×
Ad

ಪ್ರಧಾನಿ ಮೋದಿಯ ಹಸ್ತಗಳಲ್ಲಿ ಪಹಲ್ಗಾಮ್ ದಾಳಿಯ ಸಂತ್ರಸ್ತರ ನೆತ್ತರಿದೆ: ರಾಹುಲ್ ಗಾಂಧಿ ವಾಗ್ದಾಳಿ

Update: 2025-07-29 20:27 IST

 ರಾಹುಲ್ ಗಾಂಧಿ | PC : Sansad TV

ಹೊಸದಿಲ್ಲಿ: ಸೋಮವಾರದಿಂದ ಸಂಸತ್ತಿನಲ್ಲಿ ಪಹಲ್ಗಾಮ್ ದಾಳಿ, ಅದಕ್ಕೆ ಪ್ರತಿಯಾಗಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಂಗಳವಾರವೂ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪಹಲ್ಗಾಮ್ ದಾಳಿಯನ್ನು ನರೇಂದ್ರ ಮೋದಿ ಸರಕಾರ ನಿರ್ವಹಿಸಿದ ರೀತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪಹಲ್ಗಾಮ್ ದಾಳಿಯ ವೇಳೆ ಜೀವಗಳನ್ನು ರಕ್ಷಿಸುವ ಬದಲು, ಅದರ ನಂತರ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಡೆಸಲಾಯಿತು. ಬಳಿಕ, ಆ ಕಾರ್ಯಾಚರಣೆಯ ಯಶಸ್ಸಿನ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲಾಯಿತು ಎಂದು ಅವರು ಗಂಭೀರ ಆರೋಪ ಮಾಡಿದರು.

ಪಹಲ್ಗಾಮ್ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ನಿರ್ಣಾಯಕವಾಗಿ ನಡೆದ ಅಪರೇಷನ್ ಸಿಂಧೂರ್ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಲೋಕಸಭಾ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿ, ಮಹತ್ವದ ಹಂತದಲ್ಲಿ ಇಡೀ ವಿರೋಧ ಪಕ್ಷಗಳ ಮೈತ್ರಿಕೂಟಗಳು ಸರಕಾರದ ಬೆನ್ನಿಗೆ ನಿಂತಿದ್ದವು ಎಂದು ಪುನರುಚ್ಚರಿಸಿದರು.

“ಪ್ರಧಾನಿ ಮೋದಿಯ ಹಸ್ತದ ಮೇಲೆ ಪಹಲ್ಗಾಮ್ ದಾಳಿಯಲ್ಲಿ ಹತರಾದ ಜನರ ರಕ್ತದ ಕಲೆಗಳಿರುವುದರಿಂದ, ಅವರನ್ನು ರಕ್ಷಿಸುವುದು ಸರಕಾರದ ಗುರಿಯಾಗಿದೆ. ಜಗತ್ತಿನ ಯಾವುದಾದರೂ ಒಂದು ದೇಶ ಪಾಕಿಸ್ತಾನದ ಪಹಲ್ಗಾಮ್ ದಾಳಿಯನ್ನು ಖಂಡಿಸಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ನಮಗೆ ತಿಳಿಸಲಿಲ್ಲ. ಇದರರ್ಥ ಜಗತ್ತು ನಮ್ಮನ್ನು ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡುತ್ತಿದೆ ಎಂದು” ಎಂದು ಅವರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ, ಭಾರತೀಯ ವಾಯು ಸೇನೆಯ ಸಮರ್ಥನೆಗೆ ಧಾವಿಸಿದ ರಾಹುಲ್ ಗಾಂಧಿ, ಭಾರತೀಯ ಸೇನೆಯು ವಿಮಾನಗಳ ನಷ್ಟ ಅನುಭವಿಸಿದ್ದು ರಾಜಕೀಯ ಒತ್ತಡಗಳಿಂದಾಗಿಯೇ ಹೊರತು, ಸೇನಾ ಸಾಮರ್ಥ್ಯದ ಕೊರತೆಯಿಂದಲ್ಲ ಎಂದು ಒತ್ತಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News