ಟ್ರಂಪ್ ಸರ್ವಾಧಿಕಾರಕ್ಕೆ ಸುಪ್ರೀಂಕೋರ್ಟ್ ಬರೆ
Photo Credit : AP , PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತವು ಸೇರಿದಂತೆ ವಿವಿಧ ದೇಶಗಳಿಗೆ ತನ್ನ ಆಡಳಿತವು ವಿಧಿಸಿರುವ ಸುಂಕಗಳು ಕಾನೂನು ಬಾಹಿರವೆಂದು ಅಮೆರಿಕ ಸುಪ್ರೀಂಕೋರ್ಟ್ ಘೋಷಿಸಿದೆ. ಟ್ರಂಪ್ ಇತ್ತೀಚೆಗೆ ವಿಧಿಸಿದ್ದ ಈ ಸುಂಕವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಶೀತಲ ಸಂಘರ್ಷಕ್ಕೆ ಕಾರಣವಾಗಿತ್ತು. ಯಾವ ದೇಶಗಳು ಯಾವ ದೇಶಗಳ ಜೊತೆಗೆ ವ್ಯಾಪಾರ ಮಾಡಬೇಕು, ಮಾಡಬಾರದು ಎನ್ನುವುದು ತನ್ನ ಮೂಗಿನ ನೇರಕ್ಕಿರಬೇಕು ಎನ್ನುವ ಅಮೆರಿಕದ ಏಕಮುಖ ಸರ್ವಾಧಿಕಾರಿ ಮನಸ್ಥಿತಿಯು ಈ ಸುಂಕ ಹೇರಿಕೆಯ ಹಿಂದೆ ಕೆಲಸ ಮಾಡಿತ್ತು. ಅಮೆರಿಕವನ್ನು ಆವರೆಗೆ ನೆಚ್ಚಿ ಕೊಂಡಿದ್ದ ಅಭಿವೃದ್ಧಿಶೀಲ ದೇಶಗಳೂ ಮೊದಲ ಬಾರಿಗೆ ಅಮೆರಿಕವನ್ನು ಹೊರಗಿಟ್ಟು ತನ್ನ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಬಗೆ ಹೇಗೆ ಎನ್ನುವುದನ್ನು ಚಿಂತಿಸುವಂತೆ ಮಾಡಿತ್ತು. ಅಮೆರಿಕದ ಹೇರಿಕೆಯ ಮುಂದೆ ಭಾರತವು ಅಕ್ಷರಶಃ ಅಸಹಾಯಕವಾಗಿತ್ತು. ಅಮೆರಿಕದ ಬಹುತೇಕ ಶರತ್ತುಗಳಿಗೆ ತಲೆಬಾಗುವುದರೊಂದಿಗೆ ಸುಂಕ ಶೇ. 18ಕ್ಕೆ ಇಳಿಯಿತಾದರೂ, ಇಲ್ಲೂ ಭಾರತದ ಉತ್ಪನ್ನಗಳಿಗೆ ಭಾರೀ ಅನ್ಯಾಯವಾಗಿತ್ತು. ಇಷ್ಟಾದರೂ ಅಮೆರಿಕದ ವಿರುದ್ಧ ಭಾರತ ಸರಕಾರ ತುಟಿ ಬಿಚ್ಚುವ ಸ್ಥಿತಿಯಲ್ಲಿರಲಿಲ್ಲ. ಇಂತಹ ಸಂದರ್ಭದಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಲಯದಲ್ಲಿ ಸಣ್ಣದೊಂದು ನಿರಾಳತೆಯನ್ನು ಸೃಷ್ಟಿಸಿದೆ. ಸುಪ್ರೀಂಕೋರ್ಟ್‌ನ ತೀರ್ಪು ಹೊರ ಬಿದ್ದ ಬೆನ್ನಿಗೇ ಟ್ರಂಪ್ 1974ರ ವ್ಯಾಪಾರ ಒಪ್ಪಂದದ ಸೆಕ್ಷನ್ 122ರಡಿ ಶೇಕಡಾ 15ರಷ್ಟು ಸುಂಕಗಳನ್ನು ಘೋಷಿಸಿದ್ದಾರೆ.
