ಖಾಸಗಿ ವಲಯದಲ್ಲಿ ಮೀಸಲಾತಿ: ಹೋರಾಟಕ್ಕೆ ಇನ್ನೇಕೆ ತಡ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯು ಧಾರವಾಡದಲ್ಲಿ ಬೃಹತ್ ಧರಣಿಯನ್ನು ಮಂಗಳವಾರ ಹಮ್ಮಿಕೊಂಡಿತ್ತು. ಪ್ರತಿಭಟನೆಯ ಬಿಸಿ ಸರಕಾರಕ್ಕೆ ಮುಟ್ಟಿದ್ದು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ಈ ಪ್ರತಿಭಟನೆಗೆ ಬಿಜೆಪಿ, ಜೆಡಿಎಸ್ ಕೂಡ ಕೈ ಜೋಡಿಸಿದ್ದು ಖಾಲಿ ಹುದ್ದೆಗಳನ್ನು ತುಂಬುವಲ್ಲಿ ಸರಕಾರದ ವೈಫಲ್ಯವನ್ನು ಟೀಕಿಸಿವೆ. ಸದ್ಯಕ್ಕೆ ರಾಜ್ಯದಲ್ಲಿ ೨.೮೪ ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇವೆ ಎಂದು ಸಂಘಟನೆಗಳು ಆರೋಪಿಸಿವೆ. ಈಗಾಗಲೇ ೫೦,೦೦೦ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದಿಸಿದ್ದು, ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿವೆ. ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಸರಕಾರಿ ಹುದ್ದೆಗಳು ಕೇವಲ ಕಳೆದ ಮೂರು ವರ್ಷಗಳಿಂದ ಖಾಲಿ ಬಿದ್ದಿರುವುದಲ್ಲ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಈ ಖಾಲಿ ಹುದ್ದೆಗಳನ್ನು ತುಂಬಲು ಸರಕಾರ ವಿಫಲವಾಗಿತ್ತು. ‘‘ಯುವ ಜನರು ಎರಡೂವರೆ ವರ್ಷಗಳಿಂದ ಕಣ್ಮೀರು ಹಾಕುತ್ತಿದ್ದಾರೆ’’ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದ್ದಾರೆ. ಈ ಯುವಜನರು ಬಿಜೆಪಿ ಆಡಳಿತ ಕಾಲದಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ನೋಡಿ ಸಂತೋಷ, ಸಂಭ್ರಮದಲ್ಲಿದ್ದರೆ? ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಕ್ಕಿಲ್ಲ. ಯಾಕೆಂದರೆ, ಈ ಯುವಜನರು ಬಿಜೆಪಿಯ ಕಾಲದಲ್ಲೂ ಉದ್ಯೋಗಗಳಿಗಾಗಿ ಹಲವು ಬಾರಿ ಬೀದಿಗಿಳಿದಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಕಡೆಗೆ ಬೆರಳು ತೋರಿಸಿ ಹೊಣೆಗಾರಿಕೆಯಿಂದ ಸಿದ್ದರಾಮಯ್ಯ ಪಾರಾಗುವುದಕ್ಕೆ ಸಾಧ್ಯವಿಲ್ಲ. ‘‘ನಾವು ಅಧಿಕಾರಕ್ಕೆ ಬಂದಾಗ ೨.೬೪ ಲಕ್ಷಕ್ಕೂ ಹೆಚ್ಚು ಸರಕಾರಿ ಹುದ್ದೆಗಳು ಖಾಲಿ ಇದ್ದವು. ಹಿಂದಿನ ಬಿಜೆಪಿ ಸರಕಾರ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಯೋಜನೆ ರೂಪಿಸದ ಕಾರಣ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಉಳಿದಿವೆ’’ ಎಂದು ಅವರು ಸಮರ್ಥನೆ ನೀಡಲು ಪ್ರಯತ್ನಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರವು ಸರಕಾರಿ ಹುದ್ದೆಗಳನ್ನು ತುಂಬಲು ತೋರಿಸಿದ ನಿರ್ಲಕ್ಷ್ಯದ ಕಾರಣದಿಂದ ಆ ಪಕ್ಷವನ್ನು ಯುವ ಜನತೆ ತಿರಸ್ಕರಿಸಿದ್ದಾರೆ. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದು ಮೂರು ವರ್ಷ ಕಳೆದಿದೆ. ಹೀಗಿರುವಾಗ ಆ ಖಾಲಿ ಉಳಿದಿರುವ ಹುದ್ದೆಗಳಲ್ಲಿ ಕನಿಷ್ಠ ಅರ್ಧದಷ್ಟು ಹುದ್ದೆಗಳನ್ನು ತುಂಬುವುದಕ್ಕೆ ಕ್ರಮ ತೆಗೆದುಕೊಳ್ಳಬಹುದಿತ್ತು. ಬಿಜೆಪಿಯ ಆಡಳಿತ ಯಾವ ಕಾರಣಕ್ಕೂ ಕಾಂಗ್ರೆಸ್‌ಗೆ ಮಾದರಿಯಾಗಬಾರದು.
