ಉತ್ತರ ಕನ್ನಡ ಜಿಲ್ಲೆಯ ಅತಿದೊಡ್ಡ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ; 19 ಮಂದಿಯ ಬಂಧನ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಅತಿದೊಡ್ಡ ಇಸ್ಪೀಟ್ ಅಡ್ಡೆ ಮೇಲಿನ ದಾಳಿಯಲ್ಲಿ, ಶಿರಸಿ ತಾಲ್ಲೂಕಿನ ಭೈರುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗಸಾಲ ಗ್ರಾಮದಲ್ಲಿರುವ ಹೋಮ್ ಸ್ಟೇ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬರೋಬ್ಬರಿ 49.50 ಲಕ್ಷ ನಗದು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಅಕ್ರಮ ಜೂಜಾಟದಲ್ಲಿ ಭಾಗಿಯಾಗಿದ್ದ 19 ಜನರನ್ನು ಬಂಧಿಸಲಾಗಿದೆ.
ಚಳ್ಳಕೆರೆಯ ಕಡ್ಲೆಗುಂದಿ ಅನಿಲ್ ಕುಮಾರ್ ರೆಡ್ಡಿ, ಹಾವೇರಿಯ ಭೀರಪ್ಪ, ಕೆರೆಗೌಡ, ಶಂಕರ್ ಗೌಡ, ನಾಗರಾಜ್ ರಿತ್ತಿ, ಪ್ರದೀಪ, ಪ್ರಶಾಂತ್, ಝಿಯಾವುಲ್ಲಾ, ರೇವಣಸಿದ್ದಪ್ಪ, ಬಿರೇಶ್, ದಾವಣಗೆರೆಯ ಬಸವರಾಜ, ಚಮನ್ ಸಾಬ್, ಪ್ರಕಾಶ್, ಈಶಪ್ಪ, ವೀರಬಸಪ್ಪ, ಸಂತೋಷ್ ಸೇರಿದಂತೆ ಒಟ್ಟು 19 ಮಂದಿ ಬಂಧಿತರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯನ್ನು ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಮತ್ತು ಪಿಎಸ್‌ಐ ಅಶೋಕ್ ರಾಠೋಡ್ ನೇತೃತ್ವದ ತಂಡ ಬುಧವಾರ ರಾತ್ರಿ ಸುಮಾರಿಗೆ ನಡೆಸಿದೆ. ವಿ.ಆರ್.ಆರ್. ಹೋಮ್ ಸ್ಟೇನಲ್ಲಿ "ಅಂದರ್-ಬಾಹರ್" ಜೂಜಾಟ ಅಕ್ರಮವಾಗಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಪೊಲೀಸ್ ತಂಡ ದಾಳಿ ನಡೆಸಿದಾಗ, ಹಾವೇರಿ, ದಾವಣಗೆರೆ, ಚಳ್ಳಕೆರೆ ಮತ್ತು ಅನವಟ್ಟಿ ಸೇರಿದಂತೆ ವಿವಿಧ ಪ್ರದೇಶಗಳ ಸಿರಿವಂತರು ಹೋಮ್ ಸ್ಟೇನಲ್ಲಿ ಜೂಜಾಟದಲ್ಲಿ ತೊಡಗಿದ್ದರು. ಬಂಧಿತರಿಂದ 49.50 ಲಕ್ಷ ನಗದು ಮಾತ್ರವಲ್ಲದೆ, ಟೊಯೋಟಾ, ಹೋಂಡಾ, ಕಿಯಾ ಕಂಪನಿಗಳ ದುಬಾರಿ ಕಾರುಗಳು, 18 ಐಫೋನ್‌ಗಳು ಸೇರಿದಂತೆ ಬೆಲೆಬಾಳುವ ಮೊಬೈಲ್ ಫೋನ್‌ಗಳು, ಇಸ್ಪೀಟ್ ಎಲೆಗಳು ಮತ್ತು ಜಮಖಾನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.