ತೀರ್ಪು ಹೊರ ಬಿದ್ದ ಬೆನ್ನಿಗೇ ಟ್ರಂಪ್ ಅವರು ಸುಪ್ರೀಂಕೋರ್ಟ್‌ನ ಮೇಲೆಯೇ ಎಗರಿ ಬಿದ್ದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಅಮೆರಿಕದ ವಿರುದ್ಧವಿದೆ ಎಂದು ಅವರು ಟೀಕಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಎರಡು ರೀತಿಯಲ್ಲಿ ಅಮೆರಿಕದ ಹಿತಾಸಕ್ತಿಯನ್ನು ಕಾಪಾಡಿದೆ. ಅದು ಟ್ರಂಪ್‌ರ ಸರ್ವಾಧಿಕಾರದ ತಲೆಗೆ ಜೋರಾಗಿ ಮೊಟಕಿದೆ. ಅಮೆರಿಕ ಎಂದರೆ ಟ್ರಂಪ್ ಅಲ್ಲ ಎನ್ನುವುದನ್ನು ಅದು ಜಗತ್ತಿಗೆ ತಿಳಿಸುವ ಪ್ರಯತ್ನವನ್ನು ಮಾಡಿದೆ. ವ್ಯಾಪಾರ ಒಪ್ಪಂದವೆಂದರೆ ಎರಡು ದೇಶಗಳ ನಡುವಿನ ಕೊಡು-ಕೊಳ್ಳು ಸಂಬಂಧವಾಗಿದೆ. ದುರ್ಬಲ ದೇಶವನ್ನು ದೋಚುವುದಕ್ಕೆ ಅಮೆರಿಕಕ್ಕೆ ಇರುವ ಪರವಾನಿಗೆಯಲ್ಲ. ಟ್ರಂಪ್‌ನ ಸುಂಕ ನೀತಿಯು ಅಭಿವೃದ್ಧಿ ಶೀಲ ದೇಶಗಳನ್ನು ‘ಬ್ಲ್ಯಾಕ್‌ಮೇಲ್’ ಮಾಡುವ ದುರುದ್ದೇಶವನ್ನು ಹೊಂದಿತ್ತು. ಅಮೆರಿಕದ ವಿರುದ್ಧ ಜಗತ್ತಿನಾದ್ಯಂತ ಸೃಷ್ಟಿಯಾಗುತ್ತಿರುವ ಅಸಹನೆಯನ್ನು ಕೂಡ ಸುಪ್ರೀಂಕೋರ್ಟ್ ಗಮನಿಸಿದಂತಿದೆ. ಜಾಗತಿಕವಾಗಿ ಅಮೆರಿಕದ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಭಾಗವಾಗಿಯೂ ಅಲ್ಲಿನ ಸುಪ್ರೀಂಕೋರ್ಟ್‌ನ ತೀರ್ಪು ಮಹತ್ವದ್ದು. ಟ್ರಂಪ್ ವಿಧಿಸಿದ ಸುಂಕಗಳ ವಿರುದ್ಧ ಅಮೆರಿಕದೊಳಗೇ ಅಸಮಾಧಾನವಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದು ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್. ಅವರು ಅಲ್ಲಿನ ಸಣ್ಣ ಉದ್ದಿಮೆದಾರರ ಪರವಾಗಿ ಕೋರ್ಟ್‌ನಲ್ಲಿ ವಾದಿಸಿದರು. ವಾದ ವಿವಾದದ ಬಳಿಕ ಅಂತಿಮವಾಗಿ ನಿರ್ಧಾರವಾದದ್ದು ಏನು ಎಂದರೆ, ಅಮೆರಿಕದ ಅಧ್ಯಕ್ಷರಿಗಿಂತ ಅಲ್ಲಿನ ಸಂವಿಧಾನ ಶಕ್ತಿಶಾಲಿಯಾಗಿದೆ. ಆದುದರಿಂದಲೇ ಇಂದು ಭಾರತಕ್ಕೂ ಅಲ್ಪಪ್ರಮಾಣದ ನ್ಯಾಯ ಒದಗಿತು. ಪ್ರಧಾನಿ ನರೇಂದ್ರ ಮೋದಿಯವರ ಭಾಷೆಯಲ್ಲೇ ಟ್ರಂಪ್ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ. ‘‘ಅಮೆರಿಕದ ನ್ಯಾಯಾಲಯವು ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತಗೊಂಡಿದೆ’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಕೆಲವು ಸದಸ್ಯರಿಗೆ ನಮ್ಮ ದೇಶಕ್ಕೆ ಒಳಿತನ್ನು ಮಾಡುವ ಧೈರ್ಯವಿಲ್ಲದೆ ಇರುವುದು ಲಜ್ಜೆಗೇಡಿನ ಸಂಗತಿಯಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇಂದು ದೇಶವು ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್ ಅವರನ್ನು ಹೊಗಳುತ್ತಿದೆ. ಅಲ್ಲಿನ ಸುಪ್ರೀಂಕೋರ್ಟ್‌ನ ನ್ಯಾಯಪರತೆಯನ್ನು ಶ್ಲಾಘಿಸುತ್ತಿದೆ. ಒಂದು ವೇಳೆ ಭಾರತದ ಸುಪ್ರೀಂಕೋರ್ಟ್ ಇಂತಹದೊಂದು ತೀರ್ಪನ್ನು ನೆರೆಯ ದೇಶಕ್ಕೆ ಸಹಾಯವಾಗುವಂತೆ ಪ್ರಧಾನಿ ಮೋದಿಯ ನಿಲುವಿನ ವಿರುದ್ಧ ನೀಡಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿ ಕೊಳ್ಳಬೇಕಾಗಿದೆ. ಇತ್ತೀಚೆಗೆ ಅಮೆರಿಕ-ಭಾರತದ ನಡುವಿನ ಒಪ್ಪಂದದ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಟೀಕೆ ಮಾಡಿದಾಗ ಬಿಜೆಪಿಯು ಅದನ್ನು ದಮನಿಸಿತ್ತು. ಈ ಒಪ್ಪಂದದಿಂದ ಭಾರತದ ರೈತರಿಗೆ ಯಾವೆಲ್ಲ ರೀತಿಯಲ್ಲಿ ಅನ್ಯಾಯವಾಗುತ್ತಿದೆ ಎನ್ನುವುದನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸಂಸತ್‌ನಲ್ಲಿ ಎಳೆ ಎಳೆಯಾಗಿ ವಿವರಿಸಿದ್ದರು. ಆದರೆ ಭಾರತದ ಪರವಾಗಿ ಮಾತನಾಡಿದ ರಾಹುಲ್ ಗಾಂಧಿಯವರನ್ನು ಬಿಜೆಪಿಯು ‘ದೇಶ ವಿರೋಧಿ’ ಎಂಬಂತೆ ಟೀಕೆ ಮಾಡಿತ್ತು. ಅದಾನಿಯ ಅಕ್ರಮಗಳನ್ನು ಮಾಧ್ಯಮಗಳು ಬಯಲಿಗೆಳೆದಾಗಲೂ ‘ವಿದೇಶಿ ಹಿತಾಸಕ್ತಿಗಳ ಕೈವಾಡ’ ಎಂದು ಸರಕಾರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡುವುದೆಂದರೆ ದೇಶವನ್ನು ಪ್ರಶ್ನೆ ಮಾಡಿದಂತೆ ಎಂದು ಬಿಜೆಪಿ ನಾಯಕರು ವಾದಿಸುತ್ತಾರೆ. ಇದೀಗ ಅಮೆರಿಕದ ಉದ್ಯಮಿಗಳಿಗೆ ಲಾಭವಾಗುವಂತೆ ಟ್ರಂಪ್ ಹೇರಿದ ಸುಂಕಾಸ್ತ್ರದ ವಿರುದ್ಧ ಅಲ್ಲಿನ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಭಾರತೀಯ ಮೂಲದ ವಕೀಲನ ವಾದಗಳನ್ನು ಅಲ್ಲಿನ ನ್ಯಾಯಾಲಯ ಯಾವುದೇ ಪೂರ್ವಾಗ್ರಹವಿಲ್ಲದೆ ಮನ್ನಿಸಿದೆ. ಟ್ರಂಪ್‌ಗಿಂತ ಸಂವಿಧಾನ ಮುಖ್ಯ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಇದು ಅಲ್ಲಿನ ಸಂವಿಧಾನದ ಹೆಗ್ಗಳಿಕೆಯಾಗಿದೆ. ಒಂದು ವೇಳೆ ಭಾರತದ ಪ್ರಧಾನಿಯ ನೀತಿಯ ವಿರುದ್ಧ ಇಲ್ಲಿ ವಿದೇಶಿ ಮೂಲದ ವಕೀಲನೊಬ್ಬ ವಾದಿಸಲು ಮುಂದಾಗಿದ್ದರೆ ಆತನ ಸ್ಥಿತಿ ಏನಾಗುತ್ತಿತ್ತು? ಭಾರತದ ಸಂವಿಧಾನಕ್ಕಿಂತ ದೇಶದ ಪ್ರಧಾನಿ ದೊಡ್ಡವರು ಎಂದು ಬಿಂಬಿಸಲು ಯತ್ನಿಸುತ್ತಿರುವ ಭಾರತದ ರಾಜಕೀಯ ನಾಯಕರಿಗೆ ಅಮೆರಿಕದ ಸುಪ್ರೀಂಕೋರ್ಟ್ ತೀರ್ಪನ್ನು ಸಂಭ್ರಮಿಸುವ ಯಾವ ನೈತಿಕತೆಯೂ ಇಲ್ಲ.
