×
Ad

ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ವಿವಾಹ ಸಮಾರಂಭ ಆಯೋಜನೆ: ವರದಿ

Update: 2025-02-03 11:26 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿದೆ ಎಂದು Mint ವರದಿ ಮಾಡಿದೆ.

ರಾಷ್ಟ್ರಪತಿ ಭವನವು ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸ. ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು ಅಧಿಕೃತ ಭೇಟಿಗೆ ದೇಶಕ್ಕೆ ಬಂದಾಗ ರಾಷ್ಟ್ರಪತಿ ಭವನದಲ್ಲಿ ತಂಗುತ್ತಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಷ್ಟ್ರಪತಿ ಭವನದಲ್ಲಿ ವಿವಾಹ ಸಿದ್ಧತೆಗಳನ್ನು ಮುಂದುವರಿಸಲು ಅನುಮತಿ ನೀಡಿದ್ದಾರೆ. ಆದರೆ ಅತಿಥಿಗಳ ಪಟ್ಟಿ ಚಿಕ್ಕದಾಗಿರಬೇಕು ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿ ಪೂನಂ ಗುಪ್ತಾ ಅವರ ವಿವಾಹ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಗುಪ್ತಾ ಅವರ ಕಾರ್ಯಕ್ಷಮತೆಯಿಂದ ರಾಷ್ಟ್ರಪತಿ ಮುರ್ಮು ತುಂಬಾ ಪ್ರಭಾವಿತರಾಗಿದ್ದಾರೆ. ಅದೇ ಕಾರಣಕ್ಕೆ ರಾಷ್ಟ್ರಪತಿ ಭವನದ ಆವರಣದಲ್ಲಿರುವ ಮದರ್ ತೆರೇಸಾ ಕ್ರೌನ್ ಸಂಕೀರ್ಣದಲ್ಲಿ ವಿವಾಹ ಸಮಾರಂಭವನ್ನು ನಡೆಸಲು ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ, ರಾಷ್ಟ್ರಪತಿ ಭವನದಿಂದ ವಿವಾಹದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಪೂನಂ ಗುಪ್ತಾ ಯಾರು?

ಪೂನಂ ಗುಪ್ತಾ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್. ಅವರು ಪ್ರಸ್ತುತ ರಾಷ್ಟ್ರಪತಿಗಳ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಒ) ಆಗಿ ನೇಮಕಗೊಂಡಿದ್ದಾರೆ.

ಗುಪ್ತಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸಕ್ತ ನಿಯೋಜಿತರಾಗಿರುವ ಮತ್ತೊಬ್ಬ ಸಹಾಯಕ ಕಮಾಂಡೆಂಟ್ ಅವನೀಶ್ ಕುಮಾರ್ ಅವರನ್ನು ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 12ರಂದು ಈ ವಿವಾಹ ನಿಗದಿಪಡಿಸಲಾಗಿದೆ.

ಪೂನಂ ಗುಪ್ತಾ, ಗಣಿತದಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ ಪಡೆದಿದ್ದಾರೆ. ಯುಪಿಎಸ್‌ಸಿ ಸಿಎಪಿಎಫ್ ಪರೀಕ್ಷೆಯಲ್ಲಿ ಅವರು 81 ನೇ ರ‍್ಯಾಂಕ್ ಪಡೆದಿದ್ದರು. ಈ ಹಿಂದೆ ಅವರನ್ನು ಬಿಹಾರದ ನಕ್ಸಲ್ ಪೀಡಿತ ಪ್ರದೇಶದಲ್ಲಿ ನೇಮಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News