×
Ad

ಚೋರಿ ಚೋರಿ ಚುಪ್ಕೆ ಚುಪ್ಕೆ.. ಜನತೆ ಎಚ್ಚೆತ್ತಿದ್ದಾರೆ; ಮತಗಳ್ಳತನ ವಿರುದ್ಧ ವಿಡಂಬನಾ ವೀಡಿಯೊ ಹಂಚಿಕೊಂಡ ರಾಹುಲ್

Update: 2025-08-16 20:22 IST

 ರಾಹುಲ್‌ಗಾಂಧಿ | PC : PTI  

ಹೊಸದಿಲ್ಲಿ,ಆ.16: ಮತಗಳ್ಳತನಕ್ಕೆ ಸಂಬಂಧಿಸಿ ಚುನಾವಣಾ ಆಯೋಗದ ವಿರುದ್ಧ ಸರಣಿ ವಾಗ್ದಾಳಿಗಳನ್ನು ಮುಂದುವರಿಸಿರುವ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು, ಬಾಲಿವುಡ್ ಚಿತ್ರ ‘ಲಾಪತಾ ಲೇಡಿಸ್’ ಚಿತ್ರದ ದೃಶ್ಯವೊಂದರಿಂದ ಪ್ರೇರಿತವಾದ  ವಿಡಂಬನಾತ್ಮಕ ವೀಡಿಯೋ ಕ್ಲಿಪ್ ಒಂದನ್ನು ಬಳಸಿಕೊಂಡು ಆಯೋಗವನ್ನು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್ ಒಂದರಲ್ಲಿ ಅವರು ‘‘ಚೋರಿ ಚೋರಿ ಚುಪ್ಕೆ ಚುಪ್ಕೆ.. ಇನ್ನು ಮುಂದೆ ನಡೆಯಲ್ಲ, ಜನತೆ ಎಚ್ಚೆತ್ತುಕೊಂಡಿದ್ದಾರೆ ’’ ಎಂದು ಬರೆದಿದ್ದಾರೆ. ಜೊತೆ ಲಾಪತಾ ಲೇಡಿಸ್ ಚಿತ್ರದಿಂದ ಪ್ರೇರಿತವಾದ 1 ನಿಮಿಷದ ಅವಧಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಕಳವು ನಡೆದಿರುವ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬರುತ್ತಾನೆ. ಆಗ ಪೊಲೀಸ್, ಆತನಿಗೆ ಕಳವಾಗಿರುವ ವಸ್ತುಗಳ ಪಟ್ಟಿ ಮಾಡತೊಡಗಿದಾಗ, ಆತ ತಾನು ಮತಗಳ್ಳತನದ ಬಲಿಪಶುವೆಂದು ಅಲವತ್ತುಕೊಳ್ಳುತ್ತಾನೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷವು ಹೇಳಿಕೆಯೊಂದನ್ನು ನೀಡಿ, ಮತಗಳ್ಳತನದ ಕುರಿತು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ರಾಹುಲ್ ಮಾಡಿರುವ ಆರೋಪವನ್ನು ಬೆಂಬಲಿಸಿ ತಾನು ಆಯೋಜಿಸಿರುವ ವೋಟ್ ಸೇ ಆಝಾದಿ ಅಭಿಯಾನದಲ್ಲಿ ಕೈಜೋಡಿಸುವಂತೆ ದೇಶದ ಜನತೆಗೆ ಕರೆ ನೀಡಿದೆ. ಮತಗಳ್ಳತನದ ವಿರುದ್ಧ ನೇರಹೋರಾಟವಾಗಿ ಬಿಹಾರದಲ್ಲಿ ಆಗಸ್ಟ್ 17ರಂದು ವೋಟ್ ಅಧಿಕಾರ ಯಾತ್ರಾವನ್ನು ಆರಂಭಿಸುವುದಾಗಿ ರಾಹುಲ್‌ ಗಾಂಧಿ ‘ಎಕ್ಸ್’ನಲ್ಲಿ ಘೋಷಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News