಿಗೆ ನೆಲದ ವಾಸ್ತವ ತಿಳಿದಂತಿಲ್ಲ. ಬಿಹಾರದಲ್ಲಿ ಸಾಮಾನ್ಯ ಜನರಿಗೆ ದಿನದಲ್ಲಿ 22 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ದೊರೆಯುತ್ತಿದೆ. ಸಾಮಾನ್ಯ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ವಿಫಲವಾದರೆ, ನಾನು ಮತ ಯಾಚಿಸುವುದಿಲ್ಲ ಎಂದು ಪ್ರತಿಜ್ಞೆ ತೊಟ್ಟಿದ್ದು ನಮ್ಮ ನಾಯಕ ನಿತೀಶ್ ಕುಮಾರ್. ಇಂತಹ ಹೊಣೆಗೇಡಿತನದ ಹೇಳಿಕೆಗಳು ಸಚಿವರ ಅರಿವಿನ ಕೊರತೆಯನ್ನು ಸೂಚಿಸುತ್ತದೆ. ಬಿಹಾರವು ಪ್ರತಿ ಪ್ರಗತಿ ಮತ್ತು ಅಭಿವೃದ್ಧಿಯ ಮಾನದಂಡದಲ್ಲಿ ಪ್ರಗತಿ ಸಾಧಿಸಿರುವುದನ್ನು ಕಾಣಲು ಅವರು ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ಭಾಗಗಳಿಗೆ ಭೇಟಿ ನೀಡಬೇಕು” ಎಂದು ಜನತಾ ದಳ (ಸಂಯುಕ್ತ) ಪಕ್ಷದ ಮುಖ್ಯ ವಕ್ತಾರ ಹಾಗೂ ಬಿಹಾರ ವಿಧಾನ ಪರಿಷತ್ ಸದಸ್ಯ ನೀರಜ್ ಕುಮಾರ್ ಪಂಥಾಹ್ವಾನ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ ಸಚಿವ ಅರವಿಂದ್ ಕುಮಾರ್ ಶರ್ಮ ತಮ್ಮ ಹೇಳಿಕೆಗೆ ತಿರುಗೇಟು ಪಡೆದಿರುವುದು ಇದು ಎರಡನೆ ಬಾರಿಯಾಗಿದೆ. ಇದಕ್ಕೂ ಮುನ್ನ, ಜುಲೈ 10ರಂದು ಸುಲ್ತಾನ್ ಪುರ್ ನ ನಿವಾಸಿಗಳು ತಮ್ಮ ಪ್ರದೇಶದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಅವರ ಬಳಿ ಆರೋಪಿಸಿದಾಗ, ಅದಕ್ಕೆ ಪ್ರತಿಯಾಗಿ ಅವರು, “ಜೈ ಶ್ರೀರಾಮ್, ಜೈ ಬಜರಂಗ ಬಲಿ” ಎಂಬ ಘೋಷಣೆಗಳನ್ನು ಕೂಗಿದ್ದರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.