×
Ad

ಹೈದರಾಬಾದ್ ಅನ್ನು ಭಾಗ್ಯನಗರ್ ಎಂದು ಮರುನಾಮಕರಣಗೊಳಿಸುವ ಬಿಜೆಪಿ ಭರವಸೆ ವಿರುದ್ಧ ಉವೈಸಿ ಕಿಡಿ

Update: 2023-11-27 18:29 IST

ಅಸಾದುದ್ದೀನ್ ಉವೈಸಿ | Photo: PTI 

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಹೈದರಾಬಾದ್ ಅನ್ನು ಭಾಗ್ಯನಗರ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಬಿಜೆಪಿ ಮುಖಂಡರು ನೀಡುತ್ತಿರುವ ಆಶ್ವಾಸನೆ ಕುರಿತು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

“ಈ ಭಾಗ್ಯನಗರ್ ಎಲ್ಲಿಂದ ಬಂತು ಎಂದು ಅವರನ್ನು ಮೊದಲು ಕೇಳಿ. ಹಾಗೆಂದು ಎಲ್ಲಿ ಬರೆದಿದೆ ಎಂದು ಕೇಳಿ. ನಿಮಗೆ ಹೈದರಾಬಾದ್ ಎಂದರೆ ದ್ವೇಷ, ಆದ್ದರಿಂದ ಮರುನಾಮಕರಣ ಮಾಡುವುದು ಆ ದ್ವೇಷದ ದ್ಯೋತಕವಾಗಿದೆ. ಹೈದರಾಬಾದ್ ನಮ್ಮ ಅಸ್ಮಿತೆಯಾಗಿದೆ. ಅದನ್ನು ಹೇಗೆ ಮರುನಾಮಕರಣ ಮಾಡುತ್ತೀರಿ? ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ”ಎಂದು ಉವೈಸಿ ಹೇಳಿದ್ದಾರೆ.

“ಹೈದರಾಬಾದ್ ಅನ್ನು ಮರುನಾಮಕರಣ ಮಾಡಲಾಗುವುದು ಎಂಬ ಭರವಸೆಯು ಬಿಜೆಪಿಯ ವಿಭಜನಾತ್ಮಕ ರಾಜಕಾರಣವನ್ನು ಸೂಚಿಸುತ್ತದೆ. ಹೈದರಾಬಾದ್ ಮತ್ತು ತೆಲಂಗಾಣದ ಜನರು ಅವರಿಗೆ ಸೂಕ್ತ ಉತ್ತರ ನೀಡುವರೆಂದು ಆಶಿಸುತ್ತೇನೆ” ಎಂದು ಉವೈಸಿ ಹೇಳಿದರು.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವ ಸರ್ಮ ಕೂಡ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಹೇಳಿದ್ದರು.

ಕಳೆದ ವರ್ಷ ಹೈದರಾಬಾದ್ನಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಹೈದರಾಬಾದ್ ಅನ್ನು ಭಾಗ್ಯನಗರ್ ಎಂದು ಉಲ್ಲೇಖಿಸಿದ್ದರು. ಭಾರತವನ್ನು ಒಗ್ಗೂಡಿಸುವ ಅಭಿಯಾನವನ್ನು ಸರ್ದಾರ್ ಪಟೇಲ್ ಅವರು ಭಾಗ್ಯನಗರ್ನಲ್ಲಿ ಆರಂಭಿಸಿದ್ದರು ಎಂದು ಮೋದಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News