ರೈತರ ಹಿತಾಸಕ್ತಿಯೊಂದಿಗೆ ರಾಜಿ ಇಲ್ಲ: ಟ್ರಂಪ್ ಸುಂಕ ಹೇರಿಕೆಗೆ ಪ್ರಧಾನಿ ಮೋದಿ ತಿರುಗೇಟು
ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: “ದೇಶದ ರೈತರು, ಮೀನುಗಾರರು ಹಾಗೂ ಹೈನುಗಾರರ ಹಿತಾಸಕ್ತಿಯೊಂದಿಗೆ ಎಂದಿಗೂ, ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ ಬೆನ್ನಿಗೇ, ಪ್ರಧಾನಿ ಮೋದಿ ಇಂದು (ಗುರುವಾರ) ತಿರುಗೇಟು ನೀಡಿದ್ದಾರೆ.
ಹಸಿರು ಕ್ರಾಂತಿಯ ಹರಿಕಾರ, ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಮೂರು ದಿನಗಳ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
“ನಮಗೆ ರೈತರ ಹಿತಾಸಕ್ತಿ ಪ್ರಥಮ ಆದ್ಯತೆಯಾಗಿದೆ. ಅದಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ನಾನು ವೈಯಕ್ತಿಕವಾಗಿ ಬೆಲೆ ತೆರಬೇಕಾದರೂ, ನಾನು ಅದಕ್ಕೆ ಸಿದ್ಧನಿದ್ದೇನೆ” ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ರಶ್ಯದದಿಂದ ತೈಲ ಖರೀದಿಸದಂತೆ ಅಮೆರಿಕ ಬೆದರಿಕೆ ಒಡ್ಡಿದರೂ ಅದಕ್ಕೆ ಭಾರತ ಮಣಿಯದ ಬೆನ್ನಲ್ಲೇ, ಭಾರತದಿಂದ ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಬುಧವಾರ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದರು. ಈ ಆದೇಶದೊಂದಿಗೆ ಭಾರತದ ಮೇಲೆ ಹೇರಲಾಗಿರುವ ಸುಂಕದ ಪ್ರಮಾಣ ಶೇ. 50ಕ್ಕೆ ಏರಿಕೆಯಾದಂತಾಗಿದೆ.