'ಆಘಾತಕಾರಿ, ತೀವ್ರ ವಿಷಾದಕರ' : ಗಾಝಾದಲ್ಲಿ ಪತ್ರಕರ್ತರ ಹತ್ಯೆಗೆ ಭಾರತ ಖಂಡನೆ
Photo | REUTERS
ಹೊಸದಿಲ್ಲಿ : ಗಾಝಾದ ಆಸ್ಪತ್ರೆಯಲ್ಲಿ ಐವರು ಪತ್ರಕರ್ತರ ಹತ್ಯೆಯು ಆಘಾತಕಾರಿ ಮತ್ತು ತೀವ್ರ ವಿಷಾದಕರ ಎಂದು ಭಾರತ ಹೇಳಿದೆ.
ಗಾಝಾದ ಖಾನ್ ಯೂನಿಸ್‌ನಲ್ಲಿ ಪತ್ರಕರ್ತರ ಜೀವಹಾನಿಯ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, ಪತ್ರಕರ್ತರ ಹತ್ಯೆ ಆಘಾತಕಾರಿ ಮತ್ತು ತೀವ್ರ ವಿಷಾದನೀಯ ಎಂದು ಹೇಳಿದರು.
"ಸಂಘರ್ಷದಲ್ಲಿ ನಾಗರಿಕರ ಪ್ರಾಣಹಾನಿಯನ್ನು ಭಾರತ ನಿರಂತರವಾಗಿ ಖಂಡಿಸಿದೆ. ಇಸ್ರೇಲ್ ಅಧಿಕಾರಿಗಳು ಈಗಾಗಲೇ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ನಮಗೆ ತಿಳಿದಿದೆ" ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಾಝಾದ ನಾಸೆರ್ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಗೆ ರಾಯಿಟರ್ಸ್, ಅಸೋಸಿಯೇಟೆಡ್ ಪ್ರೆಸ್, ಅಲ್ ಜಝೀರಾ ಮತ್ತು ಮಿಡಲ್ ಈಸ್ಟ್ ಐ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ಐವರು ಪತ್ರಕರ್ತರು ಮೃತಪಟ್ಟಿದ್ದರು.
“ಸೋಮವಾರ ನಾಸೆರ್ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಆರೋಗ್ಯ ಕಾರ್ಯಕರ್ತರು ಕೂಡ ಮೃತಪಟ್ಟಿದ್ದಾರೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.