ವಿದೇಶ ಪ್ರವಾಸ ವೇಳೆ ರಾಹುಲ್‌ರಿಂದ ಭದ್ರತಾ ಶಿಷ್ಟಾಚಾರ ಉಲ್ಲಂಘನೆ : ಸಿಆರ್‌ಪಿಎಫ್ ಪತ್ರ ಉಲ್ಲೇಖಿಸಿ ಬಿಜೆಪಿ ಆರೋಪ
ರಾಹುಲ್ ಗಾಂಧಿ | PC ; PTI
ಹೊಸದಿಲ್ಲಿ,ಸೆ.11: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಟಲಿ, ವಿಯೆಟ್ನಾಂ, ದುಬೈ,ಖತರ್, ಲಂಡನ್ ಹಾಗೂ ಮಲೇಶ್ಯಕ್ಕೆ ವಿದೇಶ ಪ್ರವಾಸ ಕೈಗೊಂಡ ಸಂದರ್ಭ ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿರುವುದಾಗಿ ಸಿಆರ್‌ಪಿಎಫ್ ಗುರುತಿಸಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.
ರಾಹುಲ್ ವಿದೇಶ ಪ್ರವಾಸದ ವೇಳೆ ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಸಿಆರ್‌ಪಿಎಫ್‌ನ ಪತ್ರಗಳನ್ನು ಬರೆದಿರುವುದಾಗಿ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಬಿಜೆಪಿ ಈ ಆರೋಪ ಮಾಡಿದೆ.
ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಅವರು ‘ವೋಟ್‌ಚೋರಿ’ ಅಭಿಯಾನವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಸಿಆರ್‌ಪಿಎಫ್‌ನ ಪತ್ರಗಳನ್ನು ಬಿಡುಗಡಗೊಳಿಸಿರುವುದು ಕಳವಳಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕಾಂಗ್ರೆಸ್ ಹೇಳಿದೆ.
ಆದಾಗ್ಯೂ ಸಿಆರ್‌ಪಿಎಫ್ ಈ ವಿಷಯವಾಗಿ ಈತನಕ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವನ್ನು ತಾಳಿದೆಯೆಂದು ತಿಳಿದುಬಂದಿದೆ.
ವೈಯಕ್ತಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಆಗಾಗ್ಗೆ ವಿದೇಶ ಪ್ರಯಾಣ ಕೈಗೊಳ್ಳುವ ರಾಹುಲ್‌ಗಾಂಧಿ ಅವರು ಸುಧಾರಿತ ಎಎಸ್‌ಎಲ್ ಸಶಸ್ತ್ರ ರಕ್ಷಣೆಯೊಂದಿಗೆ ಝಡ್‌ಪ್ಲಸ್ ಶ್ರೇಣಿಯ ಭದ್ರತೆಯನ್ನು ನೀಡಲಾಗುತ್ತಿದೆ.
ರಾಹುಲ್ ಗಾಂಧಿ ಅವರು ಸಂಚರಿಸುವಾಗಲೆಲ್ಲಾ ಅವರಿಗೆ 10 ರಿಂದ12 ಮಂದಿ ಸಶಸ್ತ್ರ ಸಿಆರ್‌ಎಫ್ ಕಮಾಂಡೊಗಳು ಭದ್ರತೆಯನ್ನು ಒದಗಿಸುತ್ತಾರೆ. ಎಎಸ್‌ಎಲ್‌ನ ಭಾಗವಾಗಿರುವ ಈ ಪಡೆಯು ರಾಹುಲ್ ಭೇಟಿಯಾಗುವ ಸ್ಥಳಗಳನ್ನು ಮುಂಚಿತವಾಗಿ ಪರಿಶೀಲಿಸುತ್ತದೆ.
ರಾಹುಲ್‌ಗಾಂಧಿ ಅವರು ಯಾರಿಗೂ ಮಾಹಿತಿ ನೀಡದೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ತನಗೆ ನೀಡಲಾದ ಭದ್ರತಾ ವ್ಯವಸ್ಥೆಯನ್ನು ಅವರು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂದು ಸಿಆರ್‌ಪಿಎಫ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ಗಾಂಧಿ ಅವರಿಗೆ ಬುಧವಾರ ಪತ್ರ ಬರೆದಿದೆಯೆಂದು ಮಾಧ್ಯಮಗಳು ವರದಿ ಮಾಡಿಲಅ.
ರಾಹುಲ್ ಗಾಂಧಿ ಅವರು ಇಟಲಿ (ಡಿ.30ರಿಂದ ಜ.9), ವಿಯೆಟ್ನಾಂ (ಮಾ.12ರಿಂದ 17), ದುಬೈ (ಎ.17ರಿಂದ 23), ಖತರ್ (ಜೂ.11ರಿಂದ18), ಲಂಡನ್ (ಜೂ.25ರಿಂದ ಜು.6 ಹಾಗೂ ಮಲೇಶ್ಯ (ಸೆ.4ರಿಂದ 8)ದಂತಹ ದೇಶಗಳಿಗೆ ರಾಹುಲ್ ಕೈಗೊಂಡಿದ್ದ ಪ್ರವಾಸಗಳನ್ನು ಸಿಆರ್‌ಪಿಎಫ್ ತನ್ನ ಪತ್ರದಲ್ಲಿ ಉಲ್ಲೇಖಿಸಿದೆಯೆಂದು ಎನ್‌ಡಿಟಿವಿ ವರದಿ ತಿಳಿಸಿದೆ.
ಭವಿಷ್ಯದಲ್ಲಿ ಭದ್ರತಾ ಶಿಷ್ಟಾಚಾರಗಳನ್ನು ವಿಧೇಯರಾಗಿರುವಂತೆಯೂ ಸಿಆರ್‌ಪಿಎಫ್ ಪ್ರತಿಪಕ್ಷ ನಾಯಕರಾದ ರಾಹುಲ್‌ಗೆ ಪತ್ರದಲ್ಲಿ ಮನವಿ ಮಾಡಿದೆ. ಭದ್ರತಾ ಶಿಷ್ಟಾಚಾರಗಳ ಉಲ್ಲಂಘನೆಯು ಹಾಗೂ ಅತಿಗಣ್ಯ ವ್ಯಕ್ತಿಗಳ ಭದ್ರತಾ ವ್ಯವಸ್ಥೆ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸಲಿದೆ ಹಾಗೂ ತಾವು ಸಂಭಾವ್ಯ ಅಪಾಯಗಳಿಗೀಡಾಗಬಹುದಾಗಿ ಎಂದು ಸಿಆರ್‌ಪಿಎಫ್ ಪತ್ರದಲ್ಲಿ ರಾಹುಲ್‌ರಿಗೆ ತಿಳಿಸಿದೆ.