×
Ad

ಸೂರತ್‌ | ರಾಹುಲ್ ಗಾಂಧಿಯವರನ್ನು ಪ್ರತಿನಿಧಿಸಿದ್ದ ವಕೀಲ ಫಿರೋಝ್ ಪಠಾಣ್ ಆತ್ಮಹತ್ಯೆ

Update: 2025-09-06 23:05 IST

PC : ndianexpress

ಸೂರತ್: ಸೂರತ್‌ನ ಪ್ರಸಿದ್ಧ ವಕೀಲ ಹಾಗೂ ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ನಿಕಟ ಪೂರ್ವ ಸಂಚಾಲಕರಾಗಿದ್ದ ಫಿರೋಝ್ ಪಠಾಣ್ ಗುರುವಾರ ರಾತ್ರಿ ತಾಪಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಮ್ಮೆ ರಾಹುಲ್ ಗಾಂಧಿ ಅವರನ್ನು ಪ್ರತಿನಿಧಿಸಿದ್ದ ವಕೀಲರಾಗಿದ್ದ ಫಿರೋಝ್ ಅವರ ಆಕಸ್ಮಿಕ ಸಾವಿನಿಂದ ಸೂರತ್ ನ ವಕೀಲರ ಸಮುದಾಯ ಶೋಕಸಾಗರದಲ್ಲಿ ಮುಳುಗಿದೆ.

ಗುರುವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಕೇಬಲ್ ಸೇತುವೆಯಿಂದ ನದಿಗೆ ಹಾರಿದ ಫಿರೋಝ್ ಅವರ ಮೃತ ದೇಹವನ್ನು ಶುಕ್ರವಾರ ಮುಂಜಾನೆ ಉಭಾರತ್ ಬೀಚ್ ಬಳಿ ಪತ್ತೆಹಚ್ಚಲಾಗಿದೆ. ಕುಟುಂಬ ಕಲಹ, ಆರ್ಥಿಕ ಒತ್ತಡ ಮತ್ತು ಸಾಲದ ಸಮಸ್ಯೆಗಳಿಂದ ಅವರು ಹಲವು ತಿಂಗಳುಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಆತ್ಮಹತ್ಯೆಗೆ ಮುನ್ನ, ಫಿರೋಝ್ ತಮ್ಮ ಕಿರಿಯ ಸಹೋದ್ಯೋಗಿ ದೀಪಕ್ ಅವರಿಗೆ ಕರೆ ಮಾಡಿ, "ನನಗೆ ಏನಾದರೂ ಆಗಿದ್ದರೆ ನ್ಯಾಯಾಲಯದ ಹತ್ತಿರದ ಸೇತುವೆಗೆ ಬನ್ನಿ" ಎಂದು ಸೂಚಿಸಿದ್ದರು. ಗಾಬರಿಗೊಂಡ ದೀಪಕ್ ಕಚೇರಿಗೆ ಧಾವಿಸಿದರು. ಅಲ್ಲಿ ಯಾರೂ ಇರದಿದ್ದನ್ನು ಕಂಡು ತಕ್ಷಣವೇ ಫಿರೋಝ್ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಕೇಬಲ್ ಸೇತುವೆಯತ್ತ ತೆರಳಿದಾಗ, ಫಿರೋಝ್ ಅವರ ಕಾರು ಸೇತುವೆಯ ಕೆಳಗೆ ನಿಂತಿರುವುದು ಕಂಡು ಬಂದಿದೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಹುಡುಕಾಟ ನಡೆಸಿದರು. ತಾಪಿ ನದಿಯಲ್ಲಿ ಪ್ರವಾಹದಿಂದಾಗಿ ನೀರಿನ ಹರಿವು ಹೆಚ್ಚಿದ್ದರಿಂದ ಹುಡುಕಾಟಕ್ಕೆ ಅಡಚಣೆಯುಂಟಾಯಿತು. ಮುಂಜಾನೆ ಅವರ ಮೃತದೇಹ ತುಸು ದೂರದಲ್ಲಿ ಸಮುದ್ರದ ಬಳಿ ಪತ್ತೆಯಾಯಿತು ಎಂದು ತಿಳಿದು ಬಂದಿದೆ.

ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಪ್ರಕಾರ, ಫಿರೋಝ್ ಹಲವು ತಿಂಗಳುಗಳಿಂದ ಕುಟುಂಬ ಕಲಹ, ಆಸ್ತಿ ವಿವಾದ, ಸಾಲದ ಒತ್ತಡ ಮತ್ತು ಆರ್ಥಿಕ ಸಂಕಷ್ಟಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು. ಈ ಕಾರಣಗಳಿಂದಾಗಿ ಅವರಿಗೆ ಖಿನ್ನತೆಯುಂಟಾಗಿತ್ತು ಎನ್ನಲಾಗಿದೆ.

ಈದ್ ಮಿಲಾದ್ ದಿನದಂದು ನಡೆದ ಈ ಘಟನೆ ಸೂರತ್ ನಗರವನ್ನೇ ಬೆಚ್ಚಿಬೀಳಿಸಿದೆ. ವಕೀಲರ ಸಮುದಾಯವು ಫಿರೋಝ್ಪ ಪಠಾಣ್ ಅವರನ್ನು ತೀಕ್ಷ್ಣ ಬುದ್ಧಿಶಕ್ತಿಯುಳ್ಳ, ದಿಟ್ಟ ವಕೀಲರಾಗಿ ನೆನಪಿಸಿಕೊಳ್ಳುತ್ತಿದ್ದಾರೆ.

ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News