ಇನ್ನೊಂದು ಅಂಶವನ್ನೂ ನಾವಿಲ್ಲಿ ಗಮನಿಸಬೇಕು. ಟ್ರಂಪ್ ಸುಂಕಾಸ್ತ್ರದ ವಿರುದ್ಧದ ವಿಚಾರಣೆ ಅಮೆರಿಕದಲ್ಲಿ ತ್ವರಿತವಾಗಿ ನಡೆಯಿತು. ಒಂದು ಅಥವಾ ಎರಡು ವರ್ಷ ಕಳೆದು ಈ ತೀರ್ಪನ್ನು ನೀಡಿದ್ದರೆ ಅದು ಭಾರತದ ಪಾಲಿಗೆ ಸಾಕಷ್ಟು ನಷ್ಟಗಳನ್ನುಂಟು ಮಾಡುತ್ತಿತ್ತು ಮಾತ್ರವಲ್ಲ, ಟ್ರಂಪ್‌ರ ಸರ್ವಾಧಿಕಾರದ ರೆಕ್ಕೆಗೆ ಇನ್ನಷ್ಟು ಬಲ ಬಂದು ಬಿಡುತ್ತಿತ್ತು. ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ಭಾರೀ ದುಷ್ಪರಿಣಾಮ ಬೀರಿ ಆಗಿ ಬಿಡುತ್ತಿತ್ತು. ಆದರೆ ಭಾರತದ ಸುಪ್ರೀಂಕೋರ್ಟ್‌ನ ಸ್ಥಿತಿಯನ್ನು ಗಮನಿಸೋಣ. ಭಾರತ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇಡೀ ದೇಶ ಒಂದಾಗಿ ಪ್ರತಿಭಟನೆ ಮಾಡಿತ್ತು. ಇದರ ವಿರುದ್ಧ ಧ್ವನಿಯೆತ್ತಿದ ಕಾರಣಕ್ಕಾಗಿಯೇ ಹಲವು ಅಮಾಯಕರು ಹಲವು ವರ್ಷಗಳಿಂದ ಜೈಲು ಕಂಬಿ ಎಣಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಂವಿಧಾನ ಬದ್ಧವಾಗಿ ಈ ಕಾಯ್ದೆಯನ್ನು ಪ್ರಶ್ನಿಸಲು ಹಲವರು ಸುಪ್ರೀಂಕೋರ್ಟ್ ಮೊರೆ ಹೋದರು. ಆದರೆ ಈವರೆಗೆ ಇನ್ನೂ ಈ ಅರ್ಜಿಗಳನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿಲ್ಲ. 2024ರ ಮಾರ್ಚ್ ತಿಂಗಳಲ್ಲಿ ಪಟ್ಟಿ ಮಾಡಲಾದ ಅರ್ಜಿಗಳನ್ನು ಇದೀಗ ಮುಂದಿನ ತಿಂಗಳ ಮೇ 5ರಿಂದ ಆರಂಭಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಕಾಶ್ಮೀರದ ಕುರಿತಂತೆ , ಎಸ್‌ಐಆರ್‌ನ ಕುರಿತಂತೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳ ಗತಿ ಏನಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಇಂದು ನ್ಯಾಯಾಲಯದ ತೀರ್ಪಿನಲ್ಲಿ ಸಾರ್ವಜನಿಕ ಒತ್ತಡಗಳು ಪರಿಣಾಮ ಬೀರುತ್ತಿವೆ. ಅವುಗಳ ಮುಂದೆ ಸಂವಿಧಾನಕ್ಕೆ ಹಿನ್ನಡೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಮಗೆ ಮಾದರಿಯಾಗಬೇಕಾಗಿದೆ.
ಇದೇ ಸಂದರ್ಭದಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ತೀರ್ಪಿನಿಂದ ಎಲ್ಲ ಸರಿಯಾಗಿದೆ ಎಂದು ಅರ್ಥವಲ್ಲ. ಇದಾದ ಬಳಿಕವೂ ಶೇ. 15ರ ಸುಂಕವನ್ನು ಟ್ರಂಪ್ ಉಳಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕದ ಉತ್ಪನ್ನಗಳು ಯಥೇಚ್ಛವಾಗಿ ಭಾರತದ ಮಾರುಕಟ್ಟೆಗೆ ದಾಳಿ ಮಾಡಲು ಅವಕಾಶಗಳಿವೆ. ಅಮೆರಿಕದ ಸುಪ್ರೀಂಕೋರ್ಟ್ ತೀರ್ಪಿನ ಬೆಳಕಿನಲ್ಲಿ ಭಾರತ-ಅಮೆರಿಕ ನಡುವಿನ ಒಪ್ಪಂದ ಮತ್ತೆ ಪರಿಶೀಲನೆಗೆ ಒಳಪಡಬೇಕಾಗಿದೆ. ಪ್ರಧಾನಿ ಮೋದಿಯವರು ಟ್ರಂಪ್ ಒತ್ತಡಗಳಿಗೆ ಮಣಿಯದೆ ಭಾರತದ ಹಿತಾಸಕ್ತಿಯನ್ನು ಎತ್ತಿ ಹಿಡಿಯಲು ಇನ್ನಾದರೂ ಧೈರ್ಯವನ್ನು ಪ್ರದರ್ಶಿಸ ಬೇಕಾಗಿದೆ.