×
Ad

ಖಾಲಿ ಹುದ್ದೆಗಳಿಗೆ ಅರ್ಹರು ನೇಮಕವಾಗಲಿ

Update: 2026-02-24 08:10 IST

ಸಾಂದರ್ಭಿಕ ಚಿತ್ರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚಿನ ವರ್ಷಗಳಲ್ಲಿ ನವ ಉದಾರೀಕರಣದ ಆರ್ಥಿಕ ನೀತಿಯ ದುಷ್ಪರಿಣಾಮದಿಂದಾಗಿ ಶಿಕ್ಷಣ ಇಲಾಖೆ ಕೂಡ ಹಳಿ ತಪ್ಪುತ್ತಿದೆ.ಖಾಲಿ ಹುದ್ದೆಗಳಿಗೆ, ಅದರಲ್ಲೂ ಉಪನ್ಯಾಸಕರ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಈಗ ಸಾಮಾನ್ಯವಾಗಿದೆ. ತುರಿಕೆ ಬಿಟ್ಟಾಗ ಕೆರೆದುಕೊಳ್ಳುವಂತೆ ಇಂಥ ತಾತ್ಕಾಲಿಕ ನೇಮಕಾತಿಗಳಿಂದ ಅರ್ಹ ಅಭ್ಯರ್ಥಿಗಳು ಬರಬೇಕಾದ ಜಾಗಗಳಲ್ಲಿ ಅನರ್ಹರು ಬರುತ್ತಿದ್ದಾರೆ. ಇಂಥವರು ನಕಲಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಳ್ಳುತ್ತಾರೆ ಎಂಬುದು ಬರೀ ದೂರಲ್ಲ. ಅದರ ಹಗರಣ ಇತ್ತೀಚೆಗೆ ಬಯಲಿಗೆ ಬಂದಿದೆ. ರಾಜ್ಯ ಸರಕಾರದ ಪದವಿ ಕಾಲೇಜುಗಳಲ್ಲಿ ಸೇರಿಕೊಂಡಿದ್ದ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇತ್ತೀಚೆಗೆ ತಮ್ಮ ಹುದ್ದೆಗಳಿಗೆ ತಾವಾಗಿ ರಾಜೀನಾಮೆ ನೀಡಿದ್ದಾರೆ. ಇದು ಸಹಜವಾಗಿ ನೀಡಿದ ರಾಜೀನಾಮೆ ಅಲ್ಲ. ಇದರ ಹಿಂದೆ ಭಾರೀ ಹಗರಣವೊಂದು ನಡೆದಿರುವ ಸಂದೇಹ ಉಂಟಾಗಿದೆ. ನೌಕರಿ ಸೇರುವುದಕ್ಕಾಗಿ ಕೆಲವರು ಸಲ್ಲಿಸಲಾಗಿದ್ದ ನಕಲಿ ಪ್ರಮಾಣಪತ್ರಗಳು ಅಸಲಿಯಾಗಿವೆಯೇ ಎಂಬ ಬಗ್ಗೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಪರಿಶೀಲನೆಯನ್ನು ನಡೆಸುತ್ತಿದೆ. ಈ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಒಂದೊಂದಾಗಿ ರಾಜೀನಾಮೆಗಳು ಬರುತ್ತಿವೆ.

ವಾಸ್ತವವಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಹಾಗೂ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಯಲ್ಲಿ ಪಾಸಾಗಿದ್ದರೆ ಮಾತ್ರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಬಹುದು ಎಂಬ ನಿಯಮ ಇದೆ. ಪಿಎಚ್.ಡಿ. ಪ್ರಮಾಣಪತ್ರ ಇದ್ದರೆ ರಾಷ್ಟ್ರೀಯ ರಾಜ್ಯ ಪ್ರಮಾಣಪತ್ರ ಗಳ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಇದನ್ನು ದುರುಪಯೋಗ ಮಾಡಿಕೊಂಡ ಕೆಲವರು ನಕಲಿ ಪ್ರಮಾಣಪತ್ರ ಸಲ್ಲಿಸಿ ನೌಕರಿಗೆ ಸೇರಿಕೊಂಡಿದ್ದಾರೆಂಬ ದೂರುಗಳು ಇವೆ. ಇದರಿಂದಾಗಿ ಸಹಜವಾಗಿ ಆತಂಕ ಉಂಟಾಗುತ್ತದೆ. ಸಮರ್ಪಕವಾಗಿ ಪರಿಶೀಲನೆ ನಡೆಸದೆ ಇಂಥ ಪ್ರಮಾಣಪತ್ರಗಳನ್ನು ನಂಬಿ ನೇಮಕಾತಿ ಪ್ರಕ್ರಿಯೆ ನಡೆದದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.

ನಕಲಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿರುವುದು ಮಾತ್ರವಲ್ಲ, ತಮಗಿಂಥ ಅರ್ಹರಾಗಿದ್ದ ಇತರ ಅಭ್ಯರ್ಥಿಗಳಿಗೆ ಸಿಗಬಹುದಾಗಿದ್ದ ಅವಕಾಶ ವನ್ನು ಕಿತ್ತುಕೊಂಡಿದ್ದು ಇವರ ಅಕ್ಷಮ್ಯ ಅಪರಾಧವಾಗಿದೆ. ಇದು ಬಯಲಿಗೆ ಬರುವ ಸುಳಿವು ಸಿಗುತ್ತಿದ್ದಂತೆ, ಇಂಥವರು ತರಾತುರಿಯಲ್ಲಿ ರಾಜೀನಾಮೆ ನೀಡುವ ದಾರಿ ಹಿಡಿದಿದ್ದಾರೆ. ಇಂಥವರು ರಾಜೀನಾಮೆ ನೀಡಿದರೆಂಬ ಕಾರಣಕ್ಕಾಗಿ ಶಿಕ್ಷೆಯಿಂದ ಪಾರಾಗಲು ಅವಕಾಶ ಕೊಡಬಾರದು. ಪೊಲೀಸರ ಮೂಲಕ ತನಿಖೆ ನಡೆಸಿ ನಕಲಿ ಪ್ರಮಾಣ ಪತ್ರವನ್ನು ಹೇಗೆ ಪಡೆದರೆಂಬ ಬಗ್ಗೆ ಪತ್ತೆ ಹಚ್ಚುವುದು ಅಗತ್ಯವಾಗಿದೆ. ಇದರ ಹಿಂದೆ ಬಹುದೊಡ್ಡ ಜಾಲ ಇದ್ದಂತೆ ಕಾಣುತ್ತದೆ. ಕೆಲವು ವಿಶ್ವವಿದ್ಯಾನಿಲಯಗಳು, ಅವುಗಳಲ್ಲಿನ ಕೆಲವು ವಿಭಾಗಗಳ ಅಧಿಕಾರಿಗಳು ಇದರಲ್ಲಿ ಶಾಮೀಲಾಗದೆ ಇಂಥದೆಲ್ಲ ನಡೆಯುವುದಿಲ್ಲ. ಇದರ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯ ಸಂಗತಿ ಬಯಲಿಗೆ ಬರಬಹುದು.

ಈ ಬಗ್ಗೆ ಸಮಗ್ರವಾದ ತನಿಖೆ ನಡೆಸುವುದಾಗಿ ಶಿಕ್ಷಣ ಆಯುಕ್ತರು ಹೇಳಿದ್ದಾರೆ. ಈ ವಿಳಂಬವನ್ನು ಗಮನಿಸಿದರೆ ಊರು ಕೊಳ್ಳೆ ಹೊಡೆದು ಕೊಂಡು ಹೋದ ಮೇಲೆ ಮುಖ್ಯ ದ್ವಾರವನ್ನು ಭದ್ರ ಪಡಿಸುವ ಕೆಲಸ ನಡೆದಂತೆ ಕಾಣುತ್ತದೆ. ಇದು ಕೇವಲ ತಮ್ಮ ಸಮಾಧಾನಕ್ಕಾಗಿ ಮಾಡಿದ ಕೆಲಸ ಎಂಬ ಭಾವನೆ ಸಹಜವಾಗಿ ಬರುತ್ತದೆ. ನಕಲಿ ದಾಖಲೆಗಳನ್ನು ನೀಡಿದ ಕಾರಣಕ್ಕಾಗಿ 40 ಮಂದಿ ಸಹಾಯಕ ಪ್ರಾಧ್ಯಾಪಕರನ್ನು 2017ರಲ್ಲಿ ವಜಾ ಮಾಡಲಾಗಿತ್ತು.ಆದರೂ ಕೂಡ ನಕಲಿ ದಾಖಲೆಗಳನ್ನು ಸಲ್ಲಿಸುವುದು ನಿಂತಿಲ್ಲ. ಇಂಥವನ್ನು ತಡೆಯಬೇಕಾದರೆ ವಿಶ್ವವಿದ್ಯಾನಿಲಯಗಳು ಪಿಎಚ್.ಡಿ. ಹಾಗೂ ಎಂ.ಫಿಲ್. ಪಡೆದವರ ಮಾಹಿತಿಯನ್ನು ತಮ್ಮ ವೆಬ್‌ಸೈಟ್‌ಗಳ ಮೂಲಕ ಬಹಿರಂಗ ಪಡಿಸುವ ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕು. ಅಂಕಪಟ್ಟಿ, ಪದವಿ ಪ್ರಮಾಣಪತ್ರ ಸೇರಿದಂತೆ ಎಲ್ಲಾ ಪ್ರಮಾಣಪತ್ರಗಳನ್ನು ಡಿಜಿಟಲೈಸ್ ಮಾಡಬೇಕು. ಇಂಥ ಕ್ರಮಗಳಿಂದ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬಹುದು. ಅಷ್ಟೇ ಅಲ್ಲ ಪ್ರಮಾಣಪತ್ರವನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಅದನ್ನು ಪಡೆಯುವುದಕ್ಕೆ ಅನುಕೂಲವಾಗುತ್ತದೆ.

ಸೇವೆಯಲ್ಲಿ ಇರುವ ಉಪನ್ಯಾಸಕರು ನಿವೃತ್ತರಾಗುತ್ತಿದ್ದಂತೆ ಅವರ ಹುದ್ದೆಗಳು ಖಾಲಿಯಾಗುತ್ತ ಬರುತ್ತವೆ. ಅಂಥ ಸಂದರ್ಭಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳುತ್ತ ಬರಲಾಗಿದೆ. ಇದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ ಅಂದರೆ ತಪ್ಪಿಲ್ಲ. ಇಂಥ ತಾತ್ಕಾಲಿಕ ನೇಮಕ ಮಾಡಿಕೊಳ್ಳುವ ಪ್ರವೃತ್ತಿ ಸರಿಯಲ್ಲ. ಬೋಧಕ ಹುದ್ದೆಗಳು ಖಾಲಿಯಾದಂತೆಲ್ಲ ಅವುಗಳನ್ನು ಸಕಾಲಕ್ಕೆ ಭರ್ತಿ ಮಾಡಿಕೊಳ್ಳುವ ಕೆಲಸವನ್ನು ಸರಕಾರ ವಿಳಂಬವಿಲ್ಲದೆ ಮಾಡಬೇಕು. ನಕಲಿ ಪ್ರಮಾಣಪತ್ರಗಳನ್ನು, ನಕಲಿ ಪಿಎಚ್.ಡಿ.ಗಳನ್ನು ಸೃಷ್ಟಿಸಿ ಕೆಲಸಕ್ಕೆ ಸೇರುವವರು ವಿದ್ಯಾರ್ಥಿಗಳಿಗೆ ಎಂಥ ಪಾಠವನ್ನು ಮಾಡುತ್ತಾರೆ ಎಂಬುದನ್ನು ವಿವರಿಸಬೇಕಾಗಿಲ್ಲ. ಇಂತಹ ನಕಲಿಗಳು ಸಿಕ್ಕಿ ಬಿದ್ದಾಗ ಮಾನವೀಯ ಅನುಕಂಪದಿಂದ ಕೆಲಸವನ್ನು ಉಳಿಸಿಕೊಳ್ಳಲು ಅಂಗಲಾಚುತ್ತಾರೆ.ಆದರೆ ಅಂಥದ್ದಕ್ಕೆ ಸರಕಾರ ಮಣಿಯ ಬಾರದು. ಇದರಿಂದಾಗಿ ಅರ್ಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ.

ನಕಲಿ ಪ್ರಮಾಣ ಪತ್ರಗಳು ಮಾತ್ರವಲ್ಲ ನಕಲಿ ಪಿಎಚ್.ಡಿ.ಗಳು, ಎಂ.ಫಿಲ್.ಗಳ ಹಾವಳಿಯೂ ವ್ಯಾಪಕವಾಗಿದೆ. ಇಂಥವರು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೆಲಸಕ್ಕೆ ಸೇರುವುದು ಮಾತ್ರವಲ್ಲ, ಅದನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಾರೆ. ಇವರು ಯಾವುದೇ ಕಾರಣಕ್ಕೂ ಕ್ಷಮಾರ್ಹರಲ್ಲ.

ಶಿಕ್ಷಣ ಕ್ಷೇತ್ರವನ್ನು ಇಂಥ ಅಪಾಯಕಾರಿ ಶಕ್ತಿಗಳ ಹಾವಳಿಯಿಂದ ಮುಕ್ತ ಗೊಳಿಸಬೇಕಾಗಿದೆ. ಇವುಗಳ ಜೊತೆಗೆ ಬಹುತೇಕ ವಿಶ್ವವಿದ್ಯಾನಿಲಯಗಳು ಕಂಡ ಕಂಡವರಿಗೆಲ್ಲ ನೀಡುವ ಗೌರವ ಡಾಕ್ಟರೇಟ್‌ಗಳ ಹಾವಳಿ ಕೂಡ ವಿಪರೀತವಾಗಿದೆ. ಇದಷ್ಟೇ ಅಲ್ಲ ವಿಶ್ವವಿದ್ಯಾನಿಲಯವೊಂದು ನೀಡುವ ನಾಡೋಜ ಪ್ರಶಸ್ತಿ ಕೂಡ ಅಪಾತ್ರರಿಗೆ ಸಲ್ಲುತ್ತಿದೆ. ಸಕ್ಕರೆ ಕಾರ್ಖಾನೆಯ ಮಾಲಕರು, ರಿಯಲ್ ಎಸ್ಟೇಟ್ ಮಂದಿ, ಅಧಿಕಾರದಲ್ಲಿರುವ ರಾಜಕಾರಣಿಗಳು, ಮಠಾಧೀಶರು ಗೌರವ ಡಾಕ್ಟರೇಟ್ ಪದವಿ ಪಡೆದು ಸಂಭ್ರಮಿಸುತ್ತಿದ್ದಾರೆ.ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಬರೆದುಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಇಂಥದ್ದಕ್ಕೆ ಸರಕಾರ ಅವಕಾಶ ನೀಡಬಾರದು. ಕರ್ನಾಟಕದ ಶಿಕ್ಷಣ ಇಲಾಖೆಗೆ ಒಂದು ಘನತೆಯಿದೆ ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News