ಸೋನಂ ವಾಂಗ್ಚುಕ್ ಬಂಧನ ಪ್ರಶ್ನಿಸಿ ಅವರ ಪತ್ನಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ
Photo: timesofindia
ಹೊಸದಿಲ್ಲಿ: ತಮ್ಮ ಪತಿ ಹಾಗೂ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿರುವುದು ಕಾನೂನುಬಾಹಿರ ಹಾಗೂ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿರುವ ನಿರಂಕುಶಾಧಿಕಾರಿ ವರ್ತನೆ ಎಂದು ಆರೋಪಿಸಿ, ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ಸುಪ್ರೀಂಕೋರ್ಟ್ ನಡೆಸಲಿದೆ.
ಆಂಗ್ಮೊ ಸಲ್ಲಿರುವ ತಿದ್ದುಪಡಿ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ ಹಾಗೂ ಲಡಾಖ್ ಆಡಳಿತಕ್ಕೆ ಅಕ್ಟೋಬರ್ 29ರಂದು ಸುಪ್ರೀಂಕೋರ್ಟ್ ಸೂಚಿಸಿತ್ತು. "ನಿರ್ಜೀವ ಎಫ್ಐಆರ್, ಅವಸರದ ತೀರ್ಮಾನ, ಊಹಾತ್ಮಕ ಅಭಿಪ್ರಾಯ, ಬಂಧನಕ್ಕೆ ಅಗತ್ಯವಾದ ಯಾವುದೇ ಜೀವಂತ ಅಥವಾ ಸೂಕ್ತ ಸಂಬಂಧವಿರುವ ಸಾಕ್ಷ್ಯಗಳಿಲ್ಲದೆ ಬಂಧನದ ಆದೇಶವನ್ನು ಹೊರಡಿಸಲಾಗಿದೆ ಹಾಗೂ ಇದರಿಂದಾಗಿ ಯಾವುದೇ ಕಾನೂನಾತ್ಮಕ ಅಥವಾ ನೈಜ ಸಮರ್ಥನೆಯನ್ನು ನಿರಾಕರಿಸಲಾಗಿದೆ" ಎಂದು ತಿದ್ದುಪಡಿ ಅರ್ಜಿಯಲ್ಲಿ ವಾದಿಸಲಾಗಿದೆ.
ಸೆಪ್ಟೆಂಬರ್ 24ರಂದು ಲೇಹ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸೋನಂ ವಾಂಗ್ಚುಕ್ ಅವರ ಯಾವುದೇ ಹೇಳಿಕೆ ಅಥವಾ ಕ್ರಿಯೆಯನ್ನು ತಳುಕು ಹಾಕಬಾರದು ಎಂದೂ ಆಂಗ್ಮೊ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.