ಬಿಹಾರ ಉಪಮುಖ್ಯಮಂತ್ರಿ ಬಳಿ ಎರಡು ಮತದಾರರ ಗುರುತಿನ ಚೀಟಿಗಳಿವೆ: ತೇಜಸ್ವಿ ಯಾದವ್ ಆರೋಪ
ತೇಜಸ್ವಿ ಯಾದವ್ (Photo: PTI)
ಹೊಸದಿಲ್ಲಿ,ಆ.10: ಬಿಹಾರದ ಉಪಮುಖ್ಯಮಂತ್ರಿ ವಿಜಯ ಕುಮಾರ್ ಸಿನ್ಹಾ ಅವರು ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರನಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರವಿವಾರ ಆಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ತೇಜಸ್ವಿ ಯಾದವ್, ಬಿಜೆಪಿ ನಾಯಕರೂ ಆದ ವಿಜಯ್ ಕುಮಾರ್ ಸಿನ್ಹಾ ಅವರ ಹೆಸರು ಲಖಿಸರಾಯ್ ಜಿಲ್ಲೆಯ ಲಖಿಸರಾಯ್ ವಿಧಾನಸಭಾ ಕ್ಷೇತ್ರ ಹಾಗೂ ಪಟ್ನಾ ಜಿಲ್ಲೆಯ ಬಂಕಿಪುರ ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಯಲ್ಲಿ ನೋಂದಣಿಯಾಗಿದೆ ಎಂದು ಹೇಳಿದ್ದಾರೆ.
ವಿಜಯ ಕುಮಾರ್ ಸಿನ್ಹಾ ಅವರು ಹೊಂದಿರುವ ಎರಡು ಪ್ರತ್ಯೇಕ ಮತದಾರ ಗುರುತುಚೀಟಿ (ಎಪಿಕ್)ಗಳ ಸಂಖ್ಯೆಗಳನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ. ಅವರ ಎಪಿಕ್ ಸಂಖ್ಯೆ ಲಖಿಸರಾಯ್‌ನಲ್ಲಿ ಐಎಎಫ್ 3939337 ಹಾಗೂ ಬಂಕಿಪುರ್‌ನಲ್ಲಿ ಎಎಫ್ಎಸ್0853341 ಆಗಿದೆಯೆಂದು ತೇಜಸ್ವಿ ತಿಳಿಸಿದ್ದು, ಈ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ.
ಲಖಿಸರಾಯ್ ಕ್ಷೇತ್ರದ ಮತದಾರಪಟ್ಟಿಯಲ್ಲಿ ವಿಜಯ್ ಕುಮಾರ್ ಸಿನ್ಹಾ ಅವರ ಹೆಸರು ಸೆಕ್ಷನ್ ನಂ.1, ಸರಣಿ ಸಂಖ್ಯೆ 274ರಲ್ಲಿ ಹಾಗೂ ಬಂಕಿಪುರ ಅಸೆಂಬ್ಲಿ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ಸೆಕ್ಷನ್ ನಂ.4 ಹಾಗೂ ಸರಣಿ ಸಂಖ್ಯೆ 757ರಲ್ಲಿ ಕಾಣಿಸಿಕೊಂಡಿದೆ. ಜನವರಿಯಲ್ಲಿ ಪ್ರಕಟಿಸಲಾದ ಬಂಕಿಪುರ ಕ್ಷೇತ್ರದ ಹಳೆ ಮತದಾರಪಟಿಯಲ್ಲಿ ಅವರ ಹೆಸರು ಸೆಕ್ಷನ್ ನಂ.4, ಸರಣಿ ಸಂಖ್ಯೆ 815ರಲ್ಲಿ ದಾಖಲಾಗಿದೆ. ಚುನಾವಣಾ ಅಫಿಡವಿಟ್‌ನಲ್ಲಿಯೂ ವಿಜಯಕುಮಾರ್ ಅವರು ಕೇವಲ ಬಂಕಿಪುರ ಕ್ಷೇತ್ರದ ಮತದಾರಪಟ್ಟಿಯಲ್ಲಿರುವುದಾಗಿ ಉಲ್ಲೇಖಿಸಿದ್ದಾರೆ. ಎರಡುಹಂತಗಳ ಮತದಾನದ ಸಂದರ್ಭದಲ್ಲಿ ವಿಜಯ ಕುಮಾರ್ ಸಿನ್ಹಾ ಅವರು ಎರಡು ವಿಭಿನ್ನ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡುವ ಸ್ಥಿತಿಯಲ್ಲಿದ್ದಾರೆಂದು ತೇಜಸ್ವಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೆ ಬಿಹಾರ ಉಪಮುಖ್ಯಮಂತ್ರಿಯ ಎರಡೂ ಮತದಾರ ಗುರುತುಚೀಟಿಗಳಲ್ಲಿ ಉಲ್ಲೇಖಿಸಿರುವ ವಯಸ್ಸಿನಲ್ಲೂ ವ್ಯತ್ಯಾಸವಿದೆ. ಒಂದು ಮತದಾರ ಗುರುತುಚೀಟಿಯಲ್ಲಿ ಅವರ ವಯಸ್ಸು 57 ಆಗಿದ್ದರೆ, ಇನ್ನೊಂದರಲ್ಲಿ 60 ಆಗಿದೆ. ಇದು ‘ವಂಚನೆ’ ಹಾಗೂ ‘ವಯಸ್ಸಿನ ಕುರಿತ ಸುಳ್ಳು ಹೇಳಿಕೆ ’ ಆಗುವುದಿಲ್ಲವೇ ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ. ಎರಡು ವಿಭಿನ್ನ ಕ್ಷೇತ್ರಗಳಲ್ಲಿ ತೇಜಸ್ವಿ ಯಾದವ್ ಅವರು ಎರಡು ಪ್ರತ್ಯೇಕ ಗಣತಿ ಫಾರಂಗಳನ್ನು ಸಲ್ಲಿಸಿದ್ದಾರೆ. ಎರಡರಲ್ಲೂ ಸಿನ್ಹಾರ ಸಹಿ ಇರುವುದು, ಅವರು ಅರಿವಿದ್ದೇ ಎರಡೂ ಸ್ಥಳಗಳಲ್ಲಿ ತನ್ನ ಹೆಸರನ್ನು ನೋಂದಣಿಮಾಡಿರುವುದನ್ನು ಸೂಚಿಸುತ್ತದೆ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಆಗಸ್ಟ್ 1ರಂದು ಬಿಡುಗಡೆಗೊಳಿಸಲಾದ ನೂತನ ಕರಡು ಮತದಾರಪಟ್ಟಿಯಲ್ಲಿ ತನ್ನ ಹೆಸರು ನಾಪತ್ತೆಯಾಗಿದೆಯೆಂದು ತೇಜಸ್ವಿ ಯಾದವ್ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಆಪಾದಿಸಿದ್ದರು. ಅಲ್ಲದೆ ತನ್ನ ಎಪಿಕ್ ಸಂಖ್ಯೆಯನ್ನು ಕೂಡಾ ಅವರು ಪ್ರದರ್ಶಿಸಿದ್ದರು. ಆದರೆ ಅವರ ಆರೋಪವನ್ನು ಚುನಾವಣಾ ಆಯೋಗ ತಳ್ಳಿಹಾಕಿತ್ತು. ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರದರ್ಶಿಸಿದ ಎಪಿಕ್ ಸಂಖ್ಯೆಯು ಅನಧಿಕೃತವೆಂದು ಅದು ಹೇಳಿದೆ. ಅವರ ಹೆಸರು ಬಿಹಾರ ಪಶುವೈದ್ಯಕೀಯ ವಿಜ್ಞಾನ ವಿವಿಯ ಗ್ರಂಥಾಲಯ ಕಟ್ಟಡದಲ್ಲಿರುವ ಮತಗಟ್ಟೆ ಸಂಖ್ಯೆ 204ರ ಮತದಾರಪಟ್ಟಿಯಲ್ಲಿ ಸರಣಿ ಸಂಖ್ಯೆ 416ರಲ್ಲಿ ನೋಂದಣಿಯಾಗಿದೆ ಎಂದು ಅದು ವಿವರಣೆ ನೀಡಿತ್ತು. ಈ ಬಗ್ಗೆ ತನಿಖೆಗಾಗಿ ಎರಡೂ ಎಪಿಕ್ ಕಾರ್ಟ್‌ನ ವಿವರಗಳನ್ನು ಆಗಸ್ಟ್ 8ರೊಳಗೆ ತನಗೆ ಸಲ್ಲಿಸುವಂತೆ ಅದು ಸೂಚಿಸಿತ್ತು.