×
Ad

ಉತ್ತರ ಪ್ರದೇಶ | ಇಬ್ಬರು ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗುಂಪು

Update: 2025-07-27 20:36 IST

PC : X \ @neha_laldas

ಸಂಭಲ್, ಜು. 27: ಕಳವು ಆರೋಪದಲ್ಲಿ ಇಬ್ಬರು ದಲಿತ ಯುವಕರನ್ನು ಉದ್ರಿಕ್ತ ಗುಂಪೊಂದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಸಂಭಲ್‌ನಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಘಟನೆ ಜುಲೈ 22ರಂದು ನಡೆದಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ತನ್ನ ಪುತ್ರ ಸುಂದರ್ (20) ಹಾಗೂ ಆತನ ಸಂಬಂಧಿ ಶಾನಿ (22) ಸಂಭಲ್‌ನಲ್ಲಿ ನಡೆಯುವ ಕನ್ವಾರ್ ಮೆರವಣಿಗೆ ನೋಡಲು ತೆರಳಿದ್ದರು. ದಾರಿಯಲ್ಲಿ ಬರ್ಹಾಹಿ ವಾಲಿ ಬಸ್ತಿಯ ಕೆಲವು ನಿವಾಸಿಗಳು ಅವರನ್ನು ಸೆರೆ ಹಿಡಿದರು, ಕಳವುಗೈದಿದ್ದಾರೆ ಎಂದು ಆರೋಪಿಸಿದರು ಹಾಗೂ ಕಂಬಕ್ಕೆ ಕಟ್ಟಿ ಥಳಿಸಿದರು ಎಂದು ನಹಾರ್ ಧೇರ್ ಗ್ರಾಮದ ನಿವಾಸಿ ಸುನಿತಾ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ನಖಾಸಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಂಜಿತ್ ಕುಮಾರ್ ತಿಳಿಸಿದ್ದಾರೆ.

ಇಬ್ಬರೂ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದೂರಿನ ಆಧಾರದಲ್ಲಿ ನಂದಕಿಶೋರ್, ಭರತ್, ದಬ್ಬು, ಭುರಾ, ಶ್ರೀರಾಮ್ ಅವರ ಪುತ್ರ ಹಾಗೂ 10ರಿಂದ 12 ಮಂದಿ ಅಪರಿಚಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News