×
Ad

"ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" : ಚುನಾವಣಾ ಆಯುಕ್ತರಿಗೆ ರಾಹುಲ್ ಗಾಂಧಿ ಎಚ್ಚರಿಕೆ

Update: 2025-08-19 10:41 IST

ಪಾಟ್ನಾ : ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟ ಸರಕಾರ ರಚಿಸಿದರೆ ಮತ ಕಳ್ಳತನಕ್ಕಾಗಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಬಿಹಾರದ ಗಯಾದಲ್ಲಿ ನಡೆದ ಮತದಾರರ ಅಧಿಕಾರ ಯಾತ್ರೆಯ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗದ "ಮತ ಕಳ್ಳತನ" ಬಯಲಾದ ನಂತರವೂ ಅಫಿಡವಿಟ್ ಸಲ್ಲಿಸಲು ಚುನಾವಣಾ ಆಯೋಗ ಕೇಳುತ್ತಿದೆ. ಮತ ಕಳ್ಳತನ ಭಾರತ ಮಾತೆಯ ಆತ್ಮದ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.

ಇಡೀ ದೇಶವು ನಿಮ್ಮನ್ನು ಅಫಿಡವಿಟ್ ನೀಡುವಂತೆ ಕೇಳುತ್ತದೆ ಎಂದು ನಾನು ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ. ನಮಗೆ ಸ್ವಲ್ಪ ಸಮಯ ನೀಡಿ, ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದಲ್ಲಿನ ನಿಮ್ಮ ಕಳ್ಳತನವನ್ನು ಹಿಡಿದು ಜನರ ಮುಂದಿಡುತ್ತೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡುವಂತೆ, ಚುನಾವಣಾ ಆಯೋಗ ಬಿಹಾರಕ್ಕೆ ಎಸ್ಐಆರ್ ಎಂಬ ವಿಶೇಷ ಪ್ಯಾಕೇಜ್ ಅನ್ನು ತಂದಿದೆ. ರಾಜ್ಯದಲ್ಲಿ "ಮತ ಕಳ್ಳತನ" ಮಾಡಲು ಸಾಧ್ಯವಿಲ್ಲ ಎಂದು ಬಿಹಾರದ ಜನರು ಚುನಾವಣಾ ಆಯುಕ್ತರು ಮತ್ತು ಬಿಜೆಪಿ ನಾಯಕರಿಗೆ ಒಂದೇ ಧ್ವನಿಯಲ್ಲಿ ಹೇಳಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ವಿರುದ್ಧವೂ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

"ನಾನು ಏನು ಹೇಳಿದರೂ ಅದನ್ನು ಮಾಡುತ್ತೇನೆ. ನಾನು ವೇದಿಕೆಯಿಂದ ಸುಳ್ಳು ಹೇಳುವುದಿಲ್ಲ ಎಂದು ನಿಮಗೆ ಗೊತ್ತಿದೆ. ಈ ಮೂವರು ಚುನಾವಣಾ ಆಯುಕ್ತರಿಗೆ ಈಗ ಮೋದಿ ಸರಕಾರ ಇದೆ ಎಂದು ಹೇಳಲು ಬಯಸುತ್ತೇನೆ. ತೇಜಸ್ವಿ ಯಾದವ್‌ ಅವರು ನೀವು (ಚುನಾವಣಾ ಆಯುಕ್ತರು) ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡಿದ್ದೀರಿ ಮತ್ತು ಅವರಿಗಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ. ಆದರೆ, ಒಂದು ವಿಷಯ ಅರ್ಥಮಾಡಿಕೊಳ್ಳಿ, ಬಿಹಾರ ಮತ್ತು ದಿಲ್ಲಿಯಲ್ಲಿ ಇಂಡಿಯಾ ಮೈತ್ರಿಕೂಟ ಸರಕಾರ ಅಧಿಕಾರಕ್ಕೆ ಬರುವ ದಿನ ಬರುತ್ತದೆ. ಆಗ ನಾವು ನಿಮ್ಮ ಮೂವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನೀವು ಇಡೀ ದೇಶದಿಂದ ಮತ ಕಳ್ಳತನ ಮಾಡಿದ್ದೀರಿ" ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News