×
Ad

ಅಪಘಾತದಲ್ಲಿ ರಿಷಭ್ ಪಂತ್ ಅವರ ಜೀವ ಉಳಿಸಿದ ವ್ಯಕ್ತಿಯ ಜೀವನ್ಮರಣ ಹೋರಾಟ

Update: 2025-02-13 07:45 IST

ರಜತ್ | ಮನು ಕಶ್ಯಪ್PC: x.com/newsindiabytes

ಮುಝಫರ್ ನಗರ: ದೆಹಲಿ- ಡೆಹ್ರಾಡೂನ್ ಹೆದ್ದಾರಿಯಲ್ಲಿ ರೂರ್ಕಿ ಬಳಿ 2022ರ ಡಿಸೆಂಬರ್ 30 ರ ರಾತ್ರಿ , ನಜ್ಜುಗುಜ್ಜಾಗಿದ್ದ ಮರ್ಸಿಡೆಸ್ ನಿಂದ ನಡುಗುವ ಚಳಿಯಲ್ಲಿ ರಕ್ತಸಿಕ್ತ, ಅರೆಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ವಾಹನದಿಂದ ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿ, ವೈದ್ಯಕೀಯ ನೆರವು ದೊರಕುವವರೆಗೂ ಅಲ್ಲೇ ಇದ್ದು ಸಹಕರಿಸಿದ ರಜತ್ ಕುಮಾರ್ ಹಾಗೂ ನಿಷು ಅವರಿಗೆ ತಾವು ಜೀವರಕ್ಷಣೆ ಮಾಡಿದ ವ್ಯಕ್ತಿ ಯಾರೆಂಬ ಪರಿಕಲ್ಪನೆಯೂ ಇರಲಿಲ್ಲ. ಅವರೇ ಭಾರತದ ಸ್ಟಾರ್ ಕ್ರಿಕೆಟರ್ ರಿಷಭ್ ಪಂತ್. "ನನಗೆ ನೆರವಾದ ಹೀರೊಗಳು.. ನಾನು ಅವರಿಗೆ ಕೃತಜ್ಞ ಹಾಗೂ ಚಿರಋಣಿ" ಎಂದ ಪಂತ್ ರಜತ್ ಗೆ ಸ್ಕೂಟರ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.

ಇದೀಗ ರಜತ್ ಆಸ್ಪತ್ರೆಯಲ್ಲಿ ಜಿವನ್ಮರಣ ಸ್ಥಿತಿಯಲ್ಲಿದ್ದು, ತಾವು ಮಾಡದ ಅಪರಾಧಕ್ಕೆ ಆರೋಪವನ್ನೂ ಎದುರಿಸುತ್ತಿದ್ದಾರೆ. ಕಳೆದ ಭಾನುವಾರ ರಜತ್ (25) ಹಾಗೂ ಅವರ ಪ್ರೇಯಸಿ ಮನು ಕಶ್ಯಪ್ (21) ಜತೆಗೆ ವಿಷಸೇವಿಸಿದ್ದಾರೆ. ಅಂತರ್ಜಾತಿ ಪ್ರೇಮ, ಕುಟುಂಬಗಳ ಅಸಮ್ಮತಿ ಹಾಗೂ ಬೇರೆ ವಿವಾಹ ಆಯೋಜಿಸಿದ ಹಿನ್ನೆಲೆಯಲ್ಲಿ ಹತಾಶರಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದುದನ್ನು ನೋಡಿದ ಗ್ರಾಮಸ್ಥ ಬುಚ್ಚ ಬಸ್ತಿ ಎಂಬುವವರು ಮಾಹಿತಿ ನೀಡಿದ್ದರು. ಗ್ರಾಮಸ್ಥರು ಬರುವ ವೇಳೆಗೆ ಅನಾಹುತ ನಡೆದುಹೋಗಿತ್ತು. ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಮನು ಕುಟುಂಬದವರು ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಿದ್ದರು. ಮಂಗಳವಾರ ಮುಸ್ಸಂಜೆ ಆಕೆ ಕೊನೆಯುಸಿರೆಳೆದಿದ್ದು, ರಜತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನು ಮೃತಪಟ್ಟ ಬೆನ್ನಲ್ಲೇ ಆಕೆಯ ತಾಯಿ ಪುರ್ಕಾಝಿ ಪೊಲೀಸ್ ಠಾಣೆಗೆ ತೆರಳಿ ರಜತ್ ವಿರುದ್ದ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮಗಳಿಗೆ ವಿಷಪ್ರಾಶನ ಮಾಡಿಸಿ ಕೊಂದಿದ್ದಾಗಿ ಆಪಾದಿಸಿದ್ದಾರೆ. ರಜತ್ ಸಾಹಸವನ್ನು ಕೊಂಡಾಡಿದ್ದ ಗ್ರಾಮದಲ್ಲಿ ಇದೀಗ ಪ್ರಕರಣದ ಬಗ್ಗೆ ಗುಸು ಗುಸು ಕೇಳಿಸುತ್ತಿದೆ.

Full View

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News