ಹರ್ಯಾಣ | ರಾಹುಲ್ ಗಾಂಧಿ ಉಲ್ಲೇಖಿಸಿದ ಸ್ಥಳಗಳಲ್ಲಿ ಮತಗಳ್ಳತನ ನಡೆದಿಲ್ಲ: ʼಇಂಡಿಯನ್ ಎಕ್ಸ್‌ಪ್ರೆಸ್ʼ ತನಿಖಾ ವರದಿ
Photo: indianexpress
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು 2024ರ ಹರ್ಯಾಣ ವಿಧಾನಸಭಾ ಚುನಾವಣೆಯನ್ನು ‘ಕದಿಯಲಾಗಿತ್ತು’ ಎಂದು ಆರೋಪಿಸಿದ್ದಾರೆ. ತನ್ನ ಆರೋಪವನ್ನು ಸಮರ್ಥಿಸಿಕೊಳ್ಳಲು ಅವರು ಕೆಲವು ಉದಾಹರಣೆಗಳನ್ನೂ ನೀಡಿದ್ದಾರೆ. ಆದರೆ ಅವರು ಸೂಚಿಸಿದ ಸ್ಥಳಗಳಲ್ಲಿ ಮತಗಳ್ಳತನ ನಡೆದಿಲ್ಲ ಎನ್ನುವುದನ್ನು ʼಇಂಡಿಯನ್ ಎಕ್ಸ್‌ಪ್ರೆಸ್ʼ ತನಿಖಾ ವರದಿಯು ಬಹಿರಂಗಗೊಳಿಸಿದೆ.
ಪಲ್ವಾಲ್ ಜಿಲ್ಲೆಯ ಹೋಡಲ್‌ನಲ್ಲಿ ಒಂದು ಮನೆಯಲ್ಲಿ 66 ಮತ್ತು ಇನ್ನೊಂದು ಮನೆಯಲ್ಲಿ 501 ಮತದಾರರಿದ್ದಾರೆ ಎಂದು ಹೇಳಿದ್ದ ರಾಹುಲ್ ಗಾಂಧಿ, ಸೋನಿಪತ್ ಜಿಲ್ಲೆಯ ರಾಯಿಯಲ್ಲಿ 10 ಮತಗಟ್ಟೆಗಳಲ್ಲಿ ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ ಮತ್ತು ವಿಮಲಾ ಹೀಗೆ ಬಹುಹೆಸರುಗಳಲ್ಲಿ 22 ಸಲ ಮತಗಳನ್ನು ಚಲಾಯಿಸಲು ಬ್ರಝಿಲ್ ಪ್ರಜೆಯೋರ್ವಳ ಚಿತ್ರವನ್ನು ಬಳಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಹೋಡಲ್‌ನ ಎರಡೂ ಸ್ಥಳಗಳಿಗೆ ಭೇಟಿ ನೀಡಿದ ಸುದ್ದಿಸಂಸ್ಥೆಯ ವರದಿಗಾರರ ತಂಡ ರಾಹುಲ್ ಗಾಂಧಿ ಉಲ್ಲೇಖಿಸಿದ್ದ ಎರಡು ವಿಳಾಸಗಳು ವಾಸ್ತವದಲ್ಲಿ ಹಲವಾರು ಮನೆಗಳಿರುವ ವಿಶಾಲ ನಿವೇಶನವಾಗಿದ್ದು, ಅಲ್ಲಿ ಅನೇಕ ಕುಟುಂಬಗಳು ವಾಸವಾಗಿವೆ ಎನ್ನುವುದನ್ನು ಕಂಡುಕೊಂಡಿದೆ. ಅವರಲ್ಲಿ ಹಲವರು ತಾವು ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.
