ಸರಕಾರದಿಂದ ಪೂರ್ವಾನ್ವಯ ಪರಿಸರ ಅನುಮತಿಗಳ ನೀಡಿಕೆ ನಿರ್ಬಂಧಿಸಿದ್ದ ತನ್ನ ತೀರ್ಪನ್ನು ಹಿಂಪಡೆದ ಸುಪ್ರೀಂ ಕೋರ್ಟ್
Photo credit: PTI
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಪರಿಸರ ಮಾನದಂಡಗಳನ್ನು ಉಲ್ಲಂಘಿಸಿದ ಗಣಿಗಾರಿಕೆ ಯೋಜನೆಗಳಿಗೆ ಕೇಂದ್ರ ಸರಕಾರವು ಪೂರ್ವಾನ್ವಯವಾಗಿ ಪರಿಸರ ಅನುಮತಿಗಳನ್ನು ನೀಡುವುದನ್ನು ನಿರ್ಬಂಧಿಸಿದ್ದ ತನ್ನ ಮೇ 16ರ ತೀರ್ಪನ್ನು ಮಂಗಳವಾರ 2:1 ಬಹುಮತದಿಂದ ಹಿಂದೆಗೆದುಕೊಂಡಿದೆ.
ವನಶಕ್ತಿ ತೀರ್ಪಿನ ಪುನರ್‌ಪರಿಶೀಲನೆ ಮತ್ತು ಮಾರ್ಪಾಡು ಕೋರಿ ಸಲ್ಲಿಸಲಾಗಿದ್ದ ಸುಮಾರು 40 ಅರ್ಜಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಉಜ್ಜಲ ಭುಯಾನ್ ಮತ್ತು ಕೆ.ವಿನೋದ ಚಂದ್ರನ್ ಅವರನ್ನು ಒಳಗೊಂಡಿದ್ದ ಪೀಠವು ಮೂರು ಪ್ರತ್ಯೇಕ ತೀರ್ಪುಗಳನ್ನು ನೀಡಿತು.
ಈ ವರ್ಷದ ಮೇ 16ರಂದು ವನಶಕ್ತಿ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ನ್ಯಾ.ಎ.ಎಸ್.ಓಕಾ ಮತ್ತು ನ್ಯಾ.ಉಜ್ಜಲ್ ಭುಯಾನ್ ಅವರ ಪೀಠವು ಹೊರಡಿಸಿದ್ದ ತೀರ್ಪು ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಸಂಬಂಧಿತ ಪ್ರಾಧಿಕಾರಗಳು ನಿಯಮಗಳನ್ನು ಉಲ್ಲಂಘಿಸಿದವರಿಗೆ ಪೂರ್ವಾನ್ವಯವಾಗಿ ಪರಿಸರ ಅನುಮತಿಗಳನ್ನು ನೀಡುವುದನ್ನು ನಿಷೇಧಿಸಿತ್ತು.
ಮಂಗಳವಾರ ಆ ತೀರ್ಪನ್ನು ಮೆಲುಕು ಹಾಕಿದ ಸಿಜೆಐ ಗವಾಯಿ ಮತ್ತು ನ್ಯಾ.ವಿನೋದ್ ಚಂದ್ರನ್ ಅವರು,ಈ ವಿಷಯವನ್ನು ಹೊಸದಾಗಿ ಪರಿಗಣಿಸಲು ಅದನ್ನು ಸೂಕ್ತ ಪೀಠಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.
‘ಪರಿಸರ ಅನುಮತಿಯನ್ನು ಪರಿಶೀಲಿಸದಿದ್ದರೆ 20,000 ಕೋಟಿ ರೂ.ಗಳ ಸಾರ್ವಜನಿಕ ಯೋಜನೆಗಳನ್ನು ಕೆಡವಬೇಕಾಗುತ್ತದೆ. ನಾನು ಮೇ 16ರ ತೀರ್ಪನ್ನು ಹಿಂದೆಗೆದುಕೊಳ್ಳಲು ಒಲವು ಹೊಂದಿದ್ದೇನೆ. ನನ್ನ ಸಹೋದ್ಯೋಗಿ ನ್ಯಾ.ಭುಯಾನ್ ಅವರು ನನ್ನ ನಿರ್ಧಾರವನ್ನು ಟೀಕಿಸಿದ್ದಾರೆ’ ಎಂದು ಸಿಜೆಐ ಹೇಳಿದರು.
ಬಲವಾದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ ನ್ಯಾ.ಭುಯಾನ್, ಪೂರ್ವಾನ್ವಯ ಪರಿಸರ ಅನುಮತಿಗಳಿಗೆ ಯಾವುದೇ ಕಾನೂನು ಆಧಾರವಿಲ್ಲ ಎಂದು ಪ್ರತಿಪಾದಿಸಿದರು. ಪರಿಸರ ಕಾನೂನಿನಲ್ಲಿ ಪೂರ್ವಾನ್ವಯ ಪರಿಸರ ಅನುಮತಿಯ ಪರಿಕಲ್ಪನೆ ಇಲ್ಲ ಎಂದು ಹೇಳಿದ ಅವರು,ಈ ಪರಿಕಲ್ಪನೆಯು ಪರಿಸರ ನ್ಯಾಯತತ್ವಕ್ಕೆ ಒಂದು ಶಾಪವಾಗಿದೆ ಎಂದು ಬಣ್ಣಿಸಿದರು.
2013ರ ಅಧಿಸೂಚನೆ ಮತ್ತು ನಂತರದ ಕಚೇರಿ ಜ್ಞಾಪಕ ಪತ್ರವು ಅನುಮತಿ ನೀಡಬಹುದಾದ ಚಟುವಟಿಕೆಗಳಿಗೆ,ಅದೂ ಗಣನೀಯ ದಂಡಗಳನ್ನು ವಿಧಿಸುವ ಮೂಲಕ ಪರಿಸರ ಅನುಮತಿಗಳನ್ನು ನೀಡಲು ಚೌಕಟ್ಟೊಂದನ್ನು ಕಲ್ಪಿಸಿದೆ ಎಂದು ಸಿಜೆಐ ಬೆಟ್ಟು ಮಾಡಿದರು.
ವನಶಕ್ತಿ ತೀರ್ಪು ಅದಾಗಲೇ ಪೂರ್ವಾನ್ವಯ ಪರಿಸರ ಅನುಮತಿಗಳನ್ನು ಪಡೆದಿದ್ದ ಯೋಜನೆಗಳಿಗೆ ರಕ್ಷಣೆ ನೀಡಿತ್ತು ಮತ್ತು ಭವಿಷ್ಯದಲ್ಲಿ ಇಂತಹ ಅನುಮತಿಗಳನ್ನು ನೀಡುವುದನ್ನು ಮಾತ್ರ ನಿಷೇಧಿಸಿತ್ತು ಎಂದು ಹೇಳಿದ ಸಿಜೆಐ ಗವಾಯಿ,ಇದು ತಾರತಮ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ತೀರ್ಪನ್ನು ಹಿಂದೆಗೆದುಕೊಳ್ಳಲು ತಾನು ನಿರ್ಧರಿಸಿದ್ದೇನೆ ಎಂದರು.