ಖಾಲಿ ಬಿದ್ದಿರುವ ಸರಕಾರಿ ಹುದ್ದೆಗಳು ಕೇವಲ ಯುವಕರ ನಿರುದ್ಯೋಗ ನಿವಾರಣೆಯ ಭಾಗವಾಗಿಯಷ್ಟೇ ಮುಖ್ಯ ಅಲ್ಲ. ಶಿಕ್ಷಣ ಇಲಾಖೆಯಲ್ಲಿ ಸುಮಾರು ೮೦,೦೦೦ ಹುದ್ದೆಗಳು ಖಾಲಿ ಬಿದ್ದಿವೆ. ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯಲ್ಲಿ ೩೭,೫೭೨ ಹುದ್ದೆಗಳು, ಒಳಾಡಳಿತದಲ್ಲಿ ೨೮,೧೮೮, ಉನ್ನತ ಶಿಕ್ಷಣದಲ್ಲಿ ೧೩, ೫೯೯, ಹಿಂದುಳಿದ ವರ್ಗಗಗಳ ಇಲಾಖೆಯಲ್ಲಿ ೧೧,೦೨೦, ಕಂದಾಯ ಇಲಾಖೆಯಲ್ಲಿ ೧೦,೮೬೭, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ೧೦,೫೦೪ ಹೀಗೆ ಒಟ್ಟು ೨,೮೪, ೮೮೧ ಹುದ್ದೆಗಳು ಖಾಲಿ ಬಿದ್ದಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸರಕಾರವೂ ಈ ಆರೋಪಗಳನ್ನು ನಿರಾಕರಿಸಿಲ್ಲ. ಇಷ್ಟು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಬಿದ್ದರೆ ಅದು ಆಡಳಿತದ ಮೇಲೆ ಪರಿಣಾಮ ಬೀರುವುದಿಲ್ಲವೆ? ಇಂದು ವಿವಿಧ ಇಲಾಖೆಗಳು ವಿಧಿಸಿದ ಗುರಿಯನ್ನು ತಲುಪಲು ಸಾಧ್ಯವಾಗದೇ ಇರುವುದಕ್ಕೆ, ಅರ್ಹ ಸಿಬ್ಬಂದಿ ಕೊರತೆಯೂ ಮುಖ್ಯ ಕಾರಣವಾಗಿದೆ. ಇಂದು ರಾಜ್ಯದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಿವೆ. ೨೦೧೮ರಲ್ಲಿ ೩,೪೫೦ರಷ್ಟಿದ್ದ ಏಕೋಪಾಧ್ಯಾಯ ಶಾಲೆಗಳು ಇಂದು ೬,೬೭೫ಕ್ಕೆ ತಲುಪಿವೆ. ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಇಳಿಯಲು ಇದೂ ಮುಖ್ಯ ಕಾರಣ. ಇದರಿಂದಾಗಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಸರಕಾರಿ ಶಾಲೆಗಳು ಮುಚ್ಚುವುದಕ್ಕೆ ನೆಪವಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್‌ಗಳ ಕೊರತೆಯೂ ಎದ್ದು ಕಾಣುತ್ತಿದೆ. ಬೆಂಗಳೂರು ನಗರದ ೧೮ ಆಯಕಟ್ಟಿನ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳೇ ಇಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಪೊಲೀಸ್ ಸಿಬ್ಬಂದಿಯ ಕೊರತೆ, ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು ಸಹಜವೇ ಆಗಿದೆ. ಹೀಗಿರುವಾಗ, ಸರಕಾರಿ ಉದ್ಯೋಗವನ್ನು ನೀಡಿ ಯುವಜನರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಮಾತು ಪಕ್ಕಕ್ಕಿರಲಿ, ಮೊದಲು, ಸಿಬ್ಬಂದಿಯ ಕೊರತೆಯಿಂದ ನರಳುತ್ತಿರುವ ಇಲಾಖೆಗಳನ್ನು ಬಳಸಿಕೊಂಡು ಅತ್ಯುತ್ತಮ ಆಡಳಿತವನ್ನು ನೀಡುವುದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿ ಅವರು ಉತ್ತರಿಸಬೇಕಾಗಿದೆ.
