ಸಿನೆಮಾ ಮಾಧ್ಯಮಗಳ ಮೂಲಕ ದಕ್ಷಿಣ ಭಾರತೀಯರ ಮೇಲೆ ದಾಳಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಹಿಂದೆ ಮಾಧ್ಯಮಗಳ ಮೂಲಕ ಕೆಲವು ಹಿತಾಸಕ್ತಿಗಳು ‘ಗುಜರಾತ್ ಮಾದರಿ’ಯನ್ನು ಹರಿಯಬಿಟ್ಟಿದ್ದವು. ಬಡತನ, ಅನಕ್ಷರತೆ, ಅಪೌಷ್ಟಿಕತೆಯ ಕ್ಷೇತ್ರದಲ್ಲಿ ಗುಜರಾತ್ ಗುರುತಿಸಲ್ಪಡುತ್ತಾ ಬರುತ್ತಿದೆಯಾದರೂ ಇವೆಲ್ಲವನ್ನು ಮರೆ ಮಾಚಿ ಗುಜರಾತ್‌ನ ಅಭಿವೃದ್ಧಿಯನ್ನು ವೈಭವೀಕರಿಸಿ ಜನರ ಮುಂದಿಡುವಲ್ಲಿ ಮಾಧ್ಯಮಗಳು ಯಶಸ್ವಿಯಾಗಿದ್ದವು. ‘ಗುಜರಾತ್ ಮಾದರಿ’ ಎನ್ನುವ ಅಭಿವೃದ್ಧಿಯ ತುತ್ತೂರಿಯನ್ನು ಊದುವುದರ ಹಿಂದೆ ಪ್ರಧಾನಿ ಮೋದಿಯವರನ್ನು ಅಧಿಕಾರಕ್ಕೇರಿಸುವ ರಾಜಕೀಯ ಉದ್ದೇಶ ಮಾತ್ರವಲ್ಲ, ಅದಾನಿ, ಅಂಬಾನಿಗಳಂತಹ ಕಾರ್ಪೊರೇಟ್‌ಗಳನ್ನು ಪೋಷಿಸುವ ದುರುದ್ದೇಶವೂ ಇತ್ತು. ನಿಜಕ್ಕೂ ದೇಶಕ್ಕೆ ಮಾದರಿಯಾಗಬೇಕಾದ ಅಭಿವೃದ್ಧಿಯ ಪರಿಕಲ್ಪನೆಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿದ್ದವು. ಸಾಕ್ಷರತೆ, ಐಟಿ ಬಿಟಿ, ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಸಾಧಿಸಿರುವ ಸಾಧನೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದವು. ಇಂದಿಗೂ ಕರ್ನಾಟಕ ರಾಜ್ಯ ಜಾರಿಗೊಳಿಸುತ್ತಿರುವ ಹಲವು ಯೋಜನೆಗಳನ್ನು ಉತ್ತರ ಭಾರತದ ರಾಜ್ಯಗಳು ಮಾದರಿಯಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿವೆ. ಯಾವಾಗ ‘ಗುಜರಾತ್ ಮಾದರಿ’ ತುತ್ತೂರಿಯ ಬಣ್ಣ ಕರಗಲು ಆರಂಭಿಸಿತೋ ಆಗ, ಉತ್ತರ ಭಾರತದ ಹುಳುಕುಗಳನ್ನು ಮರೆ ಮಾಚಲು ದಕ್ಷಿಣ ಭಾರತದ ರಾಜ್ಯಗಳ ವಿರುದ್ಧ ಅಪಪ್ರಚಾರಗಳನ್ನು ಮಾಡತೊಡಗಿತು. ಈ ಕೆಲಸಕ್ಕಾಗಿಯೇ ಕೇಂದ್ರ ಸರಕಾರ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿತು. ಹಾಗೆಯೇ ‘ಸಿನೆಮಾ’ ಮಾಧ್ಯಮವನ್ನು ದಕ್ಷಿಣ ಭಾರತೀಯ ವಿರುದ್ಧ ಬಳಸಲು ಮುಂದಾಯಿತು. ಪರಿಣಾಮವಾಗಿ ‘ಕೇರಳ ಸ್ಟೋರಿ’ಯಂತಹ ಮೂರನೇ ದರ್ಜೆಯ ಚಿತ್ರಗಳಿಗೆ ಕೆಲವು ಶಕ್ತಿಗಳು ದುಡ್ಡು ಸುರಿಯತೊಡಗಿವೆ. ಸಂಘಪರಿವಾರದ ದ್ವೇಷ ಸಿದ್ಧಾಂತದ ವಿರುದ್ಧ ತೀವ್ರ ಪ್ರತಿರೋಧಗಳನ್ನು ವ್ಯಕ್ತಪಡಿಸಿದ ಪಶ್ಚಿಮ ಬಂಗಾಳದ ವಿರುದ್ಧ ‘ಬಂಗಾಳಿ ಫೈಲ್ಸ್’ ಹೊರ ಬಿದ್ದರೆ, ಕೇರಳದ ವಿರುದ್ಧ ‘ಕೇರಳ ಸ್ಟೋರಿ’ ಸಿನೆಮಾಗಳನ್ನು ಮಾಡಿದರು. ಈ ಹಿಂದೆ ಕಾಶ್ಮೀರ ಫೈಲ್ಸ್ ಮೂಲಕ ಕಾಶ್ಮೀರದ ಅಳಿದುಳಿದ ಶಾಂತಿ, ನೆಮ್ಮದಿಯನ್ನು ಕೆಡಿಸಲು ಪ್ರಯತ್ನಿಸಿದ ಮಂದಿಯೇ ಇದೀಗ ದಕ್ಷಿಣ ಭಾರತದ ಕಡೆಗೆ ಸಿನೆಮಾಗಳ ಮೂಲಕ ದ್ವೇಷ ಅಭಿಯಾನಕ್ಕೆ ಹೊರಟಿದ್ದಾರೆ. ಇಡೀ ರಾಜ್ಯವನ್ನೇ ‘ಅಪರಾಧಿ’ಯನ್ನಾಗಿ ಚಿತ್ರಿಸುವ ಈ ಪ್ರಯತ್ನಕ್ಕೆ ಕೇಂದ್ರ ಸರಕಾರ ಕುಮ್ಮಕ್ಕು ನೀಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇದು ನಿಧಾನಕ್ಕೆ ರಾಜ್ಯಗಳ ನಡುವಿನ ಬಿರುಕನ್ನು ಹೆಚ್ಚಿಸುವ ಸಾಧ್ಯತೆಗಳಿವೆ.
ಸದ್ಯ ಸುದ್ದಿಯಲ್ಲಿರುವ ‘ದಿ ಕೇರಳ ಸ್ಟೋರಿ 2’ ಚಿತ್ರದ ಬಗ್ಗೆ ಕೇರಳದಲ್ಲಿ ಬಿಜೆಪಿಯ ಮುಖಂಡರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ‘‘ಈ ಚಿತ್ರವನ್ನು ನೋಡುವುದಕ್ಕೆ ಯಾವ ಆಸಕ್ತಿಯೂ ಇಲ್ಲ’’ ಎಂದಿದ್ದಾರೆ. ಇದರ ಬೆನ್ನಿಗೇ ಕೇರಳ ಹೈಕೋರ್ಟ್ ಚಿತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ‘ಕೇರಳವು ಸಾಮರಸ್ಯದಿಂದ ಬದುಕುತ್ತಿದೆ. ಸಿನೆಮಾದಲ್ಲಿ ತಪ್ಪು ಚಿತ್ರಣವಿದೆ’’ ಎಂದು ಅಭಿಪ್ರಾಯಪಟ್ಟಿದೆ. ದಕ್ಷಿಣ ಭಾರತದಲ್ಲಿ ಹಸಿರಾಗಿರುವ ಸೌಹಾರ್ದ ಬದುಕಿನ ಮೇಲೆ ದಾಳಿ ನಡೆಸುವ ಏಕೈಕ ಉದ್ದೇಶದಿಂದ ಉತ್ತರ ಭಾರತದ ಕೆಲವು ಶಕ್ತಿಗಳು ಈ ಸರಣಿ ಚಿತ್ರವನ್ನು ತಯಾರಿಸಿವೆ. ಉತ್ತರ ಭಾರತವು ಅಭಿವೃದ್ಧಿ, ಆರೋಗ್ಯ, ಪೌಷ್ಟಿಕತೆ, ಶಿಕ್ಷಣದಲ್ಲಿ ಅನುಭವಿಸುತ್ತಿರುವ ಹಿನ್ನಡೆ ಮತ್ತು ದಕ್ಷಿಣ ಭಾರತದ ರಾಜ್ಯಗಳು ಎಲ್ಲ ವಲಯಗಳಲ್ಲಿ ಸಾಧಿಸುತ್ತಿರುವ ಮುನ್ನ್ನಡೆಯನ್ನು ಸಹಿಸಲು ಸಿದ್ಧವಿಲ್ಲದ ರಾಜಕೀಯ ಮನಸ್ಥಿತಿಗಳು ಸಾಂಸ್ಕೃತಿಕ ವಲಯದ ಸಹಾಯ ಪಡೆದು ಈ ಸಿನೆಮಾಗಳಿಗೆ ಹಣ ಹೂಡಿಕೆ ಮಾಡುತ್ತಿವೆೆ. ಈ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಗೆ ಇನ್ನಷ್ಟ್ಟು ಆಳವಾದ ಗಾಯಗಳನ್ನು ಮಾಡುತ್ತಿವೆೆ. ಈಗಾಗಲೇ ದಕ್ಷಿಣ ಭಾರತೀಯರ ಕುರಿತಂತೆ ಉತ್ತರ ಭಾರತೀಯರಿಗೆ ಇರುವ ಪೂರ್ವಾಗ್ರಹಗಳನ್ನು ಈ ಚಿತ್ರ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಮಾತ್ರವಲ್ಲ, ಉತ್ತರದ ರಾಜ್ಯಗಳನ್ನು ನಾಶ ಮಾಡುತ್ತಿರುವ ದ್ವೇಷದ ವೈರಸ್‌ಗಳನ್ನು ದಕ್ಷಿಣ ಭಾರತಕ್ಕೂ ಹರಡುವ ದುರುದ್ದೇಶವನ್ನು ಹೊಂದಿದೆ.
ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಒಂದಲ್ಲ ಒಂದು ರೀತಿಯಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಮಾದರಿಯಾಗಿವೆ. ಆಂಧ್ರ, ಕರ್ನಾಟಕ ಐಟಿ ಬಿಟಿಗಳ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುತ್ತಿವೆೆ. ಸಾಕ್ಷರತೆ, ಆರೋಗ್ಯ, ಪೌಷ್ಟಿಕತೆಯ ವಿಷಯದಲ್ಲಿ ಕೇರಳ ರಾಜ್ಯ ಸಾಧಿಸಿರುವ ಸಾಧನೆಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಒಂದು ಕಾಲವಿತ್ತು. ಕೇರಳಕ್ಕೆ ಭೇಟಿ ನೀಡಿದ ಸ್ವಾಮಿ ವಿವೇಕಾನಂದರು ಈ ರಾಜ್ಯವನ್ನು ‘ಜಾತೀವಾದಿಗಳ ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು. ಇಲ್ಲಿನ ಜಾತೀಯತೆಗೆ ರೋಸಿ ಈ ಮಾತುಗಳನ್ನು ಆಡಿದ್ದರು. ಕೇರಳ ರಾಜ್ಯವು ಮನುವಾದಿಗಳ ಕೈಯಲ್ಲಿ ಸಿಲುಕಿಕೊಂಡಿದ್ದಾಗ, ನಂಬೂದಿರಿಗಳು ಕೇರಳ ಸಮಾಜವನ್ನು ನಿಯಂತ್ರಿಸುತ್ತಿದ್ದಾಗ ‘ಕೇರಳ ಸ್ಟೋರಿ’ ಅತ್ಯಂತ ಭಯಾನಕವಾಗಿತ್ತು. ಒಂದು ಕಾಲದಲ್ಲಿ, ಈಳವ ಮತ್ತು ಕೆಳಜಾತಿಯ ಮಹಿಳೆಯರು ತಮ್ಮ ಸ್ತನವನ್ನು ಬಟ್ಟೆಯಿಂದ ಮುಚ್ಚಬೇಕಿದ್ದರೂ ತೆರಿಗೆ ಪಾವತಿ ಮಾಡಬೇಕಾದ ಸ್ಥಿತಿಯಿತ್ತು. ಆದರೆ ನಾರಾಯಣ ಗುರುಗಳು, ಮಾಲಿಕ್ ದೀನಾರ್‌ರಂತಹ ಸೂಫಿಸಂತರು ಹಾಗೆಯೇ ಕಮ್ಯುನಿಸ್ಟ್ ಚಳವಳಿಗಳು ಕೇರಳದ ಸಮಾಜವನ್ನು ಮನುಷ್ಯರು ವಾಸಿಸುವುದಕ್ಕೆ ಅರ್ಹವಾಗುವಂತೆ ಮಾಡಿದವು. ಹಲವು ಜನಪರ ಹೋರಾಟ, ಕ್ರಾಂತಿಯ ಫಲವಾಗಿಯೇ ಇಂದು ಕೇರಳವು ದೇಶಕ್ಕೆ ಮಾದರಿಯಾಗುವಂತಿದೆ. ಆಕಾರದಲ್ಲಿ ಕೇರಳ ಕಿರಿದಾಗಿದ್ದರೂ ರಾಜ್ಯದ ಒಟ್ಟು ಉತ್ಪನ್ನದಲ್ಲಿ ದೇಶದಲ್ಲೇ ಆರನೇ ಸ್ಥಾನವನ್ನು ಪಡೆದಿದೆ. 2013ನೇ ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ ಗೋವಾವನ್ನು ಹೊರತು ಪಡಿಸಿದರೆ ಕೇರಳವು ಭಾರತದಲ್ಲಿ ಎರಡನೇ ಕಡಿಮೆ ಬಡತನವುಳ್ಳ ರಾಜ್ಯವಾಗಿದೆ. ಕೇರಳವು ಭಾರತದ ಜಿಡಿಪಿಗೆ ಶೇ. 4ಕ್ಕಿಂತ ಹೆಚ್ಚು ಕೊಡುಗೆಗಳನ್ನು ನೀಡುತ್ತಿದೆ.
