ಅಸ್ಸಾಂ: ಜಲಪಾತದಲ್ಲಿ ಕೊಚ್ಚಿ ಹೋದ ಮೂವರು ಸಿಲ್ಚಾರ್ ಎನ್ಐಟಿಯ ವಿದ್ಯಾರ್ಥಿಗಳು; ಒಬ್ಬನ ಮೃತದೇಹ ಪತ್ತೆ
PC: x.com/ndtvindia
ಸಿಲ್ಚಾರ್: ವಿಹಾರಕ್ಕೆ ತೆರಳಿದ್ದ ಇಲ್ಲಿನ ಎನ್ಐಟಿಯ ಬಿ.ಟೆಕ್ ಮೊದಲ ವರ್ಷದ ಮೂವರು ವಿದ್ಯಾರ್ಥಿಗಳು ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಬೌಚಲ್ ಜಲಪಾತದಲ್ಲಿ ಜಾರಿ ಬಿದ್ದು ಕೊಚ್ಚಿಹೋಗಿದ್ದು, ಜಲಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಉತ್ತರ ಪ್ರದೇಶದ ಸರ್ಬ್ ಕೃತಿಕಾ (20) ಎಂಬವರ ಶವ ಪತ್ತೆಯಾಗಿದ್ದು, ಇವರ ಜತೆಗೆ ತೆರಳಿದ್ದ ಉತ್ತರ ಪ್ರದೇಶದ ಸೌಹಾರ್ದ್ ರಾಯ್ (20) ಮತ್ತು ಬಿಹಾರದ ರಾಧಿಕಾ (19) ಅವರು ನಾಪತ್ತೆಯಾಗಿದ್ದಾರೆ.
ಸ್ಥಳೀಯ ಪೊಲೀಸರು ತಕ್ಷಣ ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದು, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಬಳಿಕ ಸೇರಿಕೊಂಡಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಫಾರೂಕ್ ಅಹ್ಮದ್ ಹೇಳಿದ್ದಾರೆ. "ಸಂಜೆವರೆಗೂ ಕಾರ್ಯಾಚರಣೆ ಮುಂದುವರಿದಿದ್ದು, ರಾತ್ರಿಯಾದ ಕಾರಣದಿಂದ ಸ್ಥಗಿತಗೊಳಿಸಲಾಗಿದೆ. ಭಾನುವಾರ ಕಾರ್ಯಾಚರಣೆ ಮುಂದುವರಿಯಲಿದೆ" ಎಂದು ಅವರು ವಿವರಿಸಿದ್ದಾರೆ. ಕಠಿಣವಾದ ಕಂದಕ ಹಾಗೂ ಸಂಪರ್ಕದ ಕೊರತೆ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಎನ್ಐಟಿ ಸಿಲ್ಚಾರ್ ತಂಡ ಸ್ಥಳದಲ್ಲಿದ್ದು, ಅಧಿಕಾರಿಗಳ ಜತೆ ಸಂಪರ್ಕದಲ್ಲಿದೆ. ಈ ಋತುವಿನಲ್ಲಿ ಈ ಜಲಪಾತ ತೀರಾ ಅಪಾಯಕಾರಿ ಎಂದು ಸ್ಥಳೀಯರು ಹೇಳಿದ್ದಾರೆ.