ಇನ್ನುಳಿದಂತೆ ಇದು ನಿರುದ್ಯೋಗ ಸಮಸ್ಯೆಯ ಪರ್ವ ಕಾಲ. ಮೊದಲನೆಯದಾಗಿ, ಬರೇ ಸರಕಾರಿ ಹುದ್ದೆಗಳಿಂದಷ್ಟೇ ಯುವಕರ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಸಾರ್ವಜನಿಕ ಸಂಸ್ಥೆಗಳು ಒಂದೊಂದಾಗಿ ಖಾಸಗಿ ವಲಯದ ತೆಕ್ಕೆ ಸೇರುತ್ತಿರುವ ಈ ಸಂದರ್ಭದಲ್ಲಿ, ಈ ನಾಡಿನ ನೆಲ, ಜಲದ ಮೇಲೆ ಬೃಹತ್ ಕಾರ್ಪೊರೇಟ್ ಉದ್ದಿಮೆಗಳು ನಿಯಂತ್ರಣ ಸಾಧಿಸುತ್ತಿರುವ ಸಂದರ್ಭದಲ್ಲಿ ಯುವಕರು ಬರೇ ಸರಕಾರಿ ವಲಯದಲ್ಲಿ ಖಾಲಿ ಬಿದ್ದಿರುವ ಉದ್ಯೋಗಗಳ ನಿರೀಕ್ಷೆಯಲ್ಲಿ ಕಾದು ಕುಳಿತುಕೊಳ್ಳುವಂತಿಲ್ಲ. ಒಂದೆಡೆ ಸರಕಾರಿ ಹುದ್ದೆಗಳನ್ನು ತುಂಬುವಾಗ ಒಳ ಮೀಸಲಾತಿಯ ಸಮಸ್ಯೆಯನ್ನು ಗುರಾಣಿಯಾಗಿ ಬಳಸಲಾಗುತ್ತದೆ. ಒಳಮೀಸಲಾತಿಯು ಪರಿಣಾಮಕಾರಿಯಾಗಿ ಜಾರಿಗೊಳ್ಳದೆ ಈ ಖಾಲಿ ಹುದ್ದೆಗಳನ್ನು ತುಂಬಿದರೆ ಕೆಲವು ದುರ್ಬಲ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ, ಖಾಸಗಿ ವಲಯದಲ್ಲಿರುವ ಸಹಸ್ರಾರು ಹುದ್ದೆಗಳನ್ನು ಯಾವುದೇ ಮೀಸಲಾತಿಯಿಲ್ಲದೆ ತುಂಬಲಾಗುತ್ತಿದೆ. ಈ ವಲಯದಲ್ಲಿ ಮೀಸಲಾತಿ ಜಾರಿಯಾಗದೇ ಇದ್ದರೆ ದುರ್ಬಲ ಸಮುದಾಯದ ಯುವಕರಿಗೆ ನ್ಯಾಯ ಸಿಗುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗುವಂತೆ ಹೋರಾಟ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವಕರ ನಿರುದ್ಯೋಗದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವುದರ ಬಗ್ಗೆ ಯಾಕೆ ಮೌನವಾಗಿದ್ದಾರೆ? ಎನ್ನುವುದು ಗಂಭೀರ ಪ್ರಶ್ನೆಯೇ ಆಗಿದೆ. ಇದೇ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಬೇಡಿಕೆಯ ಬಗ್ಗೆಯೂ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ.
ಇದೀಗ ಖಾಸಗಿ ಸಂಸ್ಥೆಗಳು ಕೂಡ ‘ಎಐ’ ನೆಪವನ್ನು ಮುಂದಿಟ್ಟುಕೊಂಡು ಏಕಾಏಕಿ ನೌಕರರನ್ನು ಕಿತ್ತು ಹಾಕುತಿವೆ. ಭವಿಷ್ಯದಲ್ಲಿ ತಮ್ಮ ಉದ್ಯೋಗಗಳ ಮೇಲೆ ಎಐ ಬೀರಬಹುದಾದ ಪರಿಣಾಮಗಳ ಬಗ್ಗೆ ಯುವಕರು ಆತಂಕದಲ್ಲಿದ್ದಾರೆ. ಎಐ ಹೊಸ ಉದ್ಯೋಗಳನ್ನು ಸೃಷ್ಟಿಸುವುದಿಲ್ಲ. ಬದಲಿಗೆ ಇರುವ ಉದ್ಯೋಗಗಳನ್ನು ಹೇಗೆ ಕಿತ್ತು ಹಾಕಬಹುದು ಎನ್ನುವುದರಲ್ಲಿ ಅದರ ಯಶಸ್ಸು ಇದೆ. ಎಐ ಕೇವಲ ಬೃಹತ್ ಉದ್ದಿಮೆದಾರರ ಹಿತಾಸಕ್ತಿಗೆ ಪೂರಕವಾಗಿ ಬೆಳೆಯಲು ಸರಕಾರ ಅವಕಾಶ ನೀಡಬಾರದು. ಅದು ಎಲ್ಲರನ್ನೂ ಒಳಗೊಳ್ಳುವಂತಾಗಬೇಕು. ರಾಜ್ಯದ ಸಂಪನ್ಮೂಲಗಳನ್ನು ಎಐ ಕಂಪೆನಿಗಳಿಗೆ ಒತ್ತೆಯಿಡುವ ಸಂದರ್ಭದಲ್ಲಿ ಯುವಜನರ ಭವಿಷ್ಯದ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕು. ಅವರ ಭವಿಷ್ಯದ ಗೋರಿಗಳ ಮೇಲೆ ಎಐ ಕಂಪೆನಿಗಳು ವಿಜೃಂಭಿಸುವಂತಾಗಬಾರದು.