ಹಿಂದೂ, ಮುಸ್ಲಿಮ್, ಕ್ರೈಸ್ತರು ಅತ್ಯಂತ ಹೆಚ್ಚು ಸೌಹಾರ್ದವಾಗಿ ಬಾಳುತ್ತಿರುವ, ಬದುಕುತ್ತಿರುವ ಒಂದು ರಾಜ್ಯವಿದ್ದರೆ ಅದು ಕೇರಳವಾಗಿದೆ. ಉತ್ತರ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ದೇಶಾದ್ಯಂತ ದ್ವೇಷ ರಾಜಕೀಯ ಅಭಿಯಾನ ನಡೆಸುತ್ತಿರುವ ಆರೆಸ್ಸೆಸ್‌ಗೆ ದಕ್ಷಿಣ ಭಾರತಕ್ಕೆ ಕಾಲಿಡಲು ಅತಿ ದೊಡ್ಡ ತಡೆ ಕೇರಳವಾಗಿದೆ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಅತ್ಯುನ್ನತ ಮಟ್ಟದಲ್ಲಿರುವ ಕೇರಳವು, ಜಾತಿವಾದ, ಕೋಮುವಾದಗಳಿಗೆ ಸಾಂಸ್ಕೃತಿಕವಾಗಿ ತೀವ್ರ ಪ್ರತಿರೋಧವನ್ನು ಒಡ್ಡುತ್ತಾ ಬಂದಿದೆ. ಕೇರಳವನ್ನು ಒಂದು ಕಾಲದಲ್ಲಿ ಹುಚ್ಚಾಸ್ಪತ್ರೆಯನ್ನಾಗಿಸಿದ ಶಕ್ತಿಗಳು ಇದೀಗ ಆರೆಸ್ಸೆಸ್ ವೇಷದಲ್ಲಿ ಮತ್ತೆ ಕೇರಳದ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಅದರ ಭಾಗವಾಗಿಯೇ ಕೇರಳಸ್ಟೋರಿಯಂತಹ ಕತೆಗಳನ್ನು ಹೆಣೆದು ಅದನ್ನು ಹಂಚುವುದಕ್ಕೆ ಹೊರಟಿವೆ.
ಇಂದು ಉದ್ಯೋಗ ಅರಸಿಕೊಂಡು ಸಾಲು ಸಾಲು ಜನರು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಬರುತ್ತಿದ್ದಾರೆ. ಗುಂಪುಹತ್ಯೆ, ಜನಾಂಗೀಯ ದ್ವೇಷ, ಬಡತನ, ಅನಕ್ಷರತೆ, ಮೌಢ್ಯ ಇತ್ಯಾದಿಗಳಿಗಾಗಿ ಉತ್ತರ ಪ್ರದೇಶದಂತಹ ರಾಜ್ಯಗಳು ಮುಂಚೂಣಿಯಲ್ಲಿವೆ. ಜನಾಂಗೀಯ ಹತ್ಯೆಗಳು, ಜಾತಿ ದೌರ್ಜನ್ಯಗಳು ಉತ್ತರ ಭಾರತದಲ್ಲಿ ನಡೆಯುವಷ್ಟು ದಕ್ಷಿಣ ಭಾರತದಲ್ಲಿ ನಡೆಯುತ್ತಿಲ್ಲ. ಇವೆಲ್ಲ ಯಾಕೆ ಸಂಭವಿಸುತ್ತಿವೆ, ವರ್ಷದಿಂದ ವರ್ಷಕ್ಕೆ ಉತ್ತರ ಭಾರತದ ಸ್ಥಿತಿ ಯಾಕೆ ಚಿಂತಾಜನಕವಾಗುತ್ತಿದೆ ಎಂಬ ಪ್ರಶ್ನೆಗಳಿಗೆ ತಮ್ಮ ಸಿನೆಮಾಗಳ ಉತ್ತರ ಹುಡುಕುವ ಕೆಲಸವನು ಉತ್ತರ ಭಾರತದ ಸಾಂಸ್ಕೃತಿಕ ವಲಯ ಮಾಡಬೇಕಾಗಿದೆ. ಕೇರಳವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳನ್ನು ಮಾದರಿಯಾಗಿಸಿ ಉತ್ತರ ಭಾರತವನ್ನು ಮರು ನಿರ್ಮಿಸುವ ಬಗ್ಗೆ ಯೋಚಿಸಬೇಕಾಗಿದೆ.