ಶೇಕಡ 47ರಷ್ಟು ಶಾಲೆಗಳಲ್ಲಿ ಮಾತ್ರ ಕೌಶಲ ಆಧರಿತ ಕೋರ್ಸ್ ಗಳು: ಸರ್ಕಾರಿ ಅಧ್ಯಯನದಿಂದ ಬಹಿರಂಗ
PC: istockphoto
ಹೊಸದಿಲ್ಲಿ: ದೇಶದ ಅರ್ಧಕ್ಕಿಂತ ಕಡಿಮೆ ಶಾಲೆಗಳಲ್ಲಿ ಮಾತ್ರ 9ನೇ ತರಗತಿ ಮತ್ತು ಆ ಬಳಿಕದ ಕಲಿಕೆಯಲ್ಲಿ ಕೌಶಲ ಆಧರಿತ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂಬ ಅಂಶ ಸರ್ಕಾರಿ ಅಧ್ಯಯನದಿಂದ ಬಹಿರಂಗವಾಗಿದೆ. ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಮಟ್ಟದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಗಮನ ಹರಿಸುತ್ತಿಲ್ಲ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ. ಈ ಕೋರ್ಸ್ ಗಳನ್ನು ತೆಗೆದುಕೊಳ್ಳುವವರು ಮತ್ತೂ ಕಡಿಮೆ.
ಎನ್‌ಸಿಇಆರ್‌ಟಿಯ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ ನಡೆಸಿದ ಪರಾಖ್ ರಾಷ್ಟ್ರೀಯ ಸರ್ವೇಕ್ಷಣ-2024 ಅಧ್ಯಯನದ ಪ್ರಕಾರ, ಈ ತರಗತಿಗಳಲ್ಲಿ ಶೇಕಡ 47ರಷ್ಟು ಶಿಕ್ಷಣ ಸಂಸ್ಥೆಗಳು ಮಾತ್ರ ಕೌಶಲ ಆಧರಿತ ಕೋರ್ಸ್ ಗಳನ್ನು ನೀಡುತ್ತವೆ. 9ನೇ ತರಗತಿ ಮತ್ತು ಮೇಲಿನ ತರಗತಿಗಳಲ್ಲಿ ಈ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಶೇಕಡ 29 ಆಗಿದೆ.
ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಕಿಲ್ ಇಂಡಿಯಾ ಮಿಷನ್ ಅಡಿ ನಡೆಯುತ್ತಿರುವ ಜಾಗೃತಿ ಮತ್ತು ಲಭ್ಯತೆಯಲ್ಲಿ ಭಾರಿ ಅಂತರವನ್ನು ಸೂಚಿಸುತ್ತಿದೆ. ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾದ ಕೌಶಲಯುಕ್ತ ಉದ್ಯೋಗಾಂಕ್ಷಿಗಳನ್ನು ತಯಾರು ಮಾಡುವ ಉದ್ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ.
ಇಪ್ಪತ್ತೊಂದನೇ ಶತಮಾನದಲ್ಲಿ ಬದಲಾಗುತ್ತಿರುವ ಶ್ರಮಶಕ್ತಿಯ ಅಗತ್ಯತೆಗಳನ್ನು ಕಲಿಕಾರ್ಥಿಗಳು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಅಗತ್ಯ ಎಂದು ವರದಿ ಸ್ಪಷ್ಟಪಡಿಸಿದೆ.
ವೈವಿಧ್ಯಮಯ ವಲಯಗಳಿಗೆ ನಿರ್ದಿಷ್ಟವಾದ ಕೋರ್ಸ್ ಗಳನ್ನು ಪರಿಚಯಿಸುವುದು, ಉದ್ಯಮದ ಜತೆಗೆ ಪ್ರಬಲ ಬಂಧವನ್ನು ಅಭಿವೃದ್ಧಿಪಡಿಸುವುದು, ಕೌಶಲ ಆಧರಿತ ಶಿಕ್ಷಣ ನೀಡುವ ಶಾಲೆಗಳಿಗೆ ಉತ್ತಮ ಅನುದಾನ ಮತ್ತು ಮೂಲಸೌಕರ್ಯದ ನೆರವು ಒದಗಿಸುವುದು ಅಗತ್ಯ ಎಂದು ಅಧ್ಯಯನ ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ಕೌಶಲ ಅಭಿವೃದ್ಧಿಯನ್ನು ಬೆಂಬಲಿಸಲು ಎನ್‌ಸಿಇಆರ್‌ಟಿ ಅಧೀನದ ಅತ್ಯುನ್ನತ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಾದ ಪಂಡಿತ್ ಸುರೇಂದ್ರಲಾಲ್ ಶರ್ಮಾ ಕೇಂದ್ರೀಯ ವೃತ್ತಿಶಿಕ್ಷಣ ಸಂಸ್ಥೆ ಪಟ್ಟಿ ಮಾಡಿದ ಸಂಪನ್ಮೂಲಗಳನ್ನು ಬಳಸುವ ಮೂಲಕ ಉದ್ಯೋಗಾರ್ಹತೆಯನ್ನು ಹೆಚ್ಚಿಸಬಹುದು ಎಂದು ವರದಿ ಸಲಹೆ ಮಾಡಿದೆ. ಕೃತಕ ಬುದ್ಧಿಮತ್ತೆಗೆ ಗಮನ ಹರಿಸುವ ಪರಾಖ್ ಉದ್ಯಮ್ ಸಂಸಾರ್‌ನಂಥ ಉಪಕ್ರಮಗಳನ್ನು ಜನಪ್ರಿಯಗೊಳಿಸಲೂ ಶಿಫಾರಸ್ಸು ಮಾಡಿದೆ.
ದೇಶಾದ್ಯಂತ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ 781 ಜಿಲ್ಲೆಗಳ 74229 ಶಾಲೆಗಳಲ್ಲಿ ಅಧ್ಯಯನ ನಡೆಸಲಾಗಿದ್ದು, 21 ಲಕ್ಷ ವಿದ್ಯಾರ್ಥಿಗಳನ್ನು ಸಮೀಕ್ಷಿಸಲಾಗಿದೆ.