×
Ad

‘ಎರಡು ಭಾರತಗಳಿವೆ’ : ಯಮುನಾ ನದಿಯ ಪಕ್ಕದಲ್ಲೇ ತೀರ್ಥಸ್ನಾನಕ್ಕಾಗಿ ಪ್ರತ್ಯೇಕ ಕೊಳ ನಿರ್ಮಿಸಿದ ಮೋದಿ ಬಗ್ಗೆ ರಾಹುಲ್ ಟೀಕೆ

Update: 2025-10-30 22:39 IST

Photo Credit : PTI

ಪಾಟ್ನಾ,ಅ.30: ಇತ್ತೀಚೆಗೆ ನಡೆದ ಛತ್‌ಪೂಜೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರಿಗೆ ತೀರ್ಥಸ್ನಾನಕ್ಕಾಗಿ ಮಲಿನಗೊಂಡ ಯುಮುನಾ ನದಿಯ ಪಕ್ಕದಲ್ಲೇ ಪ್ರತ್ಯೇಕ ಕೊಳವೊಂದನ್ನು ನಿರ್ಮಿಸಿದ್ದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಟೀಕಿಸಿದ್ದು, ಇಲ್ಲಿ ‘ಎರಡು ಭಾರತಗಳಿವೆ’ ಎಂದು ವ್ಯಂಗ್ಯವಾಡಿದ್ದಾರೆ.

ಬಿಹಾರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿರುವ ರಾಹುಲ್‌ಅವರು ನಳಂದದಲ್ಲಿ ಇಂಡಿಯಾ ಮೈತ್ರಿಕೂಟದ ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ಛತ್ ಪೂಜಾ ಸಂದರ್ಭ, ಯಮುನಾ ನದಿಯಲ್ಲಿ ತೀರ್ಥಸ್ನಾನ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದರು. ಒಂದೆಡೆ ಭಾರತ ಹಾಗೂ ಬಿಹಾರದಲ್ಲಿ ಮಲಿನಗೊಂಡಿರುವ ಯಮುನಾ ನದಿ ಇದ್ದರೆ, ಇನ್ನೊಂದೆಡೆ ಪ್ರಧಾನಿ ಮೋದಿಯವರು ಅವರಿಗಾಗಿ ಶುದ್ಧ ನೀರಿನ ಸಣ್ಣಕೊಳವೊಂದನ್ನು ನಿರ್ಮಿಸಿದ್ದರು ಎಂದರು.

ಈ ಕೊಳಕ್ಕೆ ಶುದ್ಧ ನೀರನ್ನು ನಳ್ಳಿಗಳ ಮೂಲಕ ತರಿಸಲಾಗಿತ್ತು. ಇದರಿಂದಾಗಿ ಪ್ರಧಾನಿಯವರಿಗೆ ಸ್ನಾನ ಮಾಡಲು ಸಾಧ್ಯವಾಯಿತು. ಹೀಗೆ ಇನ್ನೊಂದು ಭಾರತವು ಮೋದಿಯಂತಹವರು ಹಾಗೂ ಬಿಲಿಯಾಧಿಪತಿಗಳು, ಅದಾನಿ ಹಾಗೂ ಅಂಬಾನಿಗೆ ಸೇರಿದೆ ಎಂದು ರಾಹುಲ್ ಹೇಳಿದರು.

ಬಿಹಾರದಲ್ಲಿ ಕೈಗಾರಿಕೆಗಳನ್ನು ನಿರ್ಮಿಸಲು ನಿವೇಶನಗಳು ಲಭ್ಯವಿಲ್ಲವೆಂಬ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಹುಲ್ ತೀವ್ರ ಟೀಕಾ ಪ್ರಹಾರ ನಡೆಸಿದರು. ಅದಾನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ರಾಜ್ಯ ಸರಕಾರವು ಜಮೀನುಗಳನ್ನು ನೀಡುತ್ತಿದೆ ಎಂದು ಆಪಾದಿಸಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಮತಗಳನ್ನು ಕದಿಯುವ ಮೂಲಕ ಜಯಗಳಿಸಿದೆ. ಭೀಮರಾವ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ನಾಶಪಡಿಸಲು ಎನ್‌ಡಿಎ ಹಾಗೂ ಪ್ರಧಾನಿ ಮೋದಿ ಕಟಿಬದ್ಧರಾಗಿದ್ದಾರೆ ಎಂದು ರಾಹುಲ್ ಗಾಂಧಿ ಆಪಾದಿಸಿದರು.

ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟವು ಜಯಗಳಿಸಿದಲ್ಲಿ, ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸುವ ಸರಕಾರ ರಚನೆಯಾಗಲಿದೆ ಹಾಗೂ ಜಗತ್ತಿನ ಅತ್ಯಂತ ಶ್ರೇಷ್ಠ ವಿಶ್ವವಿದ್ಯಾನಿಲಯ ನಳಂದದಲ್ಲಿ ಸ್ಥಾಪನೆಯಾಗಲಿದೆ ಎಂದು ರಾಹುಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News