ರಾಯಿಯಲ್ಲಿ ಮತದಾರರ ಪಟ್ಟಿಯಲ್ಲಿ ಬ್ರಝಿಲ್ ಪ್ರಜೆಯ ಛಾಯಾಚಿತ್ರವನ್ನು ಹೊಂದಿರುವ ನಾಲ್ವರು ಮಹಿಳೆಯರನ್ನು ತಂಡವು ಪತ್ತೆ ಹಚ್ಚಿದೆ. ಅವರೆಲ್ಲರೂ ಯಾವುದೇ ಸಮಸ್ಯೆಯಿಲ್ಲದೆ ಮತಗಳನ್ನು ಚಲಾಯಿಸಿದ್ದರು ಮತ್ತು ರಾಹುಲ್ ಬುಧವಾರ ಈ ವಿಷಯವನ್ನು ಎತ್ತುವವರೆಗೂ ಅವರ್ಯಾರಿಗೂ ಈ ಸಂಗತಿಯೇ ಗೊತ್ತಿರಲಿಲ್ಲ.
ಹೋಡಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಿಲ್ಲಾ ಪರಿಷತ್ ಉಪಾಧ್ಯಕ್ಷರಿಗೆ ಸೇರಿದ ಮನೆಯಲ್ಲಿ 66 ಮತದಾರರು ಮತ್ತು ಪತ್ತೆಹಚ್ಚಲು ಸಾಧ್ಯವಾಗದ ಇನ್ನೊಂದು ಮನೆಯಲ್ಲಿ 501 ಮತದಾರರು ಇರುವುದು ಕಂಡು ಬಂದಿದೆ ಎಂದು ರಾಹುಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ್ದರು.
ಹೋಡಲ್‌ನ ಗುಧ್ರಾನಾ ಗ್ರಾಮದ ಮನೆ ಸಂಖ್ಯೆ 150ಕ್ಕೆ ಭೇಟಿ ನೀಡಿದ ತಂಡವು ಅದು ಬಿಜೆಪಿಯ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಉಮೇಶ ಗುಧ್ರಾನಾಗೆ ಸೇರಿದ್ದು ಮತ್ತು ರಾಹುಲ್ ಉಲ್ಲೇಖಿಸಿದ್ದ 66 ಮತದಾರರು ಅವರ ವಿಸ್ತೃತ ಕುಟುಂಬದ ಸದಸ್ಯರಾಗಿದ್ದಾರೆ ಎನ್ನುವುದನ್ನು ದೃಢಪಡಿಸಿಕೊಂಡಿದೆ.
‘ನನ್ನ ತಂದೆ ತನ್ನ ಮೂವರು ಸೋದರರೊಂದಿಗೆ ಸುಮಾರು 80 ವರ್ಷಗಳ ಹಿಂದೆ ಸಮೀಪದ ಸಿಹಾ ಗ್ರಾಮದಿಂದ ಇಲ್ಲಿಗೆ ಸ್ಥಳಾಂತರಗೊಂಡಿದ್ದರು. ನಮಗೆ 10 ಎಕರೆ ಜಮೀನಿದ್ದು, ಐದು ಎಕರೆಯಲ್ಲಿ ನಾವು ವಾಸವಾಗಿದ್ದೇವೆ ಮತ್ತು ಉಳಿದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ. ಇದು 1986ರಲ್ಲಿ ನಿರ್ಮಿಸಲಾದ ಅತ್ಯಂತ ಹಳೆಯ ಮನೆಯಾಗಿದ್ದು, ಮನೆ ಸಂಖ್ಯೆ 150 ಆಗಿದೆ. ಕುಟುಂಬವು ಬೆಳೆದಂತೆ ಇಲ್ಲಿ ಹಲವಾರು ಮನೆಗಳು ನಿರ್ಮಾಣಗೊಂಡಿದ್ದು, ಎಲ್ಲ ಮನೆಗಳೂ ಮನೆ ಸಂಖ್ಯೆ 150ರೊಂದಿಗೆ ಗುರುತಿಸಲ್ಪಟ್ಟಿವೆ ’ ಎಂದು ಗುಧ್ರಾನಾರ ಚಿಕ್ಕಪ್ಪ ರಾಜಪಾಲ ಗುದ್ರಾನಾ(60)ತಿಳಿಸಿದರು.
501 ಮತದಾರರಿದ್ದಾರೆ ಎಂದು ರಾಹುಲ್ ಹೇಳಿದ್ದ ಮನೆಸಂಖ್ಯೆ 265ಕ್ಕೂ ತಂಡವು ಭೇಟಿ ನೀಡಿತ್ತು. ಇಲ್ಲಿಯೂ ಒಂದೇ ನಿವೇಶನದಲ್ಲಿ 200 ಮನೆಗಳು ಮತ್ತು ಮೂರು ಖಾಸಗಿ ಶಾಲೆಗಳಿದ್ದು, ಎಲ್ಲ ಮತದಾರರೂ 265ನ್ನೇ ತಮ್ಮ ಮನೆಸಂಖ್ಯೆಯಾಗಿ ಹೊಂದಿದ್ದಾರೆ. ಎಲ್ಲರೂ ಮೂಲತಃ ಸೊರೋಟ್ ಮನೆತನಕ್ಕೆ ಸೇರಿದವರಾಗಿದ್ದಾರೆ.
ಹೋಡಲ್ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ 2,595 ಮತಗಳ ಅಂತರದಿಂದ ಗೆದ್ದಿತ್ತು.
ತಂಡವು ಮತದಾರರ ಪಟ್ಟಿಯಲ್ಲಿ ಬ್ರಝಿಲ್ ಪ್ರಜೆಯ ಛಾಯಾಚಿತ್ರವನ್ನು ಹೊಂದಿದ್ದ ರಾಯಿಯ ಮೂವರು ಮಹಿಳೆಯರ ಮನೆಗೂ ಭೇಟಿ ನೀಡಿತ್ತು ಮತ್ತು ನಾಲ್ಕನೇ ಮಹಿಳೆ ದೂರವಾಣಿ ಮೂಲಕ ಮಾತನಾಡಿದ್ದರು. ತಾವು ಯಾವುದೇ ಸಮಸ್ಯೆಯಲ್ಲದೆ ಮತ ಚಲಾಯಿಸಿದ್ದೇವೆ ಎಂದು ಈ ಎಲ್ಲ ಮಹಿಳೆಯರು ತಿಳಿಸಿದರು.
‘ಮತದಾನ ಮಾಡಲು ನನಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ನಾನು ನನ್ನ 2012ರ ಮತದಾರರ ಕಾರ್ಡ್ ಮತ್ತು ಅವರು ನೀಡಿದ್ದ ಚೀಟಿಯನ್ನು ಬಳಸಿದ್ದೆ’ ಎಂದು ಈ ಮಹಿಳೆಯರ ಪೈಕಿ ಓರ್ವರಾದ ಸ್ವೀಟಿ ತಿಳಿಸಿದರು ಮತದಾರರ ಪಟ್ಟಿಯಲ್ಲಿನ ಬ್ರಝಿಲ್ ಪ್ರಜೆಯ ಚಿತ್ರವನ್ನು ತೋರಿಸಿದಾಗ,ಇದು ತಪ್ಪು ಚಿತ್ರ ಎಂದು ಅವರು ಸ್ಪಷ್ಟಪಡಿಸಿದರು.
ಬ್ರಝಿಲ್ ಪ್ರಜೆಯ ತಪ್ಪು ಫೋಟೊ ಹೇಗೆ ಬಂದಿತ್ತು ಎನ್ನುವುದು ನಮಗೆ ತಿಳಿದಿಲ್ಲ ಎಂದು ಈ ಮಹಿಳೆಯರು ತಿಳಿಸಿದರು.
ಈ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ 4,673 ಮತಗಳ ಅಂತರದಿಂದ ಗೆದ್ದಿತ್ತು.