×
Ad

ಕರೂರು ಕಾಲ್ತುಳಿತ ಘಟನೆ | SIT ರಚಿಸಿದ ಕ್ರಮವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

"ರಾತ್ರಿಯೇ ಕೇವಲ 4-5 ಗಂಟೆಯೊಳಗೆ 41 ಮೃತದೇಹಗಳ ಪೋಸ್ಟ್ ಮಾರ್ಟಂ ಹೇಗೆ ಮಾಡಿದಿರಿ?"

Update: 2025-10-10 21:54 IST

ಸುಪ್ರೀಂ ಕೋರ್ಟ್ | Photo Credit : PTI 

ಹೊಸದಿಲ್ಲಿ: ನಟ, ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಆಯೋಜಿಸಿದ್ದ ಚುನಾವಣಾ ಪ್ರಚಾರದ ರ್ಯಾಲಿಯ ವೇಳೆ ಕರೂರಿನಲ್ಲಿ ಸಂಭವಿಸಿದ್ದ ಕಾಲ್ತುಳಿತ ಘಟನೆಯ ಕುರಿತು ವಿಶೇಷ ತನಿಖಾ ತಂಡ ರಚನೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿರುವ ಕ್ರಮವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

ಮದ್ರಾಸ್ ಹೈಕೋರ್ಟ್ ನ ಮಧುರೈ ವಿಭಾಗೀಯ ಪೀಠ ಈ ಘಟನೆಯನ್ನು ಪರಿಗಣನೆಗೆ ತೆಗೆದುಕೊಂಡು, ಸಿಬಿಐ ತನಿಖೆಗೆ ನಿರಾಕರಿಸಿರುವಾಗ, ಚೆನ್ನೈ ನ ಮದ್ರಾಸ್ ಹೈಕೋರ್ಟ್ ನ ಏಕ ಸದಸ್ಯ ಪೀಠವು ಹೇಗೆ ವಿಶೇಷ ತನಿಖಾ ತಂಡ ರಚನೆಗೆ ಆದೇಶಿಸಿತು ಎಂದು ನ್ಯಾಯಾಲಯ ಸೋಜಿಗ ವ್ಯಕ್ತಪಡಿಸಿತು.

ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಕನಿಷ್ಠ 41 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಜೆ.ಕೆ.ಮಾಹೇಶ್ವಿರಿ ಮತ್ತು ನ್ಯಾ. ಎನ್.ವಿ.ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠ, ರಾತ್ರಿ ವೇಳೆ ಕೇವಲ 4-5 ಗಂಟೆಯೊಳಗೆ 41 ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಹೇಗೆ ನಡೆಸಲಾಯಿತು ಎಂದೂ ಆಡಳಿತಾರೂಢ ಡಿಎಂಕೆ ಸರಕಾರವನ್ನು ಪ್ರಶ್ನಿಸಿತು.

ರಾಜಕೀಯ ಪಕ್ಷಗಳ ರ್ಯಾಲಿಗೆ ಅನುಮತಿ ನೀಡಲು ಪ್ರಮಾಣೀಕೃತ ಕಾರ್ಯವಿಧಾನವನ್ನು ರೂಪಿಸಬೇಕು ಎಂದು ಕೋರಿ ಮದ್ರಾಸ್ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಕೆಯಾಗಿತ್ತು ಎಂಬುದರತ್ತ ಬೊಟ್ಟು ಮಾಡಿದ ನ್ಯಾ. ಮಹೇಶ್ವರಿ, “ಪ್ರಕರಣವನ್ನು ಅದಾಗಲೇ ಪರಿಗಣನೆಗೆ ತೆಗೆದುಕೊಂಡಾದ ಮೇಲೆ, ವಿಶೇಷ ತನಿಖಾ ತಂಡದ ತನಿಖೆಗೆ ಆದೇಶಿಸುವ ಅಗತ್ಯವಾದರೂ ಏಕಸದಸ್ಯ ನ್ಯಾಯಪೀಠದ ನ್ಯಾಯಾಧೀಶರಿಗೇನಿತ್ತು?” ಎಂದು ಪ್ರಶ್ನಿಸಿದರು. ಒಂದೇ ದಿನದಲ್ಲಿ ಎರಡು ಆದೇಶಗಳನ್ನು ನೀಡಲಾಗಿದೆ ಎಂಬುದರತ್ತಲೂ ಬೊಟ್ಟು ಮಾಡಿದ ನ್ಯಾಯಾಲಯ, “ವ್ಯವಸ್ಥೆಯಲ್ಲಿ ಒಂದಿಷ್ಟು ಔಚಿತ್ಯತೆ ಇರಬೇಕಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.

“ಈ ಆದೇಶವನ್ನು ಹೇಗೆ ಹೊರಡಿಸಲಾಯಿತು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಕಳೆದ 15 ವರ್ಷಗಳ ನನ್ನ ನ್ಯಾಯಾಧೀಶನ ಅನುಭವದಲ್ಲಿ, ಒಂದು ವೇಳೆ ವಿಭಾಗೀಯ ನ್ಯಾಯಪೀಠವೇನಾದರೂ ಪ್ರಕರಣವನ್ನು ಪರಿಗಣಿಸಿದರೆ, ಏಕಸದಸ್ಯ ಪೀಠ ಹಿಂದೆ ಸರಿಯುತ್ತದೆ” ಎಂದು ನ್ಯಾ. ಮಹೇಶ